ಮುರುಘಾ ಮಠಕ್ಕೆ ಹೊಸ ಅಧ್ಯಕ್ಷರ ನೇಮಕವಾಗುವವರೆಗೆ ಜಿಲ್ಲಾ ಪ್ರಧಾನ ನ್ಯಾಯಾಧೀಶರ ನಿಗಾವಣೆ ಮುಂದುವರಿಕೆ

“ವಿದ್ಯಾಪೀಠದ ಬೈಲಾ, ನಿಯಮ ಮತ್ತು ನಿಯಂತ್ರಣಗಳ ಪ್ರಕಾರ ಅಧ್ಯಕ್ಷರ ನೇಮಕವಾಗುವವರೆಗೆ ಜಿಲ್ಲಾ ನ್ಯಾಯಾಧೀಶರ ಉಸ್ತುವಾರಿ ಅಗತ್ಯ. ವಿದ್ಯಾಪೀಠಕ್ಕೆ ಹೊಸ ಅಧ್ಯಕ್ಷರ ನೇಮಕ ಬಳಿಕ ಪ್ರಧಾನ ಜಿಲ್ಲಾ ನ್ಯಾಯಾಧೀಶರ ಪಾತ್ರ ಅಂತ್ಯಗೊಳ್ಳಲಿದೆ” ಎಂದ ಪೀಠ.
Murugha Mutt
Murugha Mutt

ಚಿತ್ರದುರ್ಗದ ಮುರುಘಾ ಮಠ ಮತ್ತು ವಿದ್ಯಾಪೀಠದ ಆಡಳಿತ ಮತ್ತು ನಿರ್ವಹಣೆಯ ಮೇಲೆ ಜಿಲ್ಲಾ ಪ್ರಧಾನ ನ್ಯಾಯಾಧೀಶರ ನಿಗಾವಣೆ ಮುಂದುವರಿಯಲಿದೆ ಎಂದು ಕರ್ನಾಟಕ ಹೈಕೋರ್ಟ್ ಬುಧವಾರ ಆದೇಶಿಸಿದೆ.

ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿದ್ದ ಆದೇಶ ರದ್ದುಪಡಿಸಿದ್ದ ಏಕಸದಸ್ಯ ಪೀಠ ಆದೇಶವನ್ನು ಕೆ ಎಸ್‌ ನವೀನ್‌ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿಗಳನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್‌ ಕಮಲ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಇತ್ಯರ್ಥಪಡಿಸಿದೆ.

2023ರ ಜುಲೈ 4ರಿಂದ ಚಿತ್ರದುರ್ಗ ಮಠ ಮತ್ತು ವಿದ್ಯಾಪೀಠದ ಆಡಳಿತಾಧಿಕಾರಿಯಾಗಿ ಅಧಿಕಾರವಹಿಸುವಂತೆ ಜಿಲ್ಲಾ ಪ್ರಧಾನ ನ್ಯಾಯಾಧೀಶರಿಗೆ ಆದೇಶಿಸಲಾಗಿತ್ತು. ಮಠ ಮತ್ತು ವಿದ್ಯಾಪೀಠದ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸುವಂತೆ ಅವರಿಗೆ ಆದೇಶಿಸಲಾಗಿತ್ತು. ಆದರೆ, ಯಾವುದೇ ನೀತಿ ನಿರೂಪಣಾ ನಿರ್ಧಾರ ಕೈಗೊಳ್ಳುವಂತಿಲ್ಲ. ಇದಕ್ಕೆ ಪೂರಕವಾಗಿ ಅಗತ್ಯ ಮಾನವ ಸಂಪನ್ಮೂಲ ಮತ್ತಿತರ ಬೆಂಬಲ ನೀಡುವಂತೆ ಜಿಲ್ಲಾ ದಂಡಾಧಿಕಾರಿಗೆ ಆದೇಶಿಸಲಾಗಿತ್ತು. 2023ರ ಮೇ 28ರಂದು ಮಠ ಮತ್ತು ವಿದ್ಯಾಪೀಠದ ಮೇಲ್ವಿಚಾರಣೆಗಾಗಿ ಸಮಿತಿ ರಚಿಸಲಾಗಿದ್ದು, ಇಡೀ ಜವಾಬ್ದಾರಿಯನ್ನು ಬಸವ ಪ್ರಭು ಸ್ವಾಮಿ ಅವರಿಗೆ ನೀಡಲಾಗಿದೆ. ಅದಾಗ್ಯೂ, ಮಠ ಮತ್ತು ವಿದ್ಯಾಪೀಠದ ಆಡಳಿತ ಮತ್ತು ನಿರ್ವಹಣೆಯ ಮೇಲೆ ಜಿಲ್ಲಾ ಪ್ರಧಾನ ನ್ಯಾಯಾಧೀಶರು ನಿಗಾ ಇಡಲಿದ್ದಾರೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

