
ದೇಶದ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿ ತಮ್ಮ ಅಲ್ಪಾವಧಿಯ ಸೇವೆಯಲ್ಲಿ ಭಾರತದ ಕಾನೂನಾತ್ಮಕ ಆಡಳಿತ ಮತ್ತು ಸಂವಿಧಾನವನ್ನು ಎತ್ತಿಹಿಡಿಯಲು ಬದ್ಧವಾಗಿರುವುದಾಗಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ತಿಳಿಸಿದರು.
ಇತ್ತೀಚೆಗೆ ಭಾರತದ 52 ನೇ ಸಿಜೆಐಯಾಗಿ ಹುದ್ದೆ ಅಲಂಕರಿಸಿದ್ದ ಅವರು ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಶನಿವಾರ ನವದೆಹಲಿಯಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಸಂವಿಧಾನದ ದೃಷ್ಟಿಕೋನ, ಅದರ ಆಶೋತ್ತರವಾದ ರಾಜಕೀಯ ಸಮಾನತೆಯೊಂದಿಗೆ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಸಾಕಾರಗೊಳಿಸುವುದಕ್ಕಾಗಿ ನನಗೆ ಇರುವುದು ಅಲ್ಪಾವಧಿಯಾದರೂ ಕಾನೂನಾತ್ಮಕ ಆಡಳಿತ ಮತ್ತು ಸಂವಿಧಾನ ಎತ್ತಿಹಿಡಿಯುವುದಾಗಿ ನಾನು ಸ್ವೀಕರಿಸಿರುವ ಪ್ರತಿಜ್ಞಾವಿಧಿಗೆ ಬದ್ಧನಾಗಿರಲು ಹಾಗೂ ದೇಶದ ಸಾರ್ವತ್ರಿಕ ಮನಸ್ಸನ್ನು ಅದರ ಬಹುಪಾಲು ನಾಗರಿಕರನ್ನು ತಲುಪಲು ಯತ್ನಿಸುತ್ತೇನೆ ಎಂದು ಅವರು ವಿವರಿಸಿದ್ದಾರೆ.
ಮೂಲಭೂತ ಹಕ್ಕುಗಳು ಮತ್ತು ರಾಜ್ಯ ನೀತಿ ನಿರ್ದೇಶನ ತತ್ವಗಳ ನಡುವೆ ಸಂಘರ್ಷ ಉಂಟಾದಾಗಲೆಲ್ಲಾ, ಕೇಶವಾನಂದ ಭಾರತಿ ತೀರ್ಪು ಮಾರ್ಗದರ್ಶಕ ಬೆಳಕಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.
ದೇಶದ ವಿವಿಧೆಡೆಯಿಂದ ಆಗಮಿಸಿದ್ದ ವಕೀಲರನ್ನು ಉದ್ದೇಶಿಸಿ ಮಾತನಾಡಿದ ಅವರು ವಕೀಲ ಸಮುದಾಯಕ್ಕೆ ಕೃತಜ್ಞತೆ ಮತ್ತು ಗೌರವ ವ್ಯಕ್ತಪಡಿಸಿದರು. ಕಾನೂನು ವೃತ್ತಿಯಲ್ಲಿ ತಮ್ಮ 40 ವರ್ಷಗಳಿಗೂ ಹೆಚ್ಚು ಕಾಲದ ಯಾನವನ್ನು ಸ್ಮರಿಸಿದ ನ್ಯಾ. ಗವಾಯಿ ಅವರು ತಾವು ಈ ಕ್ಷೇತ್ರಕ್ಕೆ ಬರಲು ಡಾ. ಬಿ ಆರ್ ಅಂಬೇಡ್ಕರ್ ಅವರಿಂದ ಪ್ರೇರಿತರಾದ ತಮ್ಮ ತಂದೆಯ ಪ್ರಭಾವ ಕಾರಣ ಎಂದರು.
ತಮ್ಮ ತಂದೆ ಸ್ವತಃ ವಕೀಲರಾಗಬೇಕೆಂದು ಆಶಿಸಿದ್ದರು. ಆದರೆ ಯೌವನದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದರಿಂದ ಎಲ್ಎಲ್ ಬಿ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಪರಿಣಾಮ ತಮ್ಮ ಅಪೂರ್ಣ ಕನಸನ್ನು ಮಗ ಈಡೇರಿಸುವಂತೆ ಆಶಿಸಿದ್ದರು. ಅವರನ್ನು ಗೌರವಿಸುವ ಸಲುವಾಗಿ ನಾನು ಕಾನೂನು ಕ್ಷೇತ್ರವನ್ನುಆರಿಸಿಕೊಂಡೆ ಎಂದು ಅವರು ತಿಳಿಸಿದರು.