ಸುಪ್ರೀಂ ಕೋರ್ಟ್ ತೀರ್ಪುಗಳ ಭಾಷಾಂತರ: ನ್ಯಾ. ಎ ಎಸ್ ಓಕಾ ನೇತೃತ್ವದ ಸಮಿತಿ ರಚನೆ

ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು ಕೂಡ ಸಮಿತಿಯ ಸದಸ್ಯರಾಗಿದ್ದು ಯೋಜನೆಯ ಮೊದಲ ಹಂತವಾಗಿ ತೀರ್ಪುಗಳನ್ನು ಹಿಂದಿ, ತಮಿಳು, ಗುಜರಾತಿ ಹಾಗೂ ಒಡಿಯಾಗೆ ಅನುವಾದಿಸಲಾಗುತ್ತದೆ.
Justice AS Oka and Supreme Court
Justice AS Oka and Supreme Court

ಸುಪ್ರೀಂಕೋರ್ಟ್ ತೀರ್ಪುಗಳನ್ನು ಪ್ರಾದೇಶಿಕ ಭಾಷೆಗಳಿಗೆ ಭಾಷಾಂತರಿಸಲು ನ್ಯಾಯಮೂರ್ತಿ ಎ ಎಸ್ ಓಕಾ ಅವರ ನೇತೃತ್ವದ ಸಮಿತಿ ರಚಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದ್ದಾರೆ.

ದೆಹಲಿ ಹೈಕೋರ್ಟ್‌ ಮಂಗಳವಾರ ಆಯೋಜಿಸಿದ್ದ  ಆನ್‌ಲೈನ್ ಇ-ಇನ್‌ಸ್ಪೆಕ್ಷನ್ ಸಾಫ್ಟ್‌ವೇರ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಾ ಈ ವಿಚಾರ ತಿಳಿಸಿದರು.

ನಾಗರಿಕರು ತಾವು ಮಾತನಾಡುವ ಭಾಷೆಯಲ್ಲಿ ತೀರ್ಪುಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದ ಹೊರತು ನ್ಯಾಯದಾನ ಎಂಬುದು ಅರ್ಥಪೂರ್ಣವಾಗುವುದಿಲ್ಲ ಮತ್ತು ನಾವು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನಲ್ಲಿ ನೀಡುವ ತೀರ್ಪುಗಳನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸಾಧ್ಯವಾಗುವುದಿಲ್ಲ ಎಂದು ಸಿಜೆಐ ಒತ್ತಿಹೇಳಿದರು.

Also Read
ಪ್ರಾದೇಶಿಕ ಭಾಷೆಗಳಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಲು ಸಂಕಲ್ಪ: ಸಿಜೆಐ ಅವರಿಗೆ ಪ್ರಧಾನಿ ಮೋದಿ ಶ್ಲಾಘನೆ

ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್, ನ್ಯಾಷನಲ್‌ ಇನ್ಫರ್ಮಾಟಿಕ್ಸ್‌ ಸೆಂಟರ್‌ನ ಶರ್ಮಿಷ್ಠಾ, ಐಐಟಿ ದೆಹಲಿ ಮಿತೇಶ್‌ ಕಪ್ರಾ, ಏಕ್‌ ಸ್ಟೆಪ್‌ ಪ್ರತಿಷ್ಠಾನದ ವಿವೇಕ್‌ ರಾಘವನ್‌, ಅಗಾಮಿ ಸಂಸ್ಥೆಯ ಸುಪ್ರಿಯಾ ಶಂಕರನ್‌ ಅವರು ಸಮಿತಿಯ ಸದಸ್ಯರಾಗಿದ್ದಾರೆ. ಯೋಜನೆಯ ಮೊದಲ ಹಂತವಾಗಿ ತೀರ್ಪುಗಳನ್ನು ಹಿಂದಿ, ತಮಿಳು, ಗುಜರಾತಿ ಹಾಗೂ ಒಡಿಯಾಗೆ ಅನುವಾದಿಸಲಾಗುತ್ತದೆ.

"ಸುಪ್ರೀಂಕೋರ್ಟ್‌ನ ದಕ್ಷ ನ್ಯಾಯಮೂರ್ತಿಗಳಾದ ಎ ಎಸ್ ಓಕಾ ಅವರ ಅಧ್ಯಕ್ಷತೆಯಲ್ಲಿ  ಸಮಿತಿ ರಚಿಸಿದ್ದು ಮೊದಲ ಹೆಜ್ಜೆಯಾಗಿ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಕನಿಷ್ಠ ನಾಲ್ಕು ಭಾಷೆಗಳಿಗೆ  ಅಂದರೆ ಹಿಂದಿ, ತಮಿಳು, ಗುಜರಾತಿ ಹಾಗೂ ಒಡಿಯಾಗೆ  ಭಾಷಾಂತರಿಸಬೇಕಿದೆ” ಎಂದು ಸಿಜೆಐ ತಿಳಿಸಿದ್ದಾರೆ.

