ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿಧ್ವನಿಸಿದ ಮೂಲರಚನಾ ಸಿದ್ಧಾಂತದ ಚರ್ಚೆ: ಸಿಜೆಐ ಪ್ರತಿಕ್ರಿಯಿಸಿದ್ದು ಹೇಗೆ?

ಕಾಶ್ಮೀರಕ್ಕೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ವೇಳೆ ಸಿಜೆಐ ಪೀಠದೆದುರು ಹಿರಿಯ ವಕೀಲ ಸಿಬಲ್ ರಾಜ್ಯಸಭೆಯಲ್ಲಿ ಮೂಲ ರಚನಾ ಸಿದ್ಧಾಂತ ಚರ್ಚೆಯಾಗಿದ್ದನ್ನು ಪ್ರಸ್ತಾಪಿಸಿದರು.
CJI DY Chandrachud, Ranjan Gogoi, kapil sibal, Tushar mehta
CJI DY Chandrachud, Ranjan Gogoi, kapil sibal, Tushar mehta

ಸಂವಿಧಾನದ ಮೂಲರಚನಾ ಸಿದ್ಧಾಂತದ ಸಮಂಜಸತೆಗೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯ, ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಅವರು ಸೋಮವಾರ ಅಸಮಾಧಾನ ವ್ಯಕ್ತಪಡಿಸಿದ್ದು ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ ಪ್ರತಿಧ್ವನಿಸಿತು.

ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ರಾಜ್ಯದ ಸ್ಥಾನಮಾನ (370ನೇ ವಿಧಿ) ರದ್ದತಿ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ವೇಳೆ ಸಿಜೆಐ ಪೀಠದೆದುರು ಹಿರಿಯ ವಕೀಲ ಕಪಿಲ್‌ ಸಿಬಲ್‌ ರಾಜ್ಯಸಭೆಯಲ್ಲಿ ಮೂಲ ರಚನಾ ಸಿದ್ಧಾಂತ ಚರ್ಚೆಯಾಗಿದ್ದನ್ನು ಪ್ರಸ್ತಾಪಿಸಿದರು.

"ನಿಮ್ಮ ಗೌರವಾನ್ವಿತ ಸಹೋದ್ಯೋಗಿಗಳಲ್ಲಿ ಒಬ್ಬರು (ಗೊಗೋಯ್) ಮೂಲ ರಚನಾ ಸಿದ್ಧಾಂತ ಕೂಡ ಅನುಮಾನಾಸ್ಪದವಾಗಿದೆ ಎಂದು ಹೇಳಿದ್ದಾರೆ" ಎಂದು ಸಿಬಲ್ ಟೀಕಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಚಂದ್ರಚೂಡ್‌ ಅವರು ನಿವೃತ್ತ ನ್ಯಾಯಮೂರ್ತಿಗಳ ಅಭಿಪ್ರಾಯಗಳು ಬದ್ಧ ಆದೇಶಗಳಲ್ಲ ಎಂದು ಪ್ರತಿಕ್ರಿಯಿಸಿದರು.

“ನೀವೊಬ್ಬ ಸಹೋದ್ಯೋಗಿಯನ್ನು ಉಲ್ಲೇಖಿಸುವಿರಾದರೆ ನೀವು ಹಾಲಿ ಸಹೋದ್ಯೋಗಿಯನ್ನೂ ಪ್ರಸ್ತಾಪಿಸಬೇಕಾಗುತ್ತದೆ. ನ್ಯಾಯಮೂರ್ತಿಗಳಾಗಿ ಅವರ ಅಧಿಕಾರ ಮುಗಿದ ನಂತರ ಅವರು ಹೇಳಿದ್ದು ಅಭಿಪ್ರಾಯಗಳೇ ವಿನಾ ಆದೇಶಗಳಲ್ಲ” ಎಂದು ಸಿಜೆಐ ಪ್ರತಿಕ್ರಿಯಿಸಿದರು. ಅದಕ್ಕೆ ಸಿಬಲ್‌ ತಲೆದೂಗಿದರು.

ಇದಕ್ಕೆ ಆಕ್ಷೇಪಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ “ನ್ಯಾಯಾಲಯದಲ್ಲಿ ಏನಾಗುತ್ತದೆ ಎಂಬುದನ್ನು ಸಂಸತ್ತು ಚರ್ಚಿಸುವುದಿಲ್ಲ. ನ್ಯಾಯಾಲಯ ಕೂಡ ಹಾಗೆ ಮಾಡಬಾರದು. ಪ್ರತಿಯೊಬ್ಬರಿಗೂ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವಿದೆ" ಎಂದರು.

ನಿನ್ನೆ ರಾಜ್ಯಸಭೆಯಲ್ಲಿ 2023ರ ದೆಹಲಿ ಎನ್‌ಸಿಟಿ (ತಿದ್ದುಪಡಿ) ಸರ್ಕಾರ ಮಸೂದೆ ಅಂಗೀಕಾರಗೊಂಡಾಗ ಅದಕ್ಕೆ ಬೆಂಬಲ ಸೂಚಿಸಿದ್ದ ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯ ನ್ಯಾ. ಗೊಗೊಯ್‌ ಅವರು ಸಂವಿಧಾನ ಮೂಲರಚನಾ ಸಿದ್ಧಾಂತದ ಸಮಂಜಸತೆ ಬಗ್ಗೆ ಪ್ರಶ್ನೆ ಎತ್ತಿದ್ದರು.

Related Stories

No stories found.
Kannada Bar & Bench
kannada.barandbench.com