
ಭವಿಷ್ಯದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಅನುಮಾನ ಆಧರಿಸಿ ಸಿವಿಲ್ ಮೊಕದ್ದಮೆ ಹೂಡುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ [ಕ್ಯಾಡಿಲಾ ಹೆಲ್ತ್‌ಕೇರ್ ಲಿಮಿಟೆಡ್ ಮತ್ತು ರೋಚೆ ಪ್ರಾಡಕ್ಟ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಇನ್ನಿತರರ ನಡುವಣ ಪ್ರಕರಣ].
ಔಷಧ ಕಂಪನಿ ಕ್ಯಾಡಿಲಾ ಹೆಲ್ತ್‌ಕೇರ್ ಲಿಮಿಟೆಡ್ ಸಲ್ಲಿಸಿದ್ದ ಪ್ರಕರಣವನ್ನು ವಜಾಗೊಳಿಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಮತ್ತೊಂದು ಔಷಧ ಕಂಪನಿಯಾದ ರೋಚೆ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ತನ್ನ ಕ್ಯಾನ್ಸರ್ ಔಷಧದ ಮಾರಾಟದಲ್ಲಿ ಹಸ್ತಕ್ಷೇಪ ಮಾಡುವ ಮುನ್ನವೇ ತಡೆಯಲೆಂದು ಹೊರಟ ಕ್ಯಾಡಿಲಾದ ಯತ್ನ ಕಾನೂನುಬದ್ಧವಾಗಿ ಸಮರ್ಥನೀಯವಲ್ಲ ಎಂದು ನ್ಯಾಯಾಲಯ ಹೇಳಿದೆ.
"ನನ್ನ ಅಭಿಪ್ರಾಯದಲ್ಲಿ, ಭವಿಷ್ಯದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಅನುಮಾನದ ಆಧಾರದ ಮೇಲೆ ಮೊಕದ್ದಮೆ ಹೂಡುವಂತಿಲ್ಲ. ಯಾವುದೇ ಸಂದರ್ಭದಲ್ಲಿ, ಇದೇ ರೀತಿಯ ಔಷಧದ ಬಿಡುಗಡೆ ಮತ್ತು ಮಾರುಕಟ್ಟೆಗೆ ಪ್ರತಿವಾದಿಗಳು ಹಸ್ತಕ್ಷೇಪ ಮಾಡುತ್ತಾರೆ ಎಂಬುದಕ್ಕೆ ಯಾವುದೇ ಕಾರಣವನ್ನು ದೂರು ಸೂಚಿಸುವುದಿಲ್ಲ " ಎಂದು ನ್ಯಾಯಮೂರ್ತಿ ಅಭಯ್ ಅಹುಜಾ ಅವರಿದ್ದ ಏಕಸದಸ್ಯ ಪೀಠ ತಿಳಿಸಿತು.
"ಒಪ್ಪಿಕೊಳ್ಳಬಹುದಾದ ಸಂಗತಿಯೆಂದರೆ, ಈ ಮೊಕದ್ದಮೆ ಇಡಿಯಾಗಿ ಔಷಧದ ಬಿಡುಗಡೆ ಮತ್ತು ಮಾರುಕಟ್ಟೆಗೆ ಪ್ರತಿವಾದಿಗಳು ಅಡ್ಡಿಪಡಿಸಬಹುದು ಎಂಬುದು ಕೇವಲ ಆತಂಕವನ್ನು ಆಧರಿಸಿದೆ. ಅಂತಹ ಊಹಾತ್ಮಕ ಆಧಾರದ ಮೇಲೆ ಅದರಲ್ಲಿಯೂ ಅರ್ಜಿದಾರನ ಔಷಧವನ್ನು 2015ರಲ್ಲಿ ಬಿಡುಗಡೆ ಮಾಡಲಾಗಿದ್ದಲ್ಲದೆ, 2015ರಿಂದ ಯಾವುದೇ ಹಸ್ತಕ್ಷೇಪವಿಲ್ಲದೆ ಮಾರಾಟ ಮಾಡಲಾಗುತ್ತಿರುವುದರಿಂದ ಮೊಕದ್ದಮೆ ಮುಂದುವರೆಸಲಾಗದು" ಎಂದು ಅದು ವಿವರಿಸಿದೆ.
ಮೊಕದ್ದಮೆಯನ್ನು ಕಾನೂನಾತ್ಮಕವಾಗಿ ನಿಷೇಧಿಸಲಾಗಿದ್ದು ಯಾವುದೇ ಕ್ರಮ ಕೈಗೊಳ್ಳಬಹುದಾದ ಹಕ್ಕನ್ನು ಬಹಿರಂಗಪಡಿಸಲು ವಿಫಲವಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಹೀಗಾಗಿ, ಮೊಕದ್ದಮೆಯನ್ನು ಸಂಪೂರ್ಣವಾಗಿ ವಜಾಗೊಳಿಸಿದ ಅದು ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಕ್ಯಾಡಿಲಾ ಮಾಡಿದ್ದ ಮನವಿಯನ್ನೂ ತಿರಸ್ಕರಿಸಿತು.