ಸಿವಿಲ್ ವ್ಯಾಜ್ಯಗಳನ್ನು ಕ್ರಿಮಿನಲ್ ದಾವೆಗಳಾಗಿಸುವ ಪ್ರವೃತ್ತಿ ಉತ್ತರ ಪ್ರದೇಶದಲ್ಲಿ ಹೆಚ್ಚು: ಸುಪ್ರೀಂ ಕಿಡಿ

"ದಯವಿಟ್ಟು ಇದು ತಪ್ಪು ಅಭ್ಯಾಸ ಎಂದು ತಿಳಿಯಿರಿ ಮತ್ತಿದು ನಡೆಯಬಾರದು" ಎಂದು ತಿಳಿ ಹೇಳಿದ ಪೀಠ.
Uttar Pradesh and Supreme Court
Uttar Pradesh and Supreme Court
Published on

ದೇಶದ ವಿವಿಧ ಭಾಗಗಳಲ್ಲಿ ಅದರಲ್ಲಿಯೂ ಉತ್ತರ ಪ್ರದೇಶದಲ್ಲಿ ಹೆಚ್ಚಾಗಿ ಸಿವಿಲ್‌ ವ್ಯಾಜ್ಯಗಳನ್ನೂ ಕ್ರಿಮಿನಲ್‌ ವ್ಯಾಜ್ಯಗಳಾಗಿ ಪರಿವರ್ತಿಸುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಕಳವಳ ವ್ಯಕ್ತಪಡಿಸಿದೆ [ರಿಖಾಬ್ ಬಿರಾನಿ ಮತ್ತಿತರರು ಹಾಗೂ ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ]

ವಂಚನೆ ಮತ್ತು ನಂಬಿಕೆ ಉಲ್ಲಂಘನೆಯ ಆರೋಪಗಳನ್ನು ಒಳಗೊಂಡಿರುವ ಪ್ರಕರಣ ರದ್ದುಗೊಳಿಸುವಂತೆ ಕೋರಿದ್ದ ಮನವಿಯೊಂದನ್ನು ಪರಿಗಣಿಸುವಾಗ ಸಿಜೆಐ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

Also Read
ಪೂಜಾ ಸ್ಥಳ ಕಾಯಿದೆ: ಇಲ್ಲಿದೆ ಮಳಲಿ ಮಸೀದಿ ಸೇರಿದಂತೆ ಸುಪ್ರೀಂ ಕೋರ್ಟ್ ಆದೇಶದನ್ವಯ ತಡೆ ಪಡೆದ 11 ವ್ಯಾಜ್ಯಗಳ ಮಾಹಿತಿ

"ಇದು ಸಿವಿಲ್ ವ್ಯಾಜ್ಯವನ್ನು  ಕ್ರಿಮಿನಲ್ ಪ್ರಕರಣವಾಗಿ ಪರಿವರ್ತಿಸಿದ ಮತ್ತೊಂದು ಉದಾಹರಣೆ. ಹಲವು ರಾಜ್ಯಗಳಲ್ಲಿ ಅದರಲ್ಲಿಯೂ ವಿಶೇಷವಾಗಿ ನಿಮ್ಮ ರಾಜ್ಯದಲ್ಲಿ (ಉತ್ತರ ಪ್ರದೇಶ) ಅತಿರೇಕವಾಗಿ ಇದು ನಡೆಯುತ್ತಿದೆ. ದಯವಿಟ್ಟು ಇದು ತಪ್ಪು ಅಭ್ಯಾಸ ಎಂದು ತಿಳಿಯಿರಿ, ಮತ್ತಿದು ನಡೆಯಬಾರದು" ಎಂದು ಸಿಜೆಐ ಖನ್ನಾ ತಿಳಿಸಿದರು.

ಅಲಾಹಾಬಾದ್ ಹೈಕೋರ್ಟ್ ತಮ್ಮ ವಿರುದ್ಧದ ಕ್ರಿಮಿನಲ್ ಆರೋಪಗಳನ್ನು ರದ್ದುಪಡಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪರಿಹಾರ ಕೋರಿ ಇಬ್ಬರು ಆರೋಪಿಗಳು ಸಲ್ಲಿಸಿದ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ವ್ಯಾಪಾರದ ಕರಾರನ್ನು ಜಾರಿಗೆ ತರುವ ಸುಳ್ಳು ಭರವಸೆಯ ಮೇಲೆ ಮತ್ತೊಬ್ಬ ವ್ಯಕ್ತಿಯಿಂದ ಹಣ ಪಡೆದ ಆರೋಪ ಇಬ್ಬರು ಆರೋಪಿಗಳ/ಅರ್ಜಿದಾರರ ಮೇಲಿತ್ತು.

ಆದರೆ, ಪ್ರಕರಣದಲ್ಲಿ ಇಬ್ಬರ ವಿರುದ್ಧ ವಂಚನೆ, ನಂಬಿಕೆ ದ್ರೋಹ, ಮಹಿಳೆಯ ಮಾನಹಾನಿ, ಅವಮಾನ, ಕ್ರಿಮಿನಲ್‌ ಬೆದರಿಕೆ ಸೇರಿದಂತೆ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿತ್ತು.

ಇದನ್ನು ಪ್ರಶ್ನಿಸಿದ್ದ ಆರೋಪಿಗಳು ತಮ್ಮನ್ನು ಸುಳ್ಳೇ ಸಿಲುಕಿಸಲಾಗಿದೆ ಎಂದು ತಿಳಿಸಿದ್ದರು. ಆದರೆ, ಅವರ ವಿರುದ್ಧ ಮೇಲ್ನೋಟಕ್ಕೆ ಆರೋಪ ಸಾಬೀತಾಗಿದೆ ಎಂದು ತಿಳಿಸಿದ ಹೈಕೋರ್ಟ್‌ ಆರೋಪಗಳನ್ನು ರದ್ದುಗೊಳಿಸಲು ನಿರಾಕರಿಸಿತು. ಈ ಹಿನ್ನೆಲೆಯಲ್ಲಿ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

Also Read
ಕ್ರಿಮಿನಲ್ ಪ್ರಕರಣಗಳ ನಿರ್ವಹಣೆಯಲ್ಲಿ ಸುಧಾರಣೆ, ವಿಚಾರಣೆಯ ಅವಧಿ ಇಳಿಕೆ: ಸಿಜೆಐ ಖನ್ನಾ ಇಂಗಿತ

ಪ್ರಕರಣ ವಂಚನೆಗೆ ಸಂಬಂಧಿಸಿದ್ದಲ್ಲ ಬದಲಿಗೆ ಕರಾರಿನ ಸರಳ ಉಲ್ಲಂಘನೆಯಷ್ಟೇ ಆಗಿದ್ದು ಎಂದು ಅವರು ಸುಪ್ರೀಂ ಕೋರ್ಟ್‌ ಎದುರು ವಾದಿಸಿದ್ದರು.

ಈ ಸಂಬಂಧ ನವೆಂಬರ್ 11 ರಂದು ನೋಟಿಸ್‌ ನೀಡಿರುವ ನ್ಯಾಯಾಲಯ ವಿಚಾರಣಾ ನ್ಯಾಯಾಲಯದಲ್ಲಿ ನಡೆಯುತ್ತಿರುವ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಗೆ ತಡೆ ನೀಡಿದೆ.

Kannada Bar & Bench
kannada.barandbench.com