ಇಬ್ಬರು ವಯಸ್ಕರು ಕೆಲದಿನ ಒಟ್ಟಿಗೆ ಇದ್ದರು ಎಂದ ಮಾತ್ರಕ್ಕೆ ಲಿವ್ ಇನ್ ಸಂಬಂಧದ ಮಾನ್ಯತೆ ದೊರೆಯದು: ಪಂಜಾಬ್ ಹೈಕೋರ್ಟ್

ತಾವು ಲಿವ್-ಇನ್ ಸಂಬಂಧದಲ್ಲಿದ್ದು ಸಂಬಂಧಿಕರಿಂದ ರಕ್ಷಣೆ ಒದಗಿಸಬೇಕು ಎಂದು ಕೋರಿ 20 ವರ್ಷದ ಯುವಕ ಮತ್ತು 14 ವರ್ಷದ ಬಾಲಕಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತು.
ಇಬ್ಬರು ವಯಸ್ಕರು ಕೆಲದಿನ ಒಟ್ಟಿಗೆ ಇದ್ದರು ಎಂದ ಮಾತ್ರಕ್ಕೆ ಲಿವ್ ಇನ್ ಸಂಬಂಧದ ಮಾನ್ಯತೆ ದೊರೆಯದು: ಪಂಜಾಬ್ ಹೈಕೋರ್ಟ್

ಇಬ್ಬರು ವಯಸ್ಕರು ಕೆಲ ದಿನಗಳ ಕಾಲ ಒಟ್ಟಿಗೆ ಇದ್ದರು ಎಂದ ಮಾತ್ರಕ್ಕೆ ಅದಕ್ಕೆ ಲಿವ್‌ ಇನ್‌ ಸಂಬಂಧದ ನ್ಯಾಯಸಮ್ಮತತೆಯನ್ನು ಅನ್ವಯಿಸಲಾಗದು ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇತ್ತೀಚೆಗೆ ತಿಳಿಸಿದೆ. ಆ ಮೂಲಕ ತಾವು ಲಿವ್‌-ಇನ್‌ ಸಂಬಂಧದಲ್ಲಿದ್ದು ಸಂಬಂಧಿಕರಿಂದ ತಮ್ಮ ಜೀವ ಮತ್ತು ಸ್ವಾತಂತ್ರ್ಯಕ್ಕೆ ರಕ್ಷಣೆ ಒದಗಿಸಬೇಕು ಎಂದು ಕೋರಿ 20 ವರ್ಷದ ಯುವಕ ಮತ್ತು 14 ವರ್ಷದ ಬಾಲಕಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತು.

ಮಹಿಳೆಯರ ರಕ್ಷಣೆ ಕಾಯಿದೆ-2005 ಜಾರಿಗೆ ತರುವಾಗ ಮತ್ತು ಕೌಟುಂಬಿಕ ಸಂಬಂಧದ ಸೆಕ್ಷನ್‌ 2 (ಎಫ್) ವ್ಯಾಖ್ಯಾನಿಸುವಾಗ ಶಾಸಕಾಂಗ ಈ ರೀತಿಯ ಸಾಂಗತ್ಯಕ್ಕೆ ಕೆಲ ನ್ಯಾಯಸಮ್ಮತತೆಯನ್ನು ಅಡಕಗೊಳಿಸಿರುವ ಕಾರಣ ವಿರುದ್ಧ ಲಿಂಗದ ಇಬ್ಬರು ವಯಸ್ಕರ ನಡುವಿನ ಲಿವ್‌-ಇನ್‌ ಸಂಬಂಧದ ಪರಿಕಲ್ಪನೆ ಭಾರತದಲ್ಲಿಯೂ ಮಾನ್ಯತೆ ಪಡೆದಿದೆ ಎಂದು ನ್ಯಾ. ಮನೋಜ್ ಬಜಾಜ್ ಅವರಿದ್ದ ಪೀಠ ತಿಳಿಸಿದೆ.

"ಅಂತಹ ಸಂಬಂಧಕ್ಕೆ ಕಾನೂನುಬದ್ಧ ಪಾವಿತ್ರ್ಯತೆ ಒದಗಿಸಬೇಕಾದರೆ ಆ ಜೋಡಿಗಳು ಕೆಲ ಷರತ್ತುಗಳನ್ನು ಪೂರ್ಣಗೊಳಿಸುವ ಅಗತ್ಯವಿದೆ. ಇಬ್ಬರು ವಯಸ್ಕರು ಕೆಲವು ದಿನಗಳ ಕಾಲ ಒಟ್ಟಿಗೆ ವಾಸವಿದ್ದರು ಎಂದ ಮಾತ್ರಕ್ಕೆ ಅವರು ನಿಜವಾಗಿಯೂ ಲಿವ್‌ ಇನ್‌ ಸಂಬಂಧದಲ್ಲಿದ್ದರು ಎನ್ನಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಬಹಳಷ್ಟು ಯುವಜನರು ಲಿವ್‌- ಇನ್‌ ಸಂಬಂಧ ಬಯಸಿ ಅರ್ಜಿ ಸಲ್ಲಿಸುತ್ತಿರುವ ಪ್ರವೃತ್ತಿ ಬಗ್ಗೆ ನ್ಯಾಯಾಲಯ ಹೀಗೆ ಹೇಳಿದೆ: ಅಂತಹ ಅರ್ಜಿಗಳು ಬಹುಪಾಲು ಔಪಚಾರಿಕ ಸಾಂಕೇತಿಕ ಆಪಾದನೆಯನ್ನು ಒಳಗೊಂಡಿರುತ್ತವೆ. ಕಾಲ್ಪನಿಕ ಕ್ರಿಯಾಕಾರಣಗಳನ್ನು ಹೊಂದಿರುತ್ತವೆ. ಮತ್ತು ವಿರಳವಾಗಿ ವಾಸ್ತವ ಮತ್ತು ನೈಜ ಬೆದರಿಕೆ ಕಂಡಬಂದಿರುತ್ತದೆ. ಅಲ್ಲದೆ ವಿಚಾರಣೆಗಾಗಿ ಬಹಳಷ್ಟು ಪ್ರಕರಣಗಳು ಕಾಯುತ್ತಿರುವಾಗ ಈ ರೀತಿಯ ಪ್ರಕರಣಗಳು ನ್ಯಾಯಾಲಯದ ಗಣನೀಯ ಸಮಯವನ್ನು ಬಳಸಿಕೊಳ್ಳುತ್ತವೆ.

ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಹುಡುಗಿಯ ಪೋಷಕರು ಈ ಸಂಬಂಧವನ್ನು ವಿರೋಧಿಸಿದ್ದರು. ಕಾನೂನುಬದ್ಧ ವಿವಾಹ ವಯೋಮಾನಕ್ಕಿಂತಲೂ ಕಡಿಮೆ ವಯಸ್ಸಿನ ಹುಡುಗಿಗೆ ಪೋಷಕರು ಬೇರೆ ಮದುವೆಗೆ ವ್ಯವಸ್ಥೆ ಮಾಡಲು ಮುಂದಾಗಿದ್ದರಿಂದ ಆಕೆ ಮನೆ ತೊರೆದು ಹುಡುಗನ ಬಳಿಗೆ ಬಂದಿದ್ದಳು. ಮದುವೆಯ ವಯಸ್ಸು ಆಗುವವರೆಗೆ ಇಬ್ಬರೂ ಸಹ ಜೀವನ (ಲಿವ್‌ ಇನ್‌ ಸಂಬಂಧ) ನಡೆಸಲು ನಿರ್ಧರಿಸಿದ್ದರು. ನಂತರ ಬಾಲಕಿಯ ಪೋಷಕರ ಕಡೆಯವರು ಪ್ರಾಣ ಬೆದರಿಕೆ ಹಾಕಲಾರಂಭಿಸಿದ್ದರು ಎಂಬುದಾಗಿ ಅರ್ಜಿದಾರರು ಆರೋಪಿಸಿದ್ದರು. ಪೊಲೀಸ್‌ ರಕ್ಷಣೆ ಕೋರಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಅವರು ನ್ಯಾಯಾಲಯದ ಮೊರೆ ಹೋಗಲು ತೊಡಕುಂಟಾಗಿತ್ತು ಎಂದಿದ್ದರು. ಈವರೆಗೆ ತಮ್ಮ ನಡುವೆ ದೈಹಿಕ ಸಂಬಂಧ ಏರ್ಪಟ್ಟಿಲ್ಲ. ಏಕೆಂದರೆ ತಾವು ಕಾನೂನು ಬದ್ಧ ವೈವಾಹಿಕ ವಯಸ್ಸನ್ನು ಎದುರುನೋಡುತ್ತಿದ್ದೇವೆ. ಹೀಗಾಗಿ ಪ್ರತಿವಾದಿಗಳಿಗೆ ತಮ್ಮ ಜೀವನದಲ್ಲಿ ಹಸ್ತಕ್ಷೇಪ ಮಾಡುವ ಹಕ್ಕಿಲ್ಲ ಎಂದಿದ್ದರು.

