ವಕೀಲರ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಕಡಿಮೆ ಪ್ರಾತಿನಿಧ್ಯ: ಸಿಜೆಐ ಡಿ ವೈ ಚಂದ್ರಚೂಡ್ ಬೇಸರ

ವಕೀಲರ ಸಂಘಗಳಲ್ಲಿ ಮಹಿಳಾ ನ್ಯಾಯವಾದಿಗಳು ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವಂತೆ ಒತ್ತಾಯಿಸಿದ ಸಿಜೆಐ ಅವರು ಮುಂದೆ ಬನ್ನಿ, ಚುನಾವಣೆಗೆ ಸ್ಪರ್ಧಿಸಿ, ಜವಾಬ್ದಾರಿಯುತ ಸ್ಥಾನಗಳನ್ನು ಅಲಂಕರಿಸಿ ಎಂದರು.
CJI DY Chandrachud
CJI DY Chandrachud

ದೇಶದ ವಕೀಲರ ಪರಿಷತ್ತುಗಳು ಮತ್ತು ವಕೀಲರ ಸಂಘಗಳಲ್ಲಿ ಮಹಿಳಾ ಪ್ರಾತಿನಿಧ್ಯದ ಕೊರತೆ ಇರುವುದನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಪ್ರಶ್ನಿಸಿದ್ದಾರೆ.

ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠದಲ್ಲಿ ಆಯೋಜಿಸಲಾಗಿದ್ದ ಹೈಕೋರ್ಟ್ ವಕೀಲರ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ವಕೀಲರನ್ನು ಪ್ರತಿನಿಧಿಸುವ ಸಂಸ್ಥೆಗಳಲ್ಲಿ ಮಹಿಳೆಯರ ಆಯ್ಕೆಗೆ ಅನುಕೂಲಕರ ವಾತಾವರಣ ಇಲ್ಲದಿರುವುದು ಪುರುಷ ಪ್ರಧಾನತೆ ಶಾಶ್ವತವಾಗಲು ದಾರಿ ಮಾಡಿಕೊಡುತ್ತಿದೆ ಎಂದು ಸಿಜೆಐ ವಿಷಾದ ವ್ಯಕ್ತಪಡಿಸಿದರು.

ಮಹಿಳಾ ವಕೀಲರ ಸಂಖ್ಯೆಯಲ್ಲಿ ಎಂದೆಂದಿಗಿಂತಲೂ ಈಗ ಹೆಚ್ಚು  ಏರಿಕೆ ಕಂಡುಬಂದಿದ್ದರೂ ವಕೀಲರ ಪರಿಷತ್ತುಗಳು ಮತ್ತು ಸಂಘಗಳಲ್ಲಿ ಅವರ ಪ್ರಾತಿನಿಧ್ಯ ಬಿಂಬಿತವಾಗುತ್ತಿಲ್ಲ ಎಂದರು.

“ಚುನಾವಣೆಗೆ ಸ್ಪರ್ಧಿಸಲು ಯಾವುದೇ ಔಪಚಾರಿಕ ಅಡೆತಡೆಗಳು ಇಲ್ಲದಿರುವಾಗ ಮತ್ತು ಮಹಿಳಾ ವಕೀಲರ ಸಂಖ್ಯೆ ಹೆಚ್ಚು ತ್ತಿರುವಾಗಲೂ ಉದ್ಭವಿಸುತ್ತಿರುವ ಪ್ರಶ್ನೆ ಎಂದರೆ ಮಹಿಳೆಯರು ಏಕೆ ವಕೀಲರ ಸಂಘಗಳು ಇಲ್ಲವೇ ಪರಿಷತ್ತುಗಳ ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆಲ್ಲುತ್ತಿಲ್ಲ ಎಂಬುದಾಗಿದೆ” ಎಂದರು.

ವಕೀಲವರ್ಗದ ಜೊತೆಗೆ ನ್ಯಾಯಾಂಗದಲ್ಲಿ ಮಹಿಳಾ ಪ್ರಾತಿನಿಧ್ಯದ ಅಗತ್ಯತೆ ಕುರಿತಂತೆಯೂ ಅವರು ಮಾತನಾಡಿದರು.

