ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಬಸವರಾಜನ್‌, ಪತ್ನಿ ಸೌಭಾಗ್ಯ ಜಾಮೀನು ತಿರಸ್ಕರಿಸಿದ ಚಿತ್ರದುರ್ಗ ನ್ಯಾಯಾಲಯ

ಬಸವರಾಜನ್‌, ಸೌಭಾಗ್ಯ, ಬಸವರಾಜೇಂದ್ರ ದೇವರು ಮತ್ತು ಗಾಯತ್ರಿ ಅವರ ವಿರುದ್ಧ ಚಿತ್ರದುರ್ಗದ ಗ್ರಾಮಾಂತರ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 120ಬಿ, 366ಎ, 384 ಜೊತೆಗ 34ರ ಅಡಿ ಎಫ್‌ಐಆರ್‌ ದಾಖಲಾಗಿದೆ.
Chitradurga District court and S K Basavarajan
Chitradurga District court and S K Basavarajan

ಚಿತ್ರದುರ್ಗದ ಮುರುಘಾ ಮಠದ ಮಕ್ಕಳ ಅಪಹರಣ ಮತ್ತು ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ಮಠದ ಮಾಜಿ ಆಡಳಿತಾಧಿಕಾರಿ ಹಾಗೂ ಮಾಜಿ ಶಾಸಕ ಎಸ್‌ ಕೆ ಬಸವರಾಜ್‌ ಹಾಗೂ ಮಠದ ಶಾಲೆಯ ಶಿಕ್ಷಕ ಬಸವರಾಜೇಂದ್ರ ದೇವರು ಅವರ ಜಾಮೀನು ಅರ್ಜಿಯನ್ನು ಚಿತ್ರದುರ್ಗದ ಪ್ರಧಾನ ಜಿಲ್ಲಾ ನ್ಯಾಯಾಲಯವು ಬುಧವಾರ ವಜಾ ಮಾಡಿದೆ. ಬಸವರಾಜನ್‌ ಪತ್ನಿ ಸೌಭಾಗ್ಯ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನೂ ನ್ಯಾಯಾಲಯವು ತಿರಸ್ಕರಿಸಿದೆ.

ಬಸವರಾಜನ್‌, ಬಸವರಾಜೇಂದ್ರ ದೇವರು ಅಲಿಯಾಸ್‌ ರಾಜು ಪರಿಟಾ ಅವರ ಜಾಮೀನು ಅರ್ಜಿ ಮತ್ತು ಸೌಭಾಗ್ಯ ಬಸವರಾಜನ್‌ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳ ವಿಚಾರಣೆ ನಡೆಸಿದ್ದ ಚಿತ್ರದುರ್ಗದ ಪ್ರಧಾನ ಜಿಲ್ಲಾ ನ್ಯಾಯಾಧೀಶೆ ಮಂಗೋಲಿ ಪ್ರೇಮಾವತಿ ಮಲ್ಲಿಕಾರ್ಜುನ ಅವರು ನವೆಂಬರ್‌ 30ರಂದು ಕಾಯ್ದಿರಿಸಿದ್ದ ತೀರ್ಪನ್ನು ಇಂದು ಪ್ರಕಟಿಸಿದರು.

ಶಿವಮೂರ್ತಿ ಮುರುಘಾ ಶರಣರು ಸೇರಿದಂತೆ ಐವರ ವಿರುದ್ಧ ಆಗಸ್ಟ್‌ನಲ್ಲಿ ಪೋಕ್ಸೊ ಕಾಯಿದೆ ಅಡಿ ಪ್ರಥಮ ಪ್ರಕರಣ ದಾಖಲಾದ ಬೆನ್ನಿಗೇ ಬಸವರಾಜನ್‌, ಸೌಭಾಗ್ಯ, ಬಸವರಾಜೇಂದ್ರ ದೇವರು ಮತ್ತು ಗಾಯತ್ರಿ ಅವರ ವಿರುದ್ಧ ಚಿತ್ರದುರ್ಗದ ಗ್ರಾಮಾಂತರ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 120ಬಿ, 366ಎ, 384 ಜೊತೆಗ 34ರ ಅಡಿ ಎಫ್‌ಐಆರ್‌ ದಾಖಲಾಗಿತ್ತು.

ಪ್ರಧಾನ ಸರ್ಕಾರಿ ಅಭಿಯೋಜಕರಾದ ಬಿ ಗಣೇಶ್‌ ನಾಯ್ಕ್‌ ಅವರು ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದರು. ಅರ್ಜಿದಾರರನ್ನು ವಕೀಲರಾದ ಎಚ್‌ ವಿ ರಾಮದಾಸ್‌, ನರಸಿಂಹರಾಜು ಎಚ್‌ ಎಂ ಅವರು ಪ್ರತಿನಿಧಿಸಿದ್ದರು.

Also Read
ಪೋಕ್ಸೊ ಪ್ರಕರಣ: ಶಿವಮೂರ್ತಿ ಮುರುಘಾ ಶರಣರ ಜಾಮೀನು ಅರ್ಜಿ ತಿರಸ್ಕರಿಸಿದ ವಿಶೇಷ ನ್ಯಾಯಾಲಯ

ಪ್ರಕರಣದ ಹಿನ್ನೆಲೆ: ಬಸವರಾಜನ್‌ ಮತ್ತು ಪತ್ನಿ ಸೌಭಾಗ್ಯ ಅವರ ಪಿತೂರಿಯ ಭಾಗವಾಗಿ ಮಠದ ಶಾಲೆಯಲ್ಲಿ ಶಿಕ್ಷಕರಾಗಿದ್ದ ಬಸವರಾಜೇಂದ್ರ ದೇವರು ಮಠದಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಗಾಯತ್ರಿ ಅವರ ಪುತ್ರಿಯನ್ನು ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಸುಳ್ಳು ಸಾಕ್ಷಿ ಹೇಳುವಂತೆ ಪ್ರೇರೇಪಿಸಿದ್ದರು. ಇದಕ್ಕಾಗಿ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದ್ದರು ಎಂದು ಆರೋಪಿ ಪೋಕ್ಸೊ ಪ್ರಕರಣದಲ್ಲಿ ಬಂಧಿತರಾಗಿರುವ ಮಠದ ಹಾಸ್ಟೆಲ್‌ ವಾರ್ಡನ್‌ ರಶ್ಮಿ ಅವರು ದೂರು ನೀಡಿದ್ದರು. ಬಸವರಾಜನ್‌ ಮತ್ತು ಬಸವರಾಜೇಂದ್ರ ದೇವರು ನ್ಯಾಯಾಂಗ ಬಂಧನದಲ್ಲಿದ್ದು, ಸೌಭಾಗ್ಯ ಮತ್ತು ಗಾಯತ್ರಿ ಅವರು ನಾಪತ್ತೆಯಾಗಿದ್ದಾರೆ.

Related Stories

No stories found.
Kannada Bar & Bench
kannada.barandbench.com