ತನ್ನ ಸೆಲ್‌ಫೋನ್‌ನಲ್ಲಿ ಒಬ್ಬ ಅಧಿಕಾರಿಗೆ ಸಂದೇಶ ಕಳುಹಿಸಿ ಆ ಮೂಲಕ ಪ್ರತಿಭಟಿಸುವ ಹಕ್ಕನ್ನು ಚಲಾಯಿಸಿರುವ ನಾಗರಿಕನ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪ್ರಕರಣ ದಾಖಲಿಸುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಈಚೆಗೆ ಹೇಳಿದೆ [ಅವಿಜಿತ್ ಮೈಕೆಲ್ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].
ನಗರದ ಹಸಿರು ಶ್ವಾಸಕೋಶ ಎನಿಸಿರುವ ಮುಂಬೈನ ಆರೆ ಕಾಲೋನಿ ಪ್ರದೇಶದಲ್ಲಿ ಮೆಟ್ರೊ ರೈಲು ಮಾರ್ಗ ನಿರ್ಮಾಣ ಉದ್ದೇಶಕ್ಕಾಗಿ 3,000ಕ್ಕೂ ಹೆಚ್ಚು ಮರಗಳನ್ನು ಕಡಿಯದಂತೆ ಒತ್ತಾಯಿಸಿ ಮುಂಬೈ ಮೆಟ್ರೋ ರೈಲು ನಿಗಮದ ಅಂದಿನ ವ್ಯವಸ್ಥಾಪಕ ನಿರ್ದೇಶಕಿ ಅಶ್ವಿನಿ ಭಿಡೆ ಅವರಿಗೆ ಸಂದೇಶ ಕಳುಹಿಸಿದ್ದ ಅವಿಜಿತ್ ಮೈಕೆಲ್ ವಿರುದ್ಧ ದಾಖಲಿಸಲಾಗಿದ್ದ ಎಫ್‌ಐಆರ್ ಅನ್ನು ನ್ಯಾಯಮೂರ್ತಿಗಳಾದ ಸುನಿಲ್ ಶುಕ್ರೆ ಮತ್ತು ಎಂಎಂ ಸಥಾಯೆ ಅವರಿದ್ದ ಪೀಠ ರದ್ದುಗೊಳಿಸಿತು.
ಅರ್ಜಿದಾರ ಅವಿಜಿತ್ ಕಳಿಸಿದ್ದ ಸಂದೇಶ ಪರಿಶೀಲಿಸಿದಾಗ ಅವರ ಉದ್ದೇಶ ಮುಂಬೈ ನಗರಕ್ಕೆ ಶ್ವಾಸಕೋಶದಂತಿರುವ ಅರಣ್ಯ ಪ್ರದೇಶವನ್ನು ರಕ್ಷಿಸುವುದು ಮಾತ್ರವಾಗಿತ್ತು ಎಂದು ನ್ಯಾಯಾಲಯ ಹೇಳಿದೆ.
