ಪ್ರಸಕ್ತ ಸಾಲಿನ ಐಸಿಎಸ್‌ಇ ಮತ್ತು ಸಿಬಿಎಸ್ಇ 12ನೇ ತರಗತಿ ಪರೀಕ್ಷೆ ನಡೆಯುತ್ತದೆಯೋ ಇಲ್ಲವೋ ಎಂಬ ಬಗ್ಗೆ ಇನ್ನೆರಡು ದಿನಗಳಲ್ಲಿ ಕೇಂದ್ರ ಸರ್ಕಾರವು ನಿರ್ಧರಿಸಲಿದೆ ಎಂದು ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಸೋಮವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯೆಯಾಗಿ ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ದಿನೇಶ್ ಮಹೇಶ್ವರಿ ಅವರಿದ್ದ ಪೀಠವು, "ನೀವು ನಿರ್ಧಾರ ಕೈಗೊಳ್ಳಬಹುದು. ಆದರೆ, ಒಂದು ವೇಳೆ ಕಳೆದ ವರ್ಷದ ನೀತಿಯನ್ನು ಹಿಂತೆಗೆದುಕೊಳ್ಳುತ್ತಿದ್ದರೆ ಅದಕ್ಕೆ ಸಮರ್ಥ ಕಾರಣಗಳನ್ನು ನೀಡಬೇಕು" ಎಂದು ಹೇಳಿತು.
ಕಳೆದ ವರ್ಷ ಅಳವಡಿಸಿಕೊಂಡ ನೀತಿಯನ್ನು ಈ ವರ್ಷವೂ ಅನುಸರಿಸಬೇಕು ಎನ್ನುವ ʼಆಶಾದಾಯಕ ಭರವಸೆʼ ವಿದ್ಯಾರ್ಥಿಗಳಿಗಿದೆ ಎಂದು ನ್ಯಾ. ಖಾನ್ವಿಲ್ಕರ್ ಗಮನಸೆಳೆದರು. ಪ್ರಕರಣದ ಮುಂದಿನ ವಿಚಾರಣೆ ಜೂನ್ 3ಕ್ಕೆ ನಿಗದಿಯಾಗಿದೆ.
ಐಸಿಎಸ್‌ಇ ಮತ್ತು ಸಿಬಿಎಸ್‌ಇಯ 12ನೇ ತರಗತಿ ಪರೀಕ್ಷೆ ರದ್ದುಗೊಳಿಸುವಂತೆ ಕೋರಿದ್ದ ಅರ್ಜಿಯ ಹಿಂದಿನ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಈ ