ನೀವು ಆಕೆಯನ್ನು ವಿವಾಹವಾಗುತ್ತೀರಾ? ಅಪ್ರಾಪ್ತೆಯ ಮೇಲೆ ಪದೇಪದೇ ಅತ್ಯಾಚಾರಗೈದ ಸರ್ಕಾರಿ ಉದ್ಯೋಗಿಗೆ ಸುಪ್ರೀಂ ಪ್ರಶ್ನೆ!

ಅರ್ಜಿದಾರ ಆರೋಪಿಗೆ ಹಿಂದೆ ಸೆಷನ್ಸ್‌ ನ್ಯಾಯಾಲಯ ಮಂಜೂರು ಮಾಡಿದ್ದ ನಿರೀಕ್ಷಣಾ ಜಾಮೀನನ್ನು ಅತ್ಯಂತ ಅಮಾನವೀಯವಾದ ಆದೇಶ ಎಂದು ಬಾಂಬೆ ಹೈಕೋರ್ಟ್‌ ಬದಿಗೆ ಸರಿಸಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು.
Rape
Rape

ಅಪ್ರಾಪ್ತೆಯ ಮೇಲೆ ಪದೇಪದೇ ಅತ್ಯಾಚಾರಗೈದ ಸರ್ಕಾರಿ ಉದ್ಯೋಗಿಯನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರು 'ಸಂತ್ರಸ್ತೆಯನ್ನು ನೀವು ವಿವಾಹವಾಗುವಿರೇ?' ಎಂದು ಪ್ರಶ್ನಿಸಿದ ವಿಲಕ್ಷಣ ಘಟನೆ ಸೋಮವಾರ ನಡೆದಿದೆ.

ಆರೋಪಿಗೆ ಸೆಷನ್ಸ್‌ ನ್ಯಾಯಾಲಯ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಬದಿಗೆ ಸರಿಸಿದ್ದ ಬಾಂಬೆ ಹೈಕೋರ್ಟ್‌ನ ಔರಂಗಬಾದ್‌ ಪೀಠದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸಿತು.

“ನಿಮ್ಮ ಕಕ್ಷಿದಾರ ಆಕೆಯನ್ನು (ಸಂತ್ರಸ್ತ ಯುವತಿ) ವಿವಾಹವಾಗುವರೇ?” ಎಂದು ಅರ್ಜಿದಾರರ ಪರ ವಕೀಲರನ್ನು ಸಿಜೆಐ ಬೊಬ್ಡೆ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲರು “ಈ ಕುರಿತು ಸೂಚನೆಗಳನ್ನು ಪಡೆಯುತ್ತೇನೆ” ಎಂದು ತಿಳಿಸಿದರು.

ಇದಕ್ಕೆ ಸಿಜೆಐ ಬೊಬ್ಡೆ ಅವರು “ಆಕೆಯ ಪ್ರಲೋಭನೆಗೆ ಒಳಗಾಗುವ ಮುನ್ನ, ಯುವತಿಯ ಮೇಲೆ ಅತ್ಯಾಚಾರಗೈಯ್ಯುವುದಕ್ಕೂ ಮೊದಲು ನೀವು ಅದನ್ನು ಯೋಚಿಸಬೇಕಿತ್ತು. ನೀವು ಸರ್ಕಾರಿ ಉದ್ಯೋಗಿ ಎಂಬುದು ನಿಮಗೆ ಗೊತ್ತಿದೆ” ಎಂದು ಪ್ರತಿಕ್ರಿಯಿಸಿದರು.

“ನೀವು ಆಕೆಯನ್ನು ವಿವಾಹವಾಗುವಂತೆ ನಾವು ಒತ್ತಾಯ ಮಾಡುತ್ತಿಲ್ಲ. ನೀವು ವಿವಾಹವಾಗುತ್ತೀರಾ ಎಂಬುದನ್ನು ನಮಗೆ ತಿಳಿಸಿ. ಇಲ್ಲವಾದರೆ ನಾವು ನಿಮ್ಮನ್ನು ವಿವಾಹವಾಗುವಂತೆ ಬಲವಂತ ಮಾಡುತ್ತಿದ್ದೇವೆ ಎಂದು ಹೇಳುತ್ತೀರಿ” ಎಂದರು.

ಸ್ವಲ್ಪ ಸಮಯದ ಬಳಿಕ ವಿಚಾರಣೆ ಮುಂದುವರೆದಾಗ ಅರ್ಜಿದಾರರ ಪರ ವಕೀಲರು “ನಾನು (ಆರೋಪಿ) ಆಕೆಯನ್ನು ಮದುವೆಯಾಗಲು ಬಯಸಿದ್ದೆ. ಆದರೆ, ಆಕೆ ಅದಕ್ಕೆ ನಿರಾಕರಿಸಿದರು. ನಾನು ಈಗ ಮತ್ತೆ ವಿವಾಹವಾಗಲಾಗದು, ಏಕೆಂದರೆ ನಾನು ಇದಾಗಲೇ ಮದುವೆಯಾಗಿದ್ದೇನೆ. ವಿಚಾರಣೆ ನಡೆಯುತ್ತಿದ್ದು, ಆರೋಪ ಪಟ್ಟಿಯನ್ನು ಸಿದ್ಧಪಡಿಸಬೇಕಿದೆ” ಎಂದರು.