“ಸಂದೇಶದಲ್ಲಿ ಯಾವುದೇ ಆಕ್ಷೇಪಾರ್ಹ ವಿಚಾರ ಅಥವಾ ಅಶ್ಲೀಲತೆ ಇರಲಿಲ್ಲ. ಬದಲಿಗೆ ಈ ದೇಶದ ನಾಗರಿಕ ತನ್ನ ದೃಷ್ಟಿಕೋನ ಮಂಡಿಸುವ, ಆಕ್ಷೇಪಿಸುವ, ಪ್ರತಿಭಟಿಸುವ, ಮನವೊಲಿಸುವ, ಒತ್ತಾಯಿಸುವ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸಿ ಸಂದೇಶ ಕಳಿಸಿದ್ದಾರೆ ಎಂದು ತೋರುತ್ತದೆ. ಪ್ರಸ್ತುತ ಅರ್ಜಿದಾರನ ವಿರುದ್ಧ ದಾಖಲಾಗಿರುವ ರೀತಿಯ ಕ್ರಿಮಿನಲ್ ಮೊಕದ್ದಮೆಯನ್ನು ಯಾರ ವಿರುದ್ಧವಾದರೂ ದಾಖಲಿಸಿದರೆ ಅದು ಈ ದೇಶದ ನಾಗರಿಕರ ಹಕ್ಕುಗಳ ಮೇಲಿನ ಆಕ್ರಮಣಕ್ಕೆ ಕಾರಣವಾಗಬಹುದು” ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅವಿಜಿತ್ ಅವರು ಅಧಿಕಾರಿಗೆ ಕಳಿಸಿದ ಸಂದೇಶದಲ್ಲಿ ಬೆಂಗಳೂರಿಗೆ ಕಬ್ಬನ್ ಪಾರ್ಕ್ ಹಸಿರು ಶ್ವಾಸಕೋಶ ಎನಿಸಿದರೆ ಆರೆ ಮುಂಬೈನ ಹಸಿರು ಶ್ವಾಸಕೋಶ. ಹೀಗಾಗಿ ಮೆಟ್ರೋ ಕಾರ್ ಶೆಡ್ ನಿರ್ಮಾಣಕ್ಕಾಗಿ 3,500 ಮರಗಳನ್ನು ಕಡಿಯುವುದು ನಗರದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದಿದ್ದರು.
ಈ ಸಂದೇಶಗಳಿಂದ "ಆಘಾತಗೊಂಡಿದ್ದೇನೆ, ಮನನೊಂದಿದ್ದೇನೆ ಮತ್ತು ಅಡಚಣೆಯಾಗಿದೆ" ಎಂದು ಮೆಟ್ರೊ ಅಧಿಕಾರಿ ಭಿಡೆ ಹೇಳಿಕೊಂಡಿದ್ದರು. ಆದರೆ, ಆಕೆ ಯಾವುದೇ ದೂರು ನೀಡಿರಲಿಲ್ಲ. ಬದಲಿಗೆ, ಖಾಸಗಿ ವ್ಯಕ್ತಿಯ ದೂರಿನ ಮೇರೆಗೆ ಮುಂಬೈ ಪೊಲೀಸ್ ಸೈಬರ್ ವಿಭಾಗ ಪ್ರಕರಣ ದಾಖಲಿಸಿಕೊಂಡಿತ್ತು.
ಸಂದೇಶಗಳನ್ನು ಪರಿಶೀಲಿಸಿದ ನ್ಯಾಯಾಲಯ, ಅರ್ಜಿದಾರರು ಭಿಡೆ ಅವರಿಗೆ ಅಡ್ಡಿಪಡಿಸುವ ಉದ್ದೇಶವನ್ನು ಹೊಂದಿದ್ದಾರೆಂದು ತೋರುವುದಿಲ್ಲ ಇಲ್ಲವೇ ಆ ಸಂದೇಶಗಳನ್ನು ಕಳುಹಿಸುವ ಮೂಲಕ ಭಿಡೆ ಅವರ ಸಾರ್ವಜನಿಕ ಕಾರ್ಯಗಳನ್ನು ನಿರ್ವಹಿಸದಂತೆ ಅಡ್ಡಿಪಡಿಸುವ ಪರಿಣಾಮವನ್ನು ಅವರು ಸೃಷ್ಟಿಸುತ್ತಾರೆ ಎಂದು ಎನಿಸದು ಎಂದಿತು. ಈ ಹಿನ್ನೆಲೆಯಲ್ಲಿ ಸವಾಲಿನಲ್ಲಿದ್ದ ಎಫ್‌ಐಆರ್ ರದ್ದುಗೊಳಿಸಿದ ಪೀಠ ಮುಂದೆ ಇಂತಹ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸುವಾಗ ಜಾಗರೂಕರಾಗಿರಿ ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿತು.