ಸಂಪನ್ಮೂಲದ ಕೊರತೆ ಇದ್ದಾಗ ಹೊಸ ಕ್ರಿಮಿನಲ್ ಕಾನೂನು ಪ್ರತಿಪಾದಿಸುವ ತ್ವರಿತ ವಿಚಾರಣೆಯ ನಿಯಮ ಉಪಯುಕ್ತವಾಗದು: ಸಿಜೆಐ

ಕ್ರಿಮಿನಲ್ ವಿಚಾರಣೆಗೆ 3 ವರ್ಷಗಳ ಗಡುವು ನೀಡಿರುವುದು ಸ್ವಾಗತಾರ್ಹ ಎಂದು ಸಿಜೆಐ ಬಣ್ಣಿಸಿದರು. ಎಸ್‌ಜಿ ಮೆಹ್ತಾ ಮಾತನಾಡಿ ʼಆರೋಪಿಯನ್ನು ಸುದೀರ್ಘವಾಗಿ ಕಸ್ಟಡಿಯಲ್ಲಿ ಇಡುವ ಹೊಸ ಸೆಕ್ಷನ್ ಅಪರಾಧಿಗಳ ವಿರೋಧಿಯೇ ಹೊರತು ಜನ ವಿರೋಧಿಯಲ್ಲ' ಎಂದರು.
Criminal laws
Criminal laws

ಹೊಸ ಕ್ರಿಮಿನಲ್ ಕಾನೂನುಗಳ ಪ್ರಕಾರ ತ್ವರಿತ ವಿಚಾರಣೆಯ ಗುರಿ ಸಾಧಿಸಲು ನ್ಯಾಯಾಲಯಗಳಿಗೆ ಸಾಕಷ್ಟು ಐಹಿಕ ಸಂಪನ್ಮೂಲಗಳನ್ನು ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್‌ ಸಲಹೆ ನೀಡಿದರು.

ಹೊಸ ಕ್ರಿಮಿನಲ್‌ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌), ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್‌) ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮ ಈ ವರ್ಷ ಜುಲೈ 1ರಿಂದ ಜಾರಿಗೆ ಬರಲಿವೆ.

ಭಾರತದ ಇತಿಹಾಸದಲ್ಲಿ ಈ ಕಾನೂನುಗಳು ತಿರುವು ನೀಡಲಿದ್ದು ಕ್ರಿಮಿನಲ್‌ ನ್ಯಾಯಿಕ ಆಡಳಿತದ ಹೊಸ ಯುಗಕ್ಕೆ ನಾಂದಿ ಹಾಡಲಿವೆ ಎಂದು ಸಿಜೆಐ ಬಣ್ಣಿಸಿದರು.

ಕ್ರಿಮಿನಲ್ ವಿಚಾರಣೆಗಳನ್ನು ಮೂರು ವರ್ಷಗಳಲ್ಲಿ ಪೂರ್ಣಗೊಳಿಸಬೇಕು ಮತ್ತು ತೀರ್ಪು ಕಾಯ್ದಿರಿಸಿದ 45 ದಿನಗಳಲ್ಲಿ ತೀರ್ಪು ನೀಡಬೇಕು ಎಂದು ಬಿಎನ್‌ಎಸ್‌ಎಸ್‌ ಹೇಳುತ್ತದೆ. ಪ್ರಕರಣದ ಬಾಕಿ ಉಳಿಯುವಿಕೆಯಂತಹ ಸಮಸ್ಯೆ ಪರಿಹಾರಕ್ಕೆ ಸ್ವಾಗತಾರ್ಹ ಹಾದಿ ಹಾಕಿ ಕೊಡುತ್ತದೆ ಎಂದರು.

ಆದರೆ ನ್ಯಾಯಾಲಯಗಳು ಮತ್ತು ಪ್ರಾಸಿಕ್ಯೂಟರ್‌ಗಳಿಗೆ ಐಹಿಕ ಸಂಪನ್ಮೂಲಗಳ ನೆರವು ನೀಡದಿದ್ದರೆ ಅಂತಹ ಶಾಸನಬದ್ಧ ಗಡುವುಗಳು ಹೆಚ್ಚು ಉಪಯುಕ್ತವಾಗುವುದಿಲ್ಲ. ಅವು ಕೇವಲ ಕಾಗದದ ಮೇಲೆ ಉಳಿಯಬಹುದು ಎಂದು ಅವರು ತಿಳಿಸಿದರು.

