ಪ್ರತಿಭಟನೆಗೆ ಚಿಕ್ಕ ಮಕ್ಕಳನ್ನು ಕರೆದೊಯ್ಯುವ ಪೋಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಕೇರಳ ಹೈಕೋರ್ಟ್

ಚಿಕ್ಕ ವಯಸ್ಸಿನಲ್ಲಿ ಪ್ರತಿಭಟನೆ ಮತ್ತು ಧರಣಿಗಳಿಗೆ ಹಾಜರಾಗುವಂತೆ ಮಾಡಿದರೆ ಮಕ್ಕಳು ಭಾವನಾತ್ಮಕ ಮತ್ತು ದೈಹಿಕ ತೊಂದರೆ ಅನುಭವಿಸುತ್ತಾರೆ ಎಂದು ನ್ಯಾಯಾಲಯ ತಿಳಿಸಿದೆ.
Kerala High Court
Kerala High Court
Published on

ಸಣ್ಣ ಮಕ್ಕಳನ್ನು ಪ್ರತಿಭಟನೆ ಇಲ್ಲವೇ ಆಂದೋಲನಗಳಿಗೆ ಕರೆದೊಯ್ಯುವ ಪೋಷಕರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಸುರೇಶ್ ಮತ್ತಿತರರು ಹಾಗೂ ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಪ್ರತಿಭಟನೆಗಳ ಬಗ್ಗೆ ಗಮನ ಸೆಳೆಯುವಂತೆ ಮಾಡುವುದಕ್ಕಾಗಿ ಸಣ್ಣ ಮಕ್ಕಳನ್ನು ಉದ್ದೇಶಪೂರ್ವಕವಾಗಿ ಪ್ರತಿಭಟನೆಯಲ್ಲಿ ತೊಡಗಿಸುವ ಪೋಷಕರ ವಿರುದ್ಧ ಕಾನೂನು ಜಾರಿ ಸಂಸ್ಥೆಗಳು ಕ್ರಮಕೈಗೊಳ್ಳಬೇಕು ಎಂದು ನ್ಯಾಯಮೂರ್ತಿ ಪಿ ವಿ ಕುಂಞಿಕೃಷ್ಣನ್ ತಿಳಿಸಿದ್ದಾರೆ.

Also Read
ರೈತರ ಪ್ರತಿಭಟನೆ ವೇಳೆ ಯುವ ಕೃಷಿಕನ ಸಾವು: ನ್ಯಾಯಾಂಗ ತನಿಖೆಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶ

" ಪ್ರತಿಭಟನೆಗಳ ಬಗ್ಗೆ ಗಮನ ಸೆಳೆಯುವಂತೆ ಮಾಡುವುದಕ್ಕಾಗಿ ಮಕ್ಕಳು ಎಳವೆಯಲ್ಲಿದ್ದಾಗ ಪ್ರತಿಭಟನೆ, ಸತ್ಯಾಗ್ರಹ, ಧರಣಿ ಇತ್ಯಾದಿಗಳಿಗೆ ಕರೆದೊಯ್ಯಲಾಗಿದೆ ಎಂದು ಕಾನೂನು ಜಾರಿ ಸಂಸ್ಥೆ ಕಂಡುಕೊಂಡರೆ  ಕಾನೂನಿನ ಪ್ರಕಾರ ಮುಂದುವರೆಯುವ ಎಲ್ಲ ಹಕ್ಕು ಸಂಸ್ಥೆಗೆ ಇದೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಚಿಕ್ಕಮಗುವಿಗೆ ಪ್ರತಿಭಟನೆ, ಸತ್ಯಾಗ್ರಹ, ಧರಣಿ ಇತ್ಯಾದಿಗಳ ಉದ್ದೇಶ  ತಿಳಿದಿರುವುದಿಲ್ಲ. ಬಾಲ್ಯದಲ್ಲಿ ಅವರು ತಮ್ಮ ಸ್ನೇಹಿತರೊಂದಿಗೆ ಆಟವಾಡಲು ಇಲ್ಲವೇ ಹಾಡಿ ಕುಣಿಯಲು ಅವಕಾಶ ಮಾಡಿಕೊಡಿ. ಇಂತಹ ಪ್ರತಿಭಟನೆ, ಸತ್ಯಾಗ್ರಹ, ಧರಣಿ ಇತ್ಯಾದಿಗಳಿಗೆ ಮಗುವನ್ನು ಕರೆದುಕೊಂಡು ಹೋದರೆ, ಕಾನೂನು ಜಾರಿ ಅಧಿಕಾರಿಗಳು ಕಠಿಣ ಕ್ರಮಕೈಗೊಳ್ಳಬೇಕು ” ಎಂದು ನ್ಯಾಯಾಲಯ ಹೇಳಿದೆ.

