ಸಿಜೆಐ ಯು ಯು ಲಲಿತ್ ಆಳದಲ್ಲಿ ಧಾರ್ಮಿಕ ವ್ಯಕ್ತಿ, ಆದರೆ ನಿಜವಾದ ಜಾತ್ಯತೀತರು: ನ್ಯಾ. ಬಿ ಆರ್ ಗವಾಯಿ

From left to right: Justice BR Gavai and CJI UU Lalit
From left to right: Justice BR Gavai and CJI UU Lalit

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಯು ಯು ಲಲಿತ್ ಅವರು ಆಳದಲ್ಲಿ ಧಾರ್ಮಿಕ ವ್ಯಕ್ತಿಯಾಗಿದ್ದರೂ ನಿಜವಾಗಿಯೂ ಜಾತ್ಯತೀತ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ನ್ಯಾ. ಬಿ ಆರ್ ಗವಾಯಿ ಹೇಳಿದರು.

ಬಾಂಬೆ ಹೈಕೋರ್ಟ್‌ ನಾಗಪುರ ಪೀಠದ ವಕೀಲರ ಸಂಘ ಶನಿವಾರ ಆಯೋಜಿಸಿದ್ದ ಸಿಜೆಐ ಲಲಿತ್ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ನೂತನ ಸಿಜೆಐ ತೀಕ್ಷ್ಣ ಬುದ್ಧಿ ಮತ್ತು ಸಂಸ್ಕೃತದಲ್ಲಿ ಆಳ ಜ್ಞಾನ ಪಡೆದಿದ್ದಾರೆ ಎಂದು ಕೂಡ ಅವರು ಹೇಳಿದರು.

"ಅವರು ಸ್ನೇಹಪರರು, ತೀಕ್ಷ್ಣವಾದ ಅದ್ಭುತ ಬುದ್ಧಿ ಪಡೆದಿದ್ದಾರೆ. ಅವರು ಮೇಧಾವಿ. ಚೆನ್ನಾಗಿ ಓದಿಕೊಂಡವರು, ಸಂಸ್ಕೃತದಲ್ಲಿ ಆಳವಾದ ಜ್ಞಾನ ಪಡೆದಿದ್ದಾರೆ. ಅವರು ಅಥರ್ವ ಶೀರ್ಷಕವನ್ನು ಶಾಂತವಾದ ಧ್ವನಿಯಲ್ಲಿ ವಿವರಿಸಿದರು. ಅವರಂತಹ ವಕೀಲರಿಗೆ ಸಂಸ್ಕೃತದ ಜ್ಞಾನವಿದೆ ಎಂಬುದು ಅಚ್ಚರಿಯ ಸಂಗತಿ. ಆಳದಲ್ಲಿ ಧಾರ್ಮಿಕ ವ್ಯಕ್ತಿಯಾದರೂ ಅವರು ನಿಜವಾದ ಜಾತ್ಯತೀತರು” ಎಂದು ನ್ಯಾ. ಗವಾಯಿ ಹೇಳಿದರು.

