ಪ್ರಯಾಗ್‌ರಾಜ್‌ ರಾಷ್ಟ್ರೀಯ ಕಾನೂನು ವಿವಿ ಉದ್ಘಾಟಿಸಿದ ಸಿಜೆಐ: ಹಿಂದಿ ಮಾಧ್ಯಮದಲ್ಲಿ ಬೋಧಿಸುವಂತೆ ಸಲಹೆ

ಕಾನೂನು ಶಿಕ್ಷಣದಲ್ಲಿ ಪ್ರಗತಿ ಉಂಟಾಗಿದ್ದರೂ, ಸಮಕಾಲೀನ ಕಾನೂನು ಶಿಕ್ಷಣ ವ್ಯವಸ್ಥೆ ʼಇಂಗ್ಲಿಷ್ ಮಾತನಾಡುವ ಕೆಲವೇ ನಗರ ವಿದ್ಯಾರ್ಥಿಗಳಿಗೆʼ ಮಾತ್ರ ಅನುಕೂಲಕರವಾಗಿದೆ ಎಂದು ಸಿಜೆಐ ಹೇಳಿದರು.
ಸಿಜೆಐ ಡಿ ವೈ ಚಂದ್ರಚೂಡ್
ಸಿಜೆಐ ಡಿ ವೈ ಚಂದ್ರಚೂಡ್

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಡಾ.ರಾಜೇಂದ್ರ ಪ್ರಸಾದ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯವನ್ನು ಶುಕ್ರವಾರ ಉದ್ಘಾಟಿಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರು ವಿವಿಯಲ್ಲಿ ಹಿಂದಿಯನ್ನು ಬೋಧನಾ ಮಾಧ್ಯಮವಾಗಿ ಬಳಸುವಂತೆ ಸಲಹೆ ನೀಡಿದರು.

ನಿರರ್ಗಳವಾಗಿ ಇಂಗ್ಲಿಷ್‌ ಮಾತನಾಡುವಲ್ಲಿನ ತೊಡಕು ವೈವಿಧ್ಯಮಯ ಹಿನ್ನೆಲೆಯಿಂದ ಬರುವ ವಿದ್ಯಾರ್ಥಿಗಳಿಗೆ ತಡೆಗೋಡೆಯಾಗಿದೆ ಎಂದು ಅವರು ಹೇಳಿದರು.

"ಹಿಂದಿಯನ್ನು ಬೋಧನಾ ಮಾಧ್ಯಮವಾಗಿ ಬಳಸುವಂತೆ ಡಾ.ರಾಜೇಂದ್ರ ಪ್ರಸಾದ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಕ್ಕೆ ಮನವಿ ಮಾಡುತ್ತೇನೆ. ಇದರಿಂದ ಉತ್ತರ ಪ್ರದೇಶದ ಅತ್ಯುತ್ತಮ ವಿದ್ಯಾರ್ಥಿಗಳು ಹೈಕೋರ್ಟ್‌ನಲ್ಲಿ ಪ್ರಾಕ್ಟೀಸ್‌ ಮಾಡುವ ಅತ್ಯುತ್ತಮ ವಕೀಲರಾಗಲಿದ್ದು ಅವರಲ್ಲಿ ಹಲವು ಜಿಲ್ಲಾ ನ್ಯಾಯಾಂಗಕ್ಕೆ ಸಢರ್ಪಡೆಯಾದರೆ ಕೆಲವರು ಕಾಲೇಜುಗಳಲ್ಲಿ ಬೋಧಕರಾಗುತ್ತಾರೆ" ಎಂದು ಆಶಿಸಿದರು. ಅದರಂತೆ ಅವರು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಭಾರತೀಯ ವಕೀಲರ ಪರಿಷತ್‌ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಭಾಗವಹಿಸಿದ್ದರು.