ಚಿಕ್ಕ ಮಕ್ಕಳನ್ನು ಪ್ರತಿಭಟನೆ ಅಥವಾ ಧರಣಿಗಳಿಗೆ ಕರೆದೊಯ್ದಾಗ, ತೀವ್ರವಾದ ಪರಿಸ್ಥಿತಿಗಳಿಗೆ ಒಡ್ಡಿಕೊಳ್ಳುವಂತಾಗಿ ಅವರಿಗೆ ಭಾವನಾತ್ಮಕ ಮತ್ತು ದೈಹಿಕ ಹಾನಿ ಉಂಟಾಗುತ್ತದೆ ಎಂದು ನ್ಯಾಯಾಲಯ ವಿವರಿಸಿದೆ.

"ನೈರ್ಮಲ್ಯವಿಲ್ಲದ ಮತ್ತು ಜನದಟ್ಟಣೆ ಇರುವ ಪ್ರದೇಶಗಳಲ್ಲಿ ತಾಪಮಾನದ ವೈಪರೀತ್ಯಕ್ಕೆ ಒಡ್ಡಿಕೊಳ್ಳುವುದರಿಂದ ಮಕ್ಕಳಲ್ಲಿ ಅನಾರೋಗ್ಯ ಉಂಟಾಗಬಹುದು. ಆಂದೋಲನಗಳಿಂದ ಊಟ, ನಿದ್ರೆ, ಆಟ, ಶಿಕ್ಷಣ ಸೇರಿದಂತೆ ಮಗುವಿನ ದಿನಚರಿಗೆ ಅಡ್ಡಿ ಉಂಟುಮಾಡಬಹುದು. ಹಿಂಸೆ ನಡೆಯುವ ಸಾಧ್ಯತೆ ಇರುವ ಪ್ರತಿಭಟನೆ ಮಗುವಿಗೆ ದೈಹಿಕ ಹಾನಿಯ ಅಪಾಯವನ್ನುಂಟುಮಾಡುತ್ತದೆ, ಜೊತೆಗೆ ಭಾರೀ ಶಬ್ದ, ಜನಸಂದಣಿ ಮತ್ತು ಘರ್ಷಣೆಗಳು ಮಗುವಿಗೆ ಭಾವನಾತ್ಮಕ ಆಘಾತ ಉಂಟುಮಾಡಬಹುದು" ಎಂದು ಸೆಪ್ಟೆಂಬರ್ 24ರಂದು ನೀಡಿದ ಆದೇಶದಲ್ಲಿ ತಿಳಿಸಲಾಗಿದೆ.  

ಮೂರು ವರ್ಷದ ಮಗುವಿನ ಪೋಷಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಅರ್ಜಿದಾರರು ತಮ್ಮ ಮೂರು ವರ್ಷದ ಮಗುವನ್ನು ತಿರುವನಂತಪುರಂನಲ್ಲಿರುವ ರಾಜ್ಯ ಸಚಿವಾಲಯದ ಹೊರಗೆ ಬಿಸಿಲಿನ ಝಳದಲ್ಲಿ ಪ್ರತಿಭಟನೆಗೆ ಕರೆದೊಯ್ದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಾಪರಾಧ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ- 2000ರ ಸೆಕ್ಷನ್ 23ರ (ಮಕ್ಕಳ ಮೇಲಿನ ಕ್ರೌರ್ಯ) ಅಡಿಯಲ್ಲಿ ಪೋಷಕರನ್ನು ಬಂಧಿಸಲಾಗಿತ್ತು.

Also Read
ಆರ್ ಜಿ ಕರ್ ಘಟನೆ: ಪ್ರತಿಭಟನಾನಿರತ ವೈದ್ಯರು ಕರ್ತವ್ಯಕ್ಕೆ ಮರಳುವಂತೆ ಹೇಳಿದ ಸುಪ್ರೀಂ; ಟಿಎಂಸಿ, ಬಿಜೆಪಿಗೆ ಕಿವಿಮಾತು

ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷ್ಯದಿಂದ ತಮ್ಮ ಮೊದಲ ಮಗು ಅಸುನೀಗಿದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದ್ದ ಅರ್ಜಿದಾರರು ಆ ವೇಳೆ ತಮ್ಮ ಇನ್ನೊಂದು ಮಗುವನ್ನು ಪ್ರತಿಭಟನಾ ಸ್ಥಳಕ್ಕೆ ಕರೆದೊಯ್ದಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಮಗುವನ್ನು ಕಳೆದುಕೊಂಡ ಆಘಾತದಿಂದ ಪೋಷಕರು ಪ್ರತಿಭಟನೆ ನಡೆಸಿದ್ದು ಉದ್ದೇಶಪೂರ್ವಕವಾಗಿ ತಮ್ಮ ಇನ್ನೊಂದು ಮಗುವನ್ನು ಪ್ರತಿಭಟನೆಯಲ್ಲಿ ತೊಡಗಿಸಿರಲಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಲಯ ಅವರ ವಿರುದ್ಧದ ಪ್ರಕರಣ ರದ್ದುಪಡಿಸಿತು. ಆದರೆ ಉಳಿದವರು ಈ ತೀರ್ಪನ್ನು ಪೂರ್ವನಿದರ್ಶನವಾಗಿ ಪರಿಗಣಿಸಬಾರದು ಎಂದು ಎಚ್ಚರಿಕೆ ನೀಡಿದ ಅದು ಹಾಗೆ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿತು.

Kannada Bar & Bench
kannada.barandbench.com