ಸಂಪೂರ್ಣ ವಿದ್ಯುನ್ಮಾನ ವಿಚಾರಣೆಗೆ ಬಿಎನ್‌ಎಸ್‌ಎಸ್‌ ಉತ್ತೇಜನ ನೀಡುತ್ತಿರುವುದು ಶ್ಲಾಘನೀಯ. ಆದರೂ ಅಂತಹ ಪ್ರಕ್ರಿಯೆಗಳಲ್ಲಿ ಪಕ್ಷಕಾರರ ಗೌಪ್ಯತೆ ಕಾಪಾಡಿಕೊಳ್ಳಬೇಕು. ವೈಯಕ್ತಿಕ ದತ್ತಾಂಶ ಸೋರಿಕೆಯಾಗದಂತೆ ಪ್ರತಿರಕ್ಷಣಾ ವ್ಯವಸ್ಥೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಮೂರು ಹೊಸ ಕ್ರಿಮಿನಲ್ ಕಾನೂನುಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಶನಿವಾರ ಆಯೋಜಿಸಿದ್ದ ಕ್ರಿಮಿನಲ್‌ ನ್ಯಾಯಿಕ ವ್ಯವಸ್ಥೆಯಲ್ಲಿ ಭಾರತದ ಪ್ರಗತಿಶೀಲ ಪಥ ಎಂಬ ವಿಷಯದ ಕುರಿತಂತೆ ನಡೆದ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಈ ವೇಳೆ ಹೊಸ ಕ್ರಿಮಿನಲ್‌ ಕಾನೂನುಗಳ ಕುರಿತಂತೆ ಕೇಂದ್ರ ಸರ್ಕಾರದ ಎರಡನೇ ಅತ್ಯುನ್ನತ ಕಾನೂನು ಅಧಿಕಾರಿಯಾದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು  ಬೆಳಕು ಚೆಲ್ಲಿದರು.

ಕಳೆದ 70 ವರ್ಷಗಳಿಂದ ಬಾಕಿ ಉಳಿದಿದ್ದ ಕ್ರಿಮಿನಲ್‌ ಕಾನೂನುಗಳನ್ನು ಜಾರಿಗೆ ತರಲು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಂತಹ ಸಮರ್ಥ ರಾಜಕಾರಣಿಗಳ ಅಗತ್ಯವಿತ್ತು ಎಂದು ಮೆಹ್ತಾ ಶ್ಲಾಘಿಸಿದರು.

ರಾಷ್ಟ್ರದ ಇತಿಹಾಸದಲ್ಲಿ ಹಳೆಯದರಿಂದ ಹೊಸದಕ್ಕೆ ಹೊರಳಬೇಕಾದ ಸಮಯ ಬಂದಿದೆ. ಶಿಕ್ಷೆ ಮತ್ತು ನ್ಯಾಯಿಕ ಆಡಳಿತದ ವಿಚಾರದಲ್ಲಿ ಈ ಕಾನೂನುಗಳು ಬದಲಾವಣೆ ತರಲಿವೆ ಎಂದರು.  

ಬಿಎನ್‌ಎಸ್‌ನ ಸೆಕ್ಷನ್ 187 ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡುತ್ತದೆ ಎಂದು ಈ ಹಿಂದೆ ಆಕ್ಷೇಪ ವ್ಯಕ್ತವಾಗಿತ್ತು. ದೀರ್ಘಾವಧಿಯ ಬಂಧನವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಲಾಗಿತ್ತು. ಈ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಅವರು ಆರೋಪಿಯನ್ನು ಸುದೀರ್ಘವಾಗಿ ಕಸ್ಟಡಿಯಲ್ಲಿ ಇಡುವುದು ಕ್ರಿಮಿನಲ್‌ ವಿರೋಧಿಯೇ ವಿನಾ ಜನ ವಿರೋಧಿಯಲ್ಲ ಎಂದು ಪ್ರತಿಪಾದಿಸಿದರು.

ಕೇಂದ್ರ ಕಾನೂನು ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಅರ್ಜುನ್ ರಾಮ್ ಮೇಘವಾಲ್, ಭಾರತದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಮತ್ತು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು.

Related Stories

No stories found.
Kannada Bar & Bench
kannada.barandbench.com