

ಕಳೆದ ಒಂದು ದಶಕದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರ ಕಚೇರಿಗೆ ಹಾಲಿ ನ್ಯಾಯಾಧೀಶರ ವಿರುದ್ಧ 8,630 ದೂರುಗಳು ಬಂದಿವೆ ಎಂದು ಕೇಂದ್ರ ಕಾನೂನು ಸಚಿವಾಲಯ ಶುಕ್ರವಾರ ಸಂಸತ್ತಿಗೆ ತಿಳಿಸಿದೆ.
ಲೋಕಸಭೆಯಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಂಸದ ಮಾಥೇಶ್ವರನ್ ವಿಎಸ್ ಕೇಳಿದ ಪ್ರಶ್ನೆಗೆ ಈ ಉತ್ತರ ನೀಡಲಾಗಿದೆ. ಹೈಕೋರ್ಟ್‌ಗಳು ಅಥವಾ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರ, ಲೈಂಗಿಕ ದೌರ್ಜನ್ಯ ಅಥವಾ ಇನ್ನಿತರ ಗಂಭೀರ ಅನುಚಿತ ವರ್ತನೆಗೆ ಸಂಬಂಧಿಸಿದ ದೂರುಗಳ ಪಟ್ಟಿಯನ್ನು ಸಂಸದರು ಕೇಳಿದ್ದರು.
ಸುಪ್ರೀಂ ಕೋರ್ಟ್‌ನಿಂದ ಪಡೆದ ದತ್ತಾಂಶದ ಆಧಾರದ ಮೇಲೆ, ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಲಿಖಿತ ಪ್ರತಿಕ್ರಿಯೆ ಸಲ್ಲಿಸಿದ್ದು, 2016-2025ರ ನಡುವೆ 8,630 ದೂರುಗಳು ಬಂದಿವೆ ಎಂದು ತಿಳಿಸಿದ್ದಾರೆ.
ಆದರೆ ಸ್ವೀಕರಿಸಿದ ದೂರುಗಳ ದಾಖಲೆ ಇದೆಯೇ ಅಥವಾ ದೂರುಗಳಿಗೆ ಸಂಬಂಧಿಸಿದಂಯರ ಯಾವುದೇ ಕ್ರಮ ಕೈಗೊಳ್ಳಲಾಗಿದೆಯೇ ಎಂಬುದನ್ನು ಕಾನೂನು ಸಚಿವಾಲಯ ಬಹಿರಂಗಪಡಿಸಿಲ್ಲ.
ಹೈಕೋರ್ಟ್‌ಗಳು ಅಥವಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಬಂದಿರುವ ಭ್ರಷ್ಟಾಚಾರ, ಲೈಂಗಿಕ ದೌರ್ಜನ್ಯ ಅಥವಾ ಇತರ ಗಂಭೀರ ಅನುಚಿತತೆಗಳಿಗೆ ಸಂಬಂಧಿಸಿದ ದೂರುಗಳ ದಾಖಲೆಗಳು ಅಥವಾ ಡೇಟಾಬೇಸ್ ನಿರ್ವಹಿಸಲು ಸುಪ್ರೀಂ ಕೋರ್ಟ್ ಬಳಸುವ ಯಾವುದೇ ಕಾರ್ಯವಿಧಾನದ ಬಗ್ಗೆ ಕೇಂದ್ರ ಸರ್ಕಾರಕ್ಕೆ ತಿಳಿದಿದೆಯೇ ಎಂಬುದು ಮತ್ತೊಂದು ಪ್ರಶ್ನೆಯಾಗಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು "ಆಂತರಿಕ ಕಾರ್ಯವಿಧಾನ"ದ ಪ್ರಕಾರ ನ್ಯಾಯಾಧೀಶರ ವಿರುದ್ಧ ದೂರುಗಳನ್ನು ಸ್ವೀಕರಿಸಲು ಸಮರ್ಥರು ಎಂದು ಪ್ರತಿಕ್ರಿಯೆ ಹೇಳಿತ್ತು. ಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆ ಪರಿಹಾರ ಮತ್ತು ಮೇಲ್ವಿಚಾರಣಾ ವ್ಯವಸ್ಥೆ (ಸಿಪಿಜಿಆರ್‌ಎಎಂಎಸ್) ಮೂಲಕ ಅಥವಾ ಯಾವುದೇ ಇತರ ರೂಪದಲ್ಲಿ ಸ್ವೀಕರಿಸಿದ ಉನ್ನತ ನ್ಯಾಯಾಂಗದ ಸದಸ್ಯರ ವಿರುದ್ಧದ ದೂರುಗಳನ್ನು ಸಿಜೆಐ ಅಥವಾ ಸಂಬಂಧಪಟ್ಟ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ರವಾನಿಸಲಾಗುತ್ತದೆ ಎಂದು ಪ್ರತಿಕ್ರಿಯೆಯಲ್ಲಿ ತಿಳಿಸಲಾಗಿದೆ.
ಉನ್ನತ ನ್ಯಾಯಾಂಗದ ಸದಸ್ಯರ ವಿರುದ್ಧದ ದೂರುಗಳ ವ್ಯವಸ್ಥಿತ ದಾಖಲೀಕರಣ, ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಲು ಅಥವಾ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಸ್ತಾಪಿಸುತ್ತದೆಯೇ ಎಂಬ ಮಾತೇಶ್ವರನ್ ಅವರ ಪ್ರಶ್ನೆಗೆ ಸಚಿವರು ಪ್ರತಿಕ್ರಿಯೆ ನೀಡಿಲ್ಲ.
[ಪ್ರತಿಕ್ರಿಯೆಯ ಪ್ರತಿ]