ಇಬ್ಬರು ವಯಸ್ಕರಿಗೆ ಒಟ್ಟಿಗೆ ವಾಸಿಸುವ ಹಕ್ಕಿದ್ದು 2005ರ ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣಾ ಕಾಯಿದೆಯಡಿ ಅಂತಹ ಸಂಬಂಧಗಳನ್ನು ಒಂದು ಮಟ್ಟಿಗೆ ನ್ಯಾಯಸಮ್ಮತಗೊಳಿಸಲಾಗುತ್ತದೆ. ಆದರೆ ಇಂದಿರಾ ಶರ್ಮಾ ಮತ್ತು ವಿಕೆವಿ ಶರ್ಮಾ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ 2013ರಲ್ಲಿ ನೀಡಿದ್ದ ತೀರ್ಪಿನಂತೆ ಅಂತಹ ಸಂಬಂಧಗಳಿಗೆ ಕಾನೂನಾತ್ಮಕ ಪಾವಿತ್ರ್ಯವನ್ನುಅನ್ವಯಿಸುವ ನಿಯಮಗಳಿವೆ. ಇದರಲ್ಲಿ ಸಂಬಂಧದ ಅವಧಿ, ಲೈಂಗಿಕ ನಂಟು, ಮಕ್ಕಳು, ಸಾರ್ವಜನಿಕ ಸಾಮಾಜೀಕರಣದಂತಹ ವಿವಿಧ ಅಂಶಗಳು ಸೇರಿವೆ ಎಂದು ನ್ಯಾಯಾಲಯ ತಿಳಿಸಿದೆ.

ಈಗಿನ ಪ್ರಕರಣದಲ್ಲಿ ಬಾಲಕಿಗೆ ಕೇವಲ 14 ವರ್ಷ ವಯಸ್ಸಾಗಿದ್ದು ಹುಡುಗ ಆಕೆಯ ವಾದಮಿತ್ರನೆಂದು ಹೇಳಿಕೊಂಡಿದ್ದಾನೆ. ಕೇವಲ ಮೊದಲನೇ ಅರ್ಜಿದಾರನ ಸಹಿ ಇರುವ ಅಫಿಡವಿಟ್‌ ಮಾತ್ರ ಸಲ್ಲಿಸಲಾಗಿದೆ. ರಿಟ್‌ ಅರ್ಜಿಯಲ್ಲಿ ಅಪ್ರಾಪ್ತ ಬಾಲಿಕಿಯ ಸಹಜ ಪೋಷಕರ ಮೇಲೆ ಸಂಪೂರ್ಣ ಆರೋಪ ಹೊರಿಸಲಾಗಿದೆ. ಹುಡುಗಿ ಸ್ವಪ್ರೇರಣೆಯಿಂದ ಮನೆ ತೊರೆದಿದ್ದಾಳೆ ಎಂಬುದನ್ನು ಪ್ರತಿಪಾದಿಸುವಾಗ ಹುಡುಗನ ಹಿತಾಸಕ್ತಿ ಅಪ್ರಾಪ್ತೆಯ ಹಿತಾಸಕ್ತಿಗೆ ವಿರುದ್ಧವಾಗಿಲ್ಲ ಮತ್ತು ತಾನು ಆಕೆಯ ಹಿತಕ್ಕಾಗಿ ಶ್ರಮಿಸುತ್ತಿದ್ದೇನೆ ಎಂಬುದು ಅರ್ಜಿಯಲ್ಲಿ ವ್ಯಕ್ತವಾಗಿಲ್ಲ ಎಂದು ಪೀಠ ಹೇಳಿದೆ.

ಅಲ್ಲದೆ ಅಪ್ರಾಪ್ತೆಯನ್ನು ಅಪಹರಿಸಿದ ಪ್ರಕರಣದಲ್ಲಿ ಅರ್ಜಿದಾರ ಈಗಾಗಲೇ ಆರೋಪಿಯಾಗಿದ್ದು ಬಾಲಕಿಯ ಕಾನೂನುಬದ್ಧ ಪ್ರತಿನಿಧಿ ತಾನು ಎಂದು ಹೇಳಿಕೊಳ್ಳುವ ಆತನ ನಿಲುವು ಒಪ್ಪಲು ಯೋಗ್ಯವಾಗಿಲ್ಲ. ಅಲ್ಲದೆ ಪೊಲೀಸರ ಪಾತ್ರದ ಕುರಿತು ಅಸ್ಪಷ್ಟನೆ ಇದ್ದು ಯಾವುದೇ ವಾಸ್ತವಿಕ ಸಂಗತಿಗಳು ಮತ್ತು ವಿವರಗಳು ಇಲ್ಲ. ಅರ್ಜಿದಾರ ತರಾತುರಿಯಲ್ಲಿ ಅರ್ಜಿ ಸಲ್ಲಿಸಿದ್ದು ಹುಡುಗಿಯ ತಂದೆ ದಾಖಲಿಸಿರುವ ಎಫ್‌ಐಆರ್‌ಗೆ ಪ್ರತಿವಾದ ಸಲ್ಲಿಸಬೇಕು ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿತು.

ಅಪ್ರಾಪ್ತೆಯನ್ನು ಆಕೆಯ ಪೋಷಕರಿಗೆ ಒಪ್ಪಿಸುವ ಹೊಣೆ ಪೊಲೀಸರದ್ದು ಎಂದು ನ್ಯಾಯಾಲಯ ಈ ಸಂದರ್ಭದಲ್ಲಿ ಆದೇಶಿಸಿತು.

Related Stories

No stories found.
Kannada Bar & Bench
kannada.barandbench.com