ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವ ಚಿಲಿಯ ಮಸೂದೆಗೆ ಸಂಸತ್ ಒಪ್ಪಿಗೆ ನೀಡಿದ್ದು ಅಧ್ಯಕ್ಷ ಸೆಬಾಸ್ಟಿಯನ್ ಪಿನೆರಾ ಅವರು ಅದಕ್ಕೆ ಅಂಕಿತ ಹಾಕಿದ್ದಾರೆ. ಆ ಮೂಲಕ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಿದ ವಿಶ್ವದ 31ನೇ ರಾಷ್ಟ್ರವಾಗಿ ಚಿಲಿ ಹೊರಹೊಮ್ಮಿದೆ.
ಅಧ್ಯಕ್ಷರಿಂದ ಮತ್ತು ಚಿಲಿಯ ಸಂಸತ್ತಿನಿಂದ ದೊಡ್ಡಮಟ್ಟದಲ್ಲಿ ಅನುಮೋದನೆಗೊಂಡ ಈ ಕಾಯಿದೆ, ಸಲಿಂಗಿ ದಂಪತಿಗಳು ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಸಹ ಅನುವು ಮಾಡಿಕೊಡುತ್ತದೆ. " ಎಲ್ಲಾ ಮಕ್ಕಳು ತಂದೆ ಮತ್ತು ತಾಯಿಯೊಂದಿಗೆ ಅಥವಾ ಇಬ್ಬರು ಅಪ್ಪಂದಿರೊಂದಿಗೆ ಇಲ್ಲವೇ ಇಬ್ಬರು ಅಮ್ಮಂದಿರೊಂದಿಗೆ ಒಂದೇ ರೀತಿಯ ಹಕ್ಕುಗಳನ್ನು ಮತ್ತು ರಕ್ಷಣೆ ಪಡೆಯಲು ಈ ಹೊಸ ಕಾನೂನು ಅವಕಾಶ ಕಲ್ಪಿಸುತ್ತೆ" ಎಂದು ಪಿಯೆರಾ ಹೇಳಿದ್ದಾರೆ. ಕಾಯಿದೆ ಮಾರ್ಚ್ 2022 ರಿಂದ ಜಾರಿಗೆ ಬರಲಿದೆ.
ಭಾರತದಲ್ಲಿ ಸಲಿಂಗಕಾಮವನ್ನು ಅಪರಾಧೀಕರಿಸುವ ಐಪಿಸಿ ಸೆಕ್ಷನ್ 377ನ್ನು ಸುಪ್ರೀಂಕೋರ್ಟ್2018ರಲ್ಲಿ ರದ್ದುಪಡಿಸಿದೆ. ಆದರೂ ದೇಶದಲ್ಲಿ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವ ಯಾವುದೇ ಕಾನೂನು ಇನ್ನೂ ಜಾರಿಗೆ ಬಂದಿಲ್ಲ. ಇಂತಹ ವಿವಾಹಕ್ಕೆ ಮನ್ನಣೆ ನೀಡಬೇಕೆಂದು ಕೋರಿ ದೆಹಲಿ ಹೈಕೋರ್ಟ್‌ಗೆ ಸಲಿಂಗಿ ಜೋಡಿಯೊಂದು ಸಲ್ಲಿಸಿರುವ ಅರ್ಜಿಯ ವಿಚಾರಣೆ ಬಾಕಿ ಇದೆ.
ತನ್ನ ಸಂಗಾತಿಯನ್ನು ಆಕೆಯ ಪೋಷಕರು ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ದೂರು ನೀಡಿದ್ದ ತೃತೀಯಲಿಂಗಿ ವ್ಯಕ್ತಿಗೆ ಒಡಿಶಾ ಹೈಕೋರ್ಟ್ ನೆರವು ನೀಡಿತ್ತು. ಸಲಿಂಗಿಗಳು ಜೊತೆಯಾಗಿ ವಾಸಿಸುವುದು ಕಾನೂನುಬಾಹಿರ ಅಥವಾ ಅಪರಾಧವಲ್ಲ ಎಂದು ಉತ್ತರಾಖಂಡ ಹೈಕೋರ್ಟ್ ತಿಳಿಸಿತ್ತು. ಆದರೆ ಐಪಿಸಿ ಸೆಕ್ಷನ್ 377ರ ಅಡಿ ಸಲಿಂಗ ಕಾಮ ಅಪರಾಧವಲ್ಲದಿದ್ದರೂ ಸಲಿಂಗ ವಿವಾಹ ಮೂಲಭೂತ ಹಕ್ಕು ಇಲ್ಲ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.