ದಮನಿತರ ವಿರುದ್ಧದ ಐತಿಹಾಸಿಕ ಪ್ರಮಾದ ಮುಂದುವರೆಯುವಲ್ಲಿ ನ್ಯಾಯಾಂಗ ವ್ಯವಸ್ಥೆಯ ಪಾತ್ರವೂ ಪ್ರಮುಖವಾಗಿದೆ: ಸಿಜೆಐ

ಬ್ರ್ಯಾಂಡೀಸ್‌ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಆರನೇ ಅಂತಾರಾಷ್ಟ್ರೀಯ ಸಮಾವೇಶದಲ್ಲಿ “ಡಾ. ಬಿ ಆರ್‌ ಅಂಬೇಡ್ಕರ್‌ ಅವರ ಅಪೂರ್ಣ ಪರಂಪರೆ” ವಿಷಯದ ಕುರಿತು ಸಿಜೆಐ ಪ್ರಧಾನ ಭಾಷಣ ಮಾಡಿದರು.
CJI DY Chandrachud
CJI DY Chandrachud

ನಿರ್ಗತಿಕರು ಮತ್ತು ತುಳಿತಕ್ಕೊಳಗಾದ ಸಮುದಾಯಗಳ ವಿರುದ್ಧದ ಐತಿಹಾಸಿಕ ಪ್ರಮಾದಗಳನ್ನು ಮುಂದುವರೆಸುವಲ್ಲಿ ನ್ಯಾಯಾಂಗ ವ್ಯವಸ್ಥೆಯು ಪ್ರಮುಖ ಪಾತ್ರವಹಿಸಿದೆ ಎಂದು ಭಾರತದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಈಚೆಗೆ ಹೇಳಿದ್ದಾರೆ. ಹೀಗಾಗಿ, ತುಳಿತಕ್ಕೊಳಗಾದ ಹಲವು ದಮನಿತಿ ಸಮುದಾಯಗಳ ವಿರುದ್ಧದ ಐತಿಹಾಸಿಕ ಪ್ರಮಾದಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಎಲ್ಲರನ್ನೂ ಒಳಗೊಳ್ಳುವ ನ್ಯಾಯಯುತವಾದ ನ್ಯಾಯವ್ಯವಸ್ಥೆಯ ಅಗತ್ಯವನ್ನು ಅವರು ಪ್ರತಿಪಾದಿಸಿದರು.

ಬ್ರ್ಯಾಂಡೀಸ್‌ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಆರನೇ ಅಂತಾರಾಷ್ಟ್ರೀಯ ಸಮಾವೇಶದಲ್ಲಿ “ಡಾ. ಬಿ ಆರ್‌ ಅಂಬೇಡ್ಕರ್‌ ಅವರ ಅಪೂರ್ಣ ಪರಂಪರೆ” ಎಂಬ ವಿಚಾರದ ಮೇಲೆ ಸಿಜೆಐ ಪ್ರಧಾನ ಭಾಷಣ ಮಾಡಿದರು. “ಪ್ರಾತಿನಿಧ್ಯ ಮೀರಿದ ಸುಧಾರಣೆ: ಐತಿಹಾಸಿಕ ಪ್ರಮಾದಗಳಿಗೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಸಂವಿಧಾನದ ಸಾಮಾಜಿಕ ಬದುಕು” ಎಂಬ ವಿಷಯದ ಕುರಿತು ಸಿಜೆಐ ಮಾತನಾಡಿದರು.

“ಕೆಲ ಸಮುದಾಯಗಳನ್ನು ಸಮಾಜದ ಅಂಚಿಗೆ ತಳ್ಳಲು ಕಾನೂನಿನ ಚೌಕಟ್ಟನ್ನು ಆಗಿಂದಾಗ್ಗೆ ವ್ಯವಸ್ಥಿತವಾಗಿ ಅಸ್ತ್ರವನ್ನಾಗಿಸಿಕೊಳ್ಳಲಾಗಿದೆ” ಎಂದು ಸಿಜೆಐ ಸುಪ್ರೀಂ ಕೋರ್ಟ್‌ನ ಕೆಲವು ತೀರ್ಪುಗಳನ್ನು ಉಲ್ಲೇಖಿಸಿದರು. ಹೀಗಾಗಿ, “ನ್ಯಾಯಮೂರ್ತಿಗಳಿಗೆ ಸಾಮಾಜಿಕ ವಾಸ್ತವಗಳ ಅರಿವಿರಬೇಕು. ಏಕೆಂದರೆ, ಕಾನೂನು ನಿರ್ವಾತದಲ್ಲಿರುವುದಿಲ್ಲ. ಇತಿಹಾಸದುದ್ದಕ್ಕೂ ತುಳಿತಕ್ಕೊಳಗಾದ ಸಮುದಾಯಗಳ ವಿರುದ್ಧ ಗಂಭೀರ ಪ್ರಮಾದಗಳನ್ನು ಎಸಗಲಾಗಿದೆ” ಎಂದಿದ್ದಾರೆ.