ಭಾರತೀಯ ವಕೀಲರ ಪರಿಷತ್‌ನಲ್ಲಿ ಒಬ್ಬ ಮಹಿಳಾ ಅಧಿಕಾರಿ ಕೂಡ ಇಲ್ಲ ಸುಪ್ರೀಂ ಕೋರ್ಟ್‌ ವಕೀಲರ ಸಂಘದ ಕಾರ್ಯಕಾರಿ ಸಮಿತಿಯಲ್ಲಿ ಇರುವುದು ಕೇವಲ ಒಬ್ಬ ಮಹಿಳಾ ಸದಸ್ಯೆ ಎಂದು ಅವರು ಬೆರಳು ಮಾಡಿದರು.

ವಕೀಲರ ಸಂಘಗಳು ಇಲ್ಲವೇ ಪರಿಷತ್ತುಗಳ ಚುನಾವಣೆಗಳಲ್ಲಿ ಸ್ಪರ್ಧಿಸಲು ವ್ಯಾಪಕವಾದ ಸಂಪರ್ಕ, ಪ್ರಚಾರ ಹಾಗೂ ಮತಯಾಚನೆಯ ಅಗತ್ಯವಿರುತ್ತದೆ. ಇದರಿಂದಾಗಿ ಅಂತಹ ಕಡೆಗಳಲ್ಲಿ ಪುರುಷ ಪ್ರಧಾನತೆ ಶಾಶ್ವತವಾಗುತ್ತಿದೆ ಎಂದರು.

ಇಂತಹ ವ್ಯವಸ್ಥೆ ಮಹಿಳೆಯರ ಸ್ಥೈರ್ಯ ಕುಂದಿಸಿ ಅವರು ಚುನಾವಣೆಗಳಲ್ಲಿ ಭಾಗವಹಿಸುವುದನ್ನು ಮಾತ್ರವಲ್ಲದೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುವುದನ್ನೂ ನಿರುತ್ಸಾಹಗೊಳಿಸಬಹುದು ಎಂದು ಸಿಜೆಐ ಹೇಳಿದರು.

ಮಹಿಳೆಯರು ಚುನಾವಣೆಗೆ ಸ್ಪರ್ಧಿಸಲು ಇರುವ ಔಪಚಾರಿಕ ಅಡೆತಡೆಗಳನ್ನು ತೆಗೆದುಹಾಕುವುದಷ್ಟೇ ಸಾಲದು, ಚುನಾವಣೆಯಲ್ಲಿ ಮಹಿಳಾ ವಕೀಲರು ಭಾಗವಹಿಸುವುದಕ್ಕೆ ವಕೀಲ ಸಂಸ್ಥೆಗಳ ಪದಾಧಿಕಾರಿಗಳು  ಪ್ರೋತ್ಸಾಹ ನೀಡಬೇಕು ಎಂದರು.

ಅಲ್ಲದೆ ವಕೀಲರ ಸಂಘಗಳಲ್ಲಿ ಮಹಿಳಾ ನ್ಯಾಯವಾದಿಗಳು ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವಂತೆ ಒತ್ತಾಯಿಸಿದ ಅವರು ಮುಂದೆ ಬನ್ನಿ, ಚುನಾವಣೆಗೆ ಸ್ಪರ್ಧಿಸಿ, ಜವಾಬ್ದಾರಿಯುತ ಸ್ಥಾನಗಳನ್ನು ಅಲಂಕರಿಸಿ ಎಂದು ಕರೆ ನೀಡಿದರು.

“ಇತ್ತೀಚೆಗೆ ಸುಪ್ರೀಂ ಕೋರ್ಟ್‌ ಏಕಕಾಲಕ್ಕೆ 11 ವಕೀಲೆಯರಿಗೆ ಹಿರಿಯ ನ್ಯಾಯವಾದಿಗಳ ಸ್ಥಾನ ನೀಡಿದೆ. ಇದೊಂದು ಯಶಸ್ವಿ ಬದಲಾವಣೆ" ಎಂದು ಅವರು ತಿಳಿಸಿದರು.

Related Stories

No stories found.
Kannada Bar & Bench
kannada.barandbench.com