ಕಾನೂನು ಶಿಕ್ಷಣದಲ್ಲಿ ಪ್ರಗತಿ ಉಂಟಾಗಿದ್ದರೂ, ಸಮಕಾಲೀನ ಕಾನೂನು ಶಿಕ್ಷಣ ವ್ಯವಸ್ಥೆ ʼಇಂಗ್ಲಿಷ್ ಮಾತನಾಡುವ ಕೆಲವೇ ನಗರ ವಿದ್ಯಾರ್ಥಿಗಳಿಗೆʼ ಮಾತ್ರ ಅನುಕೂಲಕರವಾಗಿದೆ ಎಂದು ಸಿಜೆಐ ಹೇಳಿದರು.

ಇಂಟರ್ನ್‌ಶಿಪ್‌ ಮತ್ತು ಕಾನೂನು ಶಿಕ್ಷಣ ಒದಗಿಸುವ ಮೂಟ್ ಕೋರ್ಟ್‌ಗಳು ಸಾಂಪ್ರದಾಯಿಕವಾಗಿ ಸವಲತ್ತು ಪಡೆದ ಮತ್ತು ಇಂಗ್ಲಿಷ್ ಮಾತನಾಡುವ ಹಿನ್ನೆಲೆಯ ವಿದ್ಯಾರ್ಥಿಗಳ ಸೇವೆಗೆ ನಿಂತಿವೆ ಎಂದು ಅವರು ಹೇಳಿದರು.

ವೈವಿಧ್ಯಮಯ ನಂಬಿಕೆ ಮತ್ತು ಅಭಿಪ್ರಾಯಗಳೊಂದಿಗೆ ಸಂವಾದದಲ್ಲಿ ತೊಡಗುವ ಕ್ರಿಯಾತ್ಮಕ ವಾತಾವರಣವನ್ನು ಕಾಲೇಜು ಕ್ಯಾಂಪಸ್ ಬೆಳೆಸಬೇಕು ಎಂದು ಅವರು ಒತ್ತಿ ಹೇಳಿದರು.

ಪ್ರಯಾಗ್‌ರಾಜ್‌ ಆಚೆಗೂ ಉತ್ತರ ಪ್ರದೇಶ ಹಾಗೂ ಇತರ ರಾಜ್ಯಗಳ ಸಣ್ಣ ಪಟ್ಟಣಗಳ ವಿದ್ಯಾರ್ಥಿಗಳನ್ನು ನೂತನ ಎನ್‌ಎಲ್‌ಯು ತಲುಪಬೇಕು ಎಂದ ಅವರು ಈ ನಿಟ್ಟಿನಲ್ಲಿ, ತಂತ್ರಜ್ಞಾನ ಭೌತಿಕ ಗಡಿಗಳನ್ನು ಮೀರಿ ಶಿಕ್ಷಣವನ್ನು ವಿಸ್ತರಿಸಲು ನಮಗೆ ಅನುವು ಮಾಡಿಕೊಡುತ್ತದೆ ಎಂದು ನೆನಪಿಸಿದರು.

ಲಖನೌದಲ್ಲಿ ರಾಮ್ ಮನೋಹರ್ ಲೋಹಿಯಾ ಎನ್ಎಲ್‌ಯುವನ್ನು ಉಲ್ಲೇಖಿಸಿದ ಸಿಜೆಐ ಚಂದ್ರಚೂಡ್, ಉತ್ತರ ಪ್ರದೇಶದ ಎರಡೂ ಎನ್ಎಲ್‌ಯುಗಳು ಈ ಕ್ಷೇತ್ರದಲ್ಲಿನ ಪ್ರಸ್ತುತ ಬೇಡಿಕೆಗಳನ್ನು ಪೂರೈಸಲು ಕಾನೂನು ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಪ್ರಯತ್ನಿಸಬೇಕು ಎಂದರು.

ಬಾಹ್ಯಾಕಾಶ ಕಾನೂನು ಮತ್ತು ತಂತ್ರಜ್ಞಾನ ಕಾನೂನಿನಂತಹ ವಿಶೇಷ ವಿಷಯಗಳಿಂದ ಎನ್ಎಲ್‌ಯುಗಳು ದೂರ ಇರಬಾರದು ಎಂದು ಸಿಜೆಐ ಕಿವಿಮಾತು ಹೇಳಿದರು.

[ಭಾಷಣದ ದೃಶ್ಯಾವಳಿ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ]

Related Stories

No stories found.
Kannada Bar & Bench
kannada.barandbench.com