“ಅಮೆರಿಕಾ ಮತ್ತು ಭಾರತದಲ್ಲಿ ತುಳಿತಕ್ಕೊಳಗಾದ ಸಮುದಾಯಗಳ ಜನರಿಗೆ ಬಹುಕಾಲದವರೆಗೆ ಮತದಾನ ಮಾಡುವ ಹಕ್ಕನ್ನು ನಿರಾಕರಿಸಲಾಗಿತ್ತು. ಈಗಾಗಲೇ ಇರುವ ಅಧಿಕಾರ ವ್ಯವಸ್ಥೆಯನ್ನು ಮುಂದುವರಿಸಲು ಕಾನೂನು ವ್ಯವಸ್ಥೆಯನ್ನು ಬಳಕೆ ಮಾಡಲಾಗಿತ್ತು” ಎಂದರು.

“ಐತಿಹಾಸಿಕ ಅನ್ಯಾಯವನ್ನು ಪರಿಗಣಿಸುವುದು ಕಾನೂನು ಸುಧಾರಣೆಯ ಪ್ರಮುಖ ಪಾತ್ರವಾಗಿದ್ದು, ಈ ನಿಟ್ಟಿನಲ್ಲಿ ಹಿಂದೆ ನಡೆದಿರುವ ಪ್ರಮಾದಗಳನ್ನು ಸರಿಪಡಿಸಿ, ಸಮ ಸಮಾಜ ರೂಪಿಸಲು ನ್ಯಾಯಯುತ ಮತ್ತು ಸಮಗ್ರ ಕಾನೂನು ವ್ಯವಸ್ಥೆ ಅಗತ್ಯ” ಎಂದಿದ್ದಾರೆ.

ತುಳಿತಕೊಳಗಾದವರು ಮತ್ತು ನಿರ್ಗತಿಕರಿಗೆ ಸ್ಥಾನ ಕಲ್ಪಿಸಿಕೊಡುವುದರಾಚೆಗೆ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಅವರ ಅರ್ಥಪೂರ್ಣ ಧ್ವನಿಗೆ ಅವಕಾಶ ಕಲ್ಪಿಸುವುದು ಪ್ರಾತಿನಿಧ್ಯವನ್ನು ಕಲ್ಪಿಸುವುದರ ಅಚೆಗೂ ವಿಸ್ತರಿಸಬೇಕಾದ ಸುಧಾರಣೆಯಾಗಿದೆ ಎಂದು ಅವರು ಈ ವೇಳೆ ಹೇಳಿದರು.

“ಡಾ. ಅಂಬೇಡ್ಕರ್‌ ಅವರ ಸಾಂವಿಧಾನಿಕತೆಯು ಸಮತೋಲಿತವಾದ ಪರಿಪಕ್ವ ಚೌಕಟ್ಟು ಹೊಂದಿದ್ದು, ಅದು ಅಧಿಕಾರ ದುರ್ಬಳಕೆಗೆ ವಿರುದ್ಧವಾಗಿ ಕೋಟೆಯಾಗಿ ಕೆಲಸ ಮಾಡಲಿದೆ. ಆ ಮೂಲಕ ಜನರ ಹಕ್ಕುಗಳ ರಕ್ಷಣೆಯನ್ನು ಖಾತರಿಗೊಳಿಸಲಿದೆ” ಎಂದು ಸಿಜೆಐ ಹೇಳಿದರು.

ಇದೇ ಸಂದರ್ಭದಲ್ಲಿ ಸಿಜೆಐ ಅವರು ಬ್ರ್ಯಾಂಡೀಸ್‌ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಅಂಬೇಡ್ಕರ್‌ ಅವರ ಪುತ್ಥಳಿಯನ್ನು ಅನಾವರಣಗೊಳಿಸಿದರು.

Related Stories

No stories found.
Kannada Bar & Bench
kannada.barandbench.com