“ವಿದ್ಯಾಪೀಠದ ಬೈಲಾ, ನಿಯಮಗಳು ಮತ್ತು ನಿಯಂತ್ರಣಗಳ ಪ್ರಕಾರ ಅಧ್ಯಕ್ಷರ ನೇಮಕವಾಗುವವರೆಗೆ ಜಿಲ್ಲಾ ನ್ಯಾಯಾಧೀಶರ ಉಸ್ತುವಾರಿ ಅಗತ್ಯ. ವಿದ್ಯಾಪೀಠಕ್ಕೆ ಹೊಸ ಅಧ್ಯಕ್ಷರ ನೇಮಕವಾದ ಬಳಿಕ ಪ್ರಧಾನ ಜಿಲ್ಲಾ ನ್ಯಾಯಾಧೀಶರ ಪಾತ್ರ ಅಂತ್ಯಗೊಳ್ಳಲಿದೆ” ಎಂದು ಪೀಠವು ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಚಿತ್ರದುರ್ಗದ ಮಹಾಲಿಂಗಸ್ವಾಮಿ ಕನ್ವೆನ್ಷನ್‌ ಹಾಲ್‌ನಲ್ಲಿ 2023ರ ಮೇ 28ರಂದು ಮಠದ ಭಕ್ತರು, ಲಿಂಗಾಯತ ಸಮುದಾಯದ ನಾಯಕರು, ಬಸವ ಕೇಂದ್ರದ ನಿರ್ದೇಶಕರು ಮತ್ತು ನಾಯಕರು ಹಾಗೂ ಶಾಸಕರ ಸಮ್ಮುಖದಲ್ಲಿ ಸಭೆ ನಡೆದಿದ್ದು, ಇಡೀ ವಿದ್ಯಾಪೀಠ ಮತ್ತು ಮಠದ ಆಡಳಿತ ಜವಾಬ್ದಾರಿಯನ್ನು ಬಸವಪ್ರಭು ಸ್ವಾಮಿ ಅವರಿಗೆ ನೀಡಲಾಗಿದೆ. ಆನಂತರ ಸಮುದಾಯದ 18 ಮಂದಿಯನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಇದರಲ್ಲಿ ಬಸವಪ್ರಭು ಸ್ವಾಮಿ ನಿರ್ದೇಶಕರಾಗಿದ್ದು, ಎಚ್‌ ಎಸ್‌ ಶಿವಶಂಕರ ರೆಡ್ಡಿ ಅವರನ್ನು ಉಪ ನಿರ್ದೇಶಕರನ್ನಾಗಿ ಹಾಗೂ ಶಾಸಕ ಕೆ ಸಿ ವೀರೇಂದ್ರ (ಪಪ್ಪಿ) ಅವರನ್ನು ಕಾರ್ಯದರ್ಶಿಯನ್ನಾಗಿ ಮಾಡಲಾಗಿದೆ. ಉಳಿದವರನ್ನು ಮೇಲ್ವಿಚಾರಣಾ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು. ಈಗ ಮೇಲ್ವಿಚರಣಾ ಸಮಿತಿಯ ಜವಾಬ್ದಾರಿ ನಿಭಾಯಿಸಲಿದ್ದು, ಜಿಲ್ಲಾ ಪ್ರಧಾನ ನ್ಯಾಯಾಧೀಶರು ಅದರ ಮೇಲೆ ನಿಗಾ ಇಡಲಿದ್ದಾರೆ ಎಂದು ಹೈಕೋರ್ಟ್‌ ಆದೇಶದಲ್ಲಿ ಹೇಳಲಾಗಿದೆ.

ಪ್ರಕರಣದ ಹಿನ್ನೆಲೆ: ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಮುರುಘಾ ರಾಜೇಂದ್ರ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಬಂಧನಕ್ಕೆ ಒಳಗಾಗಿದ್ದಾರೆ. ಇವರ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ಪಿ ಎಸ್‌ ವಸ್ತ್ರದ್‌ ಅವರನ್ನು ರಾಜ್ಯ ಸರ್ಕಾರವು ಆಡಳಿತಾಧಿಕಾರಿಯನ್ನಾಗಿ ನೇಮಿಸಿತ್ತು. ಸರ್ಕಾರದ ಈ ಆದೇಶವನ್ನು ಏಕಸದಸ್ಯ ಪೀಠವು ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿದ್ದ ಮೇಲ್ಮನವಿಯನ್ನು ಈಗ ವಿಭಾಗೀಯ ಪೀಠವು ಇತ್ಯರ್ಥಪಡಿಸಿದೆ. ವಿಚಾರಣೆಯ ಮಧ್ಯದಲ್ಲಿಯೇ ರಾಜ್ಯ ಸರ್ಕಾರವು ಆಡಳಿತಾಧಿಕಾರಿ ನೇಮಕ ಆದೇಶವನ್ನು ಹಿಂಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Attachment
PDF
K S Naveen & others Vs State of Karnataka and others.pdf
Preview

Related Stories

No stories found.
Kannada Bar & Bench
kannada.barandbench.com