ಅರ್ಜಿದಾರರ ಆರೋಪಿಯ ಬಂಧನಕ್ಕೆ ತಡೆ ನೀಡಿರುವ ಸುಪ್ರೀಂ ಕೋರ್ಟ್‌ ನಾಲ್ಕು ವಾರಗಳ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಈ ಮಧ್ಯೆ, ಸಾಮಾನ್ಯ ಜಾಮೀನಿಗೆ ಅರ್ಜಿ ಸಲ್ಲಿಸುವಂತೆ ನ್ಯಾಯಾಲಯವು ಆರೋಪಿಗೆ ಸೂಚಿಸಿದೆ.

ಘಟನೆಯ ಹಿನ್ನೆಲೆ: ಆರೋಪಿಯು ತನ್ನ ದೂರದ ಸಂಬಂಧಿಯಾದ 16 ವರ್ಷದ ಅಪ್ರಾಪ್ತೆ ಶಾಲಾ ಬಾಲಕಿಯನ್ನು ಅರ್ಜಿದಾರ ಶಾಲೆಗೆ ಹೋಗುವಾಗ ಹಿಂಬಾಲಿಸುತ್ತಿದ್ದ. ಒಂದು ದಿನ ಅಪ್ರಾಪ್ತೆಯ ಪೋಷಕರು ಮನೆಯಲ್ಲಿಲ್ಲದ ವೇಳೆ ಹಿಂಬಾಗಿಲಿನಿಂದ ಆಕೆಯ ಮನೆಯನ್ನು ಅತಿಕ್ರಮವಾಗಿ ಪ್ರವೇಶಿಸಿದ ಆರೋಪಿಯು ಆಕೆಯ ಬಾಯಿ ಮುಚ್ಚಿ, ಕೈಕಾಲುಗಳನ್ನು ಕಟ್ಟಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ.

ವಿಚಾರ ಬಹಿರಂಗಪಡಿಸಿದರೆ ಮುಖಕ್ಕೆ ಆಸಿಡ್‌ ಹಾಕುವುದಾಗಿ ಆತ ಬೆದರಿಸಿದ್ದ. ಅಲ್ಲದೆ, ಆಕೆಯ ಕುಟುಂಬದ ಸದಸ್ಯರಿಗೂ ಹಾನಿ ಮಾಡುವುದಾಗಿ ಬೆದರಿಸಿದ್ದ. ಈ ರೀತಿ ಬೆದರಿಕೆಗಳ ಮೂಲಕವೇ ಒಂಭತ್ತನೇ ತರಗತಿಯ ಸಂತ್ರಸ್ತೆಯ ಮೇಲೆ 10-12 ಬಾರಿ ಅತ್ಯಾಚಾರವನ್ನು ಅರೋಪಿ ಎಸಗಿದ್ದ. ನೊಂದ ಸಂತ್ರಸ್ತೆಯು ಒಂದು ದಿನ ಆತ್ಮಹತ್ಯೆಗೆ ಯತ್ನಿಸಿದ ವೇಳೆ ಆಕೆಯ ತಾಯಿಯು ತಡೆದ ಸಂದರ್ಭದಲ್ಲಿ ವಿಷಯವು ಹೊರಬಂದಿತು. ಆ ನಂತರ ಸಂತ್ರಸ್ತೆ ಮತ್ತು ತಾಯಿಯು ಮೇಲ್ಮನವಿದಾರ ಆರೋಪಿಯ ವಿರುದ್ಧ ದೂರು ನೀಡಲು ಮುಂದಾದರು. ಈ ವೇಳೆ ಇದನ್ನು ತಡೆದ ಆರೋಪಿಯ ತಾಯಿಯು ಸಂತ್ರಸ್ತೆಗೆ 18 ವರ್ಷ ಪೂರೈಸಿದ ಬಳಿಕ ಆಕೆಯನ್ನೇ ಮಗನಿಗೆ ವಿವಾಹ ಮಾಡಿಸುವುದಾಗಿ ಭರವಸೆ ನೀಡಿದ್ದರು.