ನ್ಯಾ. ಲಲಿತ್‌, ಕಿರಿಯರು ಸೇರಿದಂತೆ ಎಲ್ಲಾ ನ್ಯಾಯಾಧೀಶರ ಆಲೋಚನೆಗಳಿಗೆ ಸ್ಪಂದಿಸಬಲ್ಲವರಾಗಿದ್ದಾರೆ. ಅವರು ಸಿಜೆಐ ಆಗಿ ಅಧಿಕಾರ ವಹಿಸಿಕೊಂಡ ನಂತರ ನಡೆದ ಮೊದಲ ಪೂರ್ಣ ನ್ಯಾಯಾಲಯದ ಸಭೆಯಿಂದ ಇದು ಸ್ಪಷ್ಟವಾಗಿದೆ ಎಂದು ನ್ಯಾ. ಗವಾಯಿ ವಿವರಿಸಿದರು.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಕ್ಷಮತೆ ವೃದ್ಧಿಸುವಲ್ಲಿ ಸಿಜೆಐ ಲಲಿತ್‌ ಅವರ ಯತ್ನಗಳನ್ನು ನ್ಯಾ. ಗವಾಯಿ ಶ್ಲಾಘಿಸಿದರು. ಪ್ರಕರಣಗಳ ಪಟ್ಟಿಗೆ ಸಂಬಂಧಿಸಿದಂತೆ ಸಿಜೆಐ ತರಲಿರುವ ಸುಧಾರಣೆಗಳನ್ನು ನ್ಯಾಯಮೂರ್ತಿಗಳು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ನಾನ್‌ ಮಿಸಿಲೇನಿಯಸ್‌ ದಿನಗಳಲ್ಲಿ (ಮಂಗಳವಾರ, ಬುಧವಾರ ಮತ್ತು ಗುರುವಾರ) ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿರುವ ವಿಚಾರಣೆಗಳಿಗೆ ಸಂಬಂಧಿಸಿದಂತೆ ಸಿಜೆಐ ಮಹತ್ವದ ಬದಲಾವಣೆ ತಂದಿದ್ದಾರೆ.

Also Read
ಭಾರತದ 49ನೇ ಸಿಜೆಐ ಆಗಿ ನ್ಯಾ. ಯು ಯು ಲಲಿತ್‌ ನೇಮಕ; ಕೇಂದ್ರ ಸರ್ಕಾರದಿಂದ ಅಧಿಸೂಚನೆ

ಆಗಸ್ಟ್ 30ರಿಂದ, ಸರ್ವೋಚ್ಚ ನ್ಯಾಯಾಲಯ ನಾನ್‌ ಮಿಸಿಲೇನಿಯಸ್‌ ದಿನಗಳಲ್ಲಿ ಬೆಳಗಿನ ಕಲಾಪದಲ್ಲಿ (10.30 ರಿಂದ ಮಧ್ಯಾಹ್ನ 1 ರವರೆಗೆ) ಸಾಮಾನ್ಯ ಪ್ರಕರಣಗಳನ್ನು ಮತ್ತು ಮಧ್ಯಾಹ್ನದ ಕಲಾಪದಲ್ಲಿ (ಮಧ್ಯಾಹ್ನ 2 ರಿಂದ 4 ರವರೆಗೆ) ಮಿಸಿಲೇನಿಯಸ್‌ ಮತ್ತು ಆಫ್ಟರ್‌ ನೋಟಿಸ್ ಪ್ರಕರಣಗಳನ್ನು ಆಲಿಸುತ್ತಿದೆ.

ಈ ಮೊದಲು ಮಿಸಿಲೇನಿಯಸ್‌ ಪ್ರಕರಣಗಳನ್ನು ಮೊದಲು ಕೈಗೆತ್ತಿಕೊಂಡು ನಂತರ ಸಾಮಾನ್ಯ ಪ್ರಕರಣಗಳ ವಿಚಾರಣೆ ನಡೆಯುತ್ತಿತ್ತು. ಹೀಗಾಗಿ ಸಮಯದ ಅಭಾವ ಉಂಟಾಗಿ ಸಾಮಾನ್ಯ ಪ್ರಕರಣಗಳನ್ನು ಹಲವು ಬಾರಿ ಆಲಿಸಲು ಸಾಧ್ಯವಾಗುತ್ತಿರಲಿಲ್ಲ. ಹೊಸ ವ್ಯವಸ್ಥೆ ಇದನ್ನು ಸರಿಪಡಿಸಲು ಯತ್ನಿಸುತ್ತದೆ ಎಂದು ನ್ಯಾ. ಗವಾಯಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ ಎಸ್ ಸಿರ್‌ಪುರ್‌ಕರ್ ಮತ್ತು ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಕೂಡ ಭಾಗವಹಿಸಿದ್ದರು.

Related Stories

No stories found.
Kannada Bar & Bench
kannada.barandbench.com