ವಿವಿಧ ಭಾರತೀಯ ಭಾಷೆಗಳಿಗೆ ಭಾಷಾಂತರಿಸಲು ತಂತ್ರಾಂಶ ಅಭಿವೃದ್ಧಿಪಡಿಸಲಾಗುತ್ತದೆ. ಆದರೆ ಈ ರೀತಿಯ ತಂತ್ರಾಂಶವನ್ನು ಇನ್ನೂ ಪರಿಶೀಲಿಸುವ ಅಗತ್ಯವಿದ್ದು ಇದಕ್ಕಾಗಿ ನಿವೃತ್ತ ನ್ಯಾಯಾಂಗ ಅಧಿಕಾರಿಗಳನ್ನು ಸುಪ್ರೀಂ ಕೋರ್ಟ್‌ ನೇಮಿಸಲಿದೆ. ಅಂತಹ ಪ್ರತಿಭಾನ್ವಿತ ನಿವೃತ್ತ ನ್ಯಾಯಾಂಗ ಅಧಿಕಾರಿಗಳ ಹುಡುಕಾಟ ನಡೆದಿದ್ದು ಅವರ ಕೆಲಸಕ್ಕಾಗಿ ಸುಪ್ರೀಂ ಕೋರ್ಟ್‌ ಹಣ ಪಾವತಿಸಲಿದೆ. ಅವರು ಮನೆಯಲ್ಲೇ ಕುಳಿತು ಮಾಡಬಹುದಾದ ಕಾರ್ಯ ಇದಾಗಿದ್ದು ಅನುವಾದ ಕಾರ್ಯ ಸರಿಯಾಗಿ ನಡೆದಿದೆಯೇ ಎಂದು ಪರಿಶೀಲಿಸಬಹುದು ಎಂಬುದಾಗಿ ಅವರು ವಿವರಿಸಿದ್ದಾರೆ.

Also Read
ಎಲ್ಲಾ ಭಾರತೀಯ ಭಾಷೆಗಳಲ್ಲಿ ತೀರ್ಪು ಲಭ್ಯವಾಗುವಂತೆ ಮಾಡುವತ್ತ ಮುಂದಿನ ಹೆಜ್ಜೆ: ಸಿಜೆಐ ಚಂದ್ರಚೂಡ್

“ಉದಾಹರಣೆಗೆ ಲೀವ್‌ ಗ್ರ್ಯಾಂಟೆಡ್‌ ಎಂದು ನಾವು ಹೇಳಿದಾಗ ಅದನ್ನು ನೇರವಾಗಿ ಹಿಂದಿಗೆ (ಅಥವಾ ಬೇರಾವುದೇ ಭಾರತೀಯ ಭಾಷೆಗೆ) ಅನುವಾದಿಸಿದಾಗ ʼರಜೆ ನೀಡಲಾಗಿದೆʼ ಎಂಬ (ಅಭಾಸಕಾರಿ) ಅರ್ಥ ಬರುತ್ತದೆ. ತೀರ್ಪಿನ ಮೊದಲ ಸಾಲಿನಲ್ಲೇ ʼರಜೆ ನೀಡಲಾಗಿದೆʼ ಎಂದು ಜನರಿಗೆ ಹೇಳಲು ನ್ಯಾಯಾಲಯ ಬಯಸುವುದಿಲ್ಲ” ಎಂದು ಅವರು ಹೇಳಿದ್ದಾರೆ. (ಲೀವ್‌ ಗ್ರ್ಯಾಂಟೆಡ್‌ ಎಂಬುದನ್ನು ಸೂಕ್ತ ರೀತಿಯಲ್ಲಿ ಅನುವಾದಿಸಿದರೆ  ಆಗ ʼಅನುಮತಿ ನೀಡಲಾಗಿದೆ ʼಎಂಬ ಅರ್ಥ ಬರುತ್ತದೆ. ಅಂತೆಯೇ ಸ್ಪೆಷಲ್‌ ಲೀವ್‌ ಪಿಟಿಷನ್‌  (ಎಸ್‌ಎಲ್‌ಪಿ) ಎಂಬುದನ್ನು ವಿಶೇಷ ಅನುಮತಿ ಅರ್ಜಿ ಎಂದು ತರ್ಜುಮೆ ಮಾಡಬೇಕಾಗುತ್ತದೆ).

ಡಿಜಟಲೀಕರಣದ ಪ್ರಭಾವ ಹೆಚ್ಚಿರುವ ಜಗತ್ತಿನಲ್ಲಿ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ಸಹಾಯದಿಂದ ಎಲ್ಲಾ ಭಾರತೀಯ ಭಾಷೆಗಳಲ್ಲಿ ತೀರ್ಪು ಲಭ್ಯವಾಗುವಂತೆ ಮಾಡುವೆಡೆಗೆ ಭಾರತೀಯ ನ್ಯಾಯಾಂಗ ಮುಂದಿನ ಹೆಜ್ಜೆ ಇಡಲಿದೆ ಎಂದು ಕೆಲ ದಿನಗಳ ಹಿಂದೆ ಸಿಜೆಐ ತಿಳಿಸಿದ್ದರು. ಅವರ ಈ ಮಾತಿಗೆ ಪ್ರಧಾನಿ ನರೇಂದ್ರ ಮೋದಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು.

Related Stories

No stories found.
Kannada Bar & Bench
kannada.barandbench.com