ಈ ಮಧ್ಯೆ, ಅರ್ಜಿದಾರ ಆರೋಪಿಯ ತಾಯಿಯು “ಸಂತ್ರಸ್ತೆ ಮತ್ತು ತನ್ನ ಪುತ್ರನ ನಡುವೆ ಅಕ್ರಮ ಸಂಬಂಧವಿತ್ತು. ದೈಹಿಕ ಸಂಬಂಧವು ಒಪ್ಪಿತವಾಗಿತ್ತು ಎಂದು ಬರೆಸಿ ಸಂತ್ರಸ್ತೆಯ ಅನಕ್ಷರಸ್ಥ ತಾಯಿಯಿಂದ ಸ್ಟಾಂಪ್‌ ಕಾಗದದ ಮೇಲೆ ಸಹಿ ಪಡೆದಿದ್ದರು” ಎಂದು ಆರೋಪಿಸಲಾಗಿದೆ. ಆದರೆ, ಸಂತ್ರಸ್ತೆಯು ವಯಸ್ಕ ಹಂತ ತಲುಪಿದ ಬಳಿಕ ತನ್ನ ಪುತ್ರನ ಜೊತೆ ವಿವಾಹ ಮಾಡಿಸಲು ಆಕೆ ನಿರಾಕರಿಸಿದ್ದರಿಂದ ಸಂತ್ರಸ್ತೆಯು ದೂರು ದಾಖಲಿಸಿದ್ದರು.

ಇದನ್ನು ಆಧರಿಸಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 376 (ಅತ್ಯಾಚಾರಕ್ಕೆ ಶಿಕ್ಷೆ), 417 (ವಂಚನೆ), 506 (ಕ್ರಿಮಿನಲ್‌ ಬೆದರಿಕೆ) ಹಾಗೂ ಪೋಕ್ಸೊ ಕಾಯಿದೆಯ ಸೆಕ್ಷನ್‌ 4 ಮತ್ತು 12ರ (ಲೈಂಗಿಕ ದೌರ್ಜನ್ಯ) ಅಡಿ ದೂರು ದಾಖಲಿಸಲಾಗಿದೆ. ಇದನ್ನು ಪ್ರಶ್ನಿಸಿ ಆರೋಪಿಯು ಜಲಗಾಂವ್‌ನ ಸೆಷನ್ಸ್‌ ನ್ಯಾಯಾಲಯದ ಮೇಟ್ಟಿಲೇರಿದ್ದು, ಜನವರಿ 6ರಂದು ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿತ್ತು.

Also Read
ವಿವಾದಾತ್ಮಕ ಪೊಕ್ಸೊ ತೀರ್ಪು: ಹೆಚ್ಚುವರಿ ನ್ಯಾಯಮೂರ್ತಿಯಾಗಿ ಮುಂದುವರೆದ ನ್ಯಾ. ಪುಷ್ಪಾ ಗನೇದಿವಾಲಾ; ಪ್ರಮಾಣ ಬೋಧನೆ

ಆದರೆ, ಅಧೀನ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಸಂತ್ರಸ್ತೆಯು ಬಾಂಬೆ ಹೈಕೋರ್ಟ್‌ನ ಔರಂಗಬಾದ್‌ ಪೀಠದ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿ ಮಂಗೇಶ್‌ ಪಾಟೀಲ್‌ ಅವರ ನೇತೃತ್ವದ ಪೀಠದ ಮುಂದೆ ಸಂತ್ರಸ್ತೆಯ ಪರ ವಕೀಲರು ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಾರದಿತ್ತು ಎಂದು ವಾದಿಸಿದ್ದರು. ಸೆಷನ್ಸ್‌ ನ್ಯಾಯಾಧೀಶರ ಆದೇಶವು "ವಿಕೃತ, ಮನಸ್ವೇಚ್ಛೆಯಿಂದ ಕೂಡಿದ ಚಂಚಲ" ಆದೇಶ ಎಂದು ಅದನ್ನು ಔರಂಗಬಾದ್‌ ಪೀಠವು ಬದಿಗೆ ಸರಿಸಿತ್ತು.

ಒಂದು ವರ್ಷದ ಬಳಿಕ ನಿರೀಕ್ಷಣಾ ಜಾಮೀನನ್ನು ವಜಾಗೊಳಿಸುವುದಕ್ಕೆ ಯಾವುದೇ ಕಾರಣವಿಲ್ಲ. ಸೆಷನ್ಸ್‌ ನ್ಯಾಯಾಲಯ ವಿಧಿಸಿದ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿಲ್ಲವಾದ್ದರಿಂದ ಜಾಮೀನು ರದ್ದುಗೊಳಿಸಿದ್ದು ಸರಿಯಲ್ಲ ಎಂದು ಅರ್ಜಿದಾರ ಆರೋಪಿಯು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಎರಡು ವರ್ಷಗಳ ಬಳಿಕ ಸಂತ್ರಸ್ತೆ ದೂರು ದಾಖಲಿಸಿರುವುದನ್ನೂ ಅರ್ಜಿದಾರರು ಪ್ರಶ್ನಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com