ಅಸ್ಪೃಶ್ಯತೆಯ ವಿವಿಧ ರೂಪಗಳ ಬಗ್ಗೆ ಗಮನಸೆಳೆದ ಸಿಜೆಐ, ಶಬರಿಮಲೆ ತೀರ್ಪಿನ ಸಮರ್ಥನೆ

ನವದೆಹಲಿಯಲ್ಲಿ ಆಯೋಜಿಸಿದ್ದ 'ಎಂ ಕೆ ನಂಬ್ಯಾರ್ ಸ್ಮಾರಕ ಕಾರ್ಯಕ್ರಮ'ದಲ್ಲಿ ಅವರು ಉಪನ್ಯಾಸ ನೀಡಿದ ಸಿಜೆಐ ಡಿ ವೈ ಚಂದ್ರಚೂಡ್‌.
CJI DY Chandrachud
CJI DY Chandrachud
Published on

ಶಬರಿಮಲೆ ದೇಗುಲಕ್ಕೆ ಋತುಚಕ್ರದ ಮಹಿಳೆಯರನ್ನು ನಿರ್ಬಂಧಿಸುವುದು ಭಾರತೀಯ ಸಂವಿಧಾನದ 17ನೇ ಪರಿಚ್ಛೇದದ ಅಡಿಯಲ್ಲಿ ಅಸ್ಪೃಶ್ಯತೆಗೆ ಸಮಾನವಾಗಿದೆ ಎಂದು ತಾವು ನೀಡಿದ್ದ ತೀರ್ಪನ್ನು ಗುರುವಾರ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರು ಸಮರ್ಥಿಸಿಕೊಂಡರು. ಶಬರಿಮಲೆ ದೇಗುಲಕ್ಕೆ ಋತುಚಕ್ರದ ವಯೋಮಿತಿಯ ಮಹಿಳೆಯರನ್ನು ನಿರ್ಬಂಧಿಸಿದ್ದ ಕುರಿತಾದ ಪ್ರಕರಣದಲ್ಲಿ ತಾವು ನೀಡಿದ್ದ ತೀರ್ಪನ್ನು ಬಗ್ಗೆ ಅವರು ಉಲ್ಲೇಖಿಸಿದರು.

ನವದೆಹಲಿಯಲ್ಲಿ ಆಯೋಜಿಸಿದ್ದ 'ಎಂ ಕೆ ನಂಬ್ಯಾರ್ ಸ್ಮಾರಕ ಕಾರ್ಯಕ್ರಮ'ದಲ್ಲಿ ಅವರು ಉಪನ್ಯಾಸ ನೀಡಿದರು. 'ದೂರದೃಷ್ಟಿಯುಳ್ಳ ಶ್ರೀ ಎಂಕೆ ನಂಬ್ಯಾರ್ - ಮೂಲ ಉದ್ದೇಶದಾಚೆಗಿನ ಸಾಂವಿಧಾನಿಕ ಪಯಣಗಳು' ಎನ್ನುವ ವಿಷಯವಾಗಿ ಅವರು ಉಪನ್ಯಾಸ ನೀಡಿದರು.

ಭಾರತೀಯ ಸಂವಿಧಾನದ ರಚನೆಕಾರರು ಉದ್ದೇಶಪೂರ್ವಕವಾಗಿ 17 ನೇ ವಿಧಿಯ ಅಡಿಯಲ್ಲಿ ಅಸ್ಪೃಶ್ಯತೆಯ ಅರ್ಥವನ್ನು ಯಾವುದೇ ಒಂದು ಸಾಮಾಜಿಕ ಅನಿಷ್ಟಕ್ಕೆ ಮಾತ್ರವೇ ಸೀಮಿತಗೊಳಿಸಿಲ್ಲ ಎಂದು ಸಿಜೆಐ ಅಭಿಪ್ರಾಯಪಟ್ಟರು.

"ನಾವಿದ್ದ ಶ್ರೇಣೀಕೃತ ಸಮಾಜದ ಹಿನ್ನೆಲೆಯಲ್ಲಿ ಈ ನಿಬಂಧನೆಯು (ಆರ್ಟಿಕಲ್ 17) ಮೂಡಿತು. ಸಂವಿಧಾನ ರಚನಾ ಸಭೆಯ ಚರ್ಚೆಗಳನ್ನು ಓದುವಾಗ, ಅದರ ನಿರ್ಮಾತೃಗಳು ಉದ್ದೇಶಪೂರ್ವಕವಾಗಿಯೇ ಅಸ್ಪೃಶ್ಯತೆಯನ್ನು ಜಾತಿಗೆ ಸೀಮಿತವಾಗಿ ಬಳಸದೆ ಬಿಟ್ಟಿದ್ದಾರೆ ಎಂದು ನಾನು ಅರಿತುಕೊಂಡೆ; 17ನೇ ವಿಧಿಯು ಅಶುದ್ಧತೆ ಮತ್ತು ಮಾಲಿನ್ಯದ ಪರಿಕಲ್ಪನೆಯ ವಿರುದ್ಧ ಭದ್ರತೆಯನ್ನು ಒದಗಿಸಿದ್ದು ಜಾತಿ ಕೇವಲ ಅದರ ಒಂದು ಅಭಿವ್ಯಕ್ತಿಯಾಗಿದೆ," ಅವರು ಹೇಳಿದರು.

ಸಂವಿಧಾನದ ನಿರ್ಮಾತೃಗಳು ಗ್ರಹಿಸಿದ್ದ ಸಾಂವಿಧಾನಿಕ ಖಾತರಿಗಳನ್ನು ಸಾಂವಿಧಾನಿಕ ನ್ಯಾಯಾಲಯಗಳು ಸೀಮಿತಗೊಳಿಸಿ ನೋಡಲಾಗದು ಎನ್ನುವುದನ್ನು ಸಿಜೆಐ ತಮ್ಮ ಭಾಷಣದಲ್ಲಿ ಧ್ವನಿಸಿದರು.

ನಂಬ್ಯಾರ್ ಅವರು ಹಿರಿಯ ವಕೀಲ ಮತ್ತು ಮಾಜಿ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರ ತಂದೆ. ಕಾರ್ಯಕ್ರಮವು ಕೆ ಕೆ ವೇಣುಗೋಪಾಲ್ ಅವರ ಪ್ರಾಸ್ತಾವಿಕ ಭಾಷಣದೊಂದಿಗೆ ಪ್ರಾರಂಭವಾಯಿತು, ನಂತರ ಹಿರಿಯ ವಕೀಲ ಸಿ ಎಸ್ ವೈದ್ಯನಾಥನ್ ಅವರ ಮಾತನಾಡಿದರು.

ವೇಣುಗೋಪಾಲ್ ಅವರ ಪುತ್ರ, ಹಿರಿಯ ವಕೀಲ ಕೃಷ್ಣನ್ ವೇಣುಗೋಪಾಲ್ ಸಮಾರೋಪ ನುಡಿಗಳನ್ನಾಡಿದರು. ಸಿಜೆಐ ತಮ್ಮ ಭಾಷಣದಲ್ಲಿ ಸಂವಿಧಾನದ ಸಂಕುಚಿತ, ಮೂಲ ವ್ಯಾಖ್ಯಾನವನ್ನು ವಿರೋಧಿಸಿದರು.

Kannada Bar & Bench
kannada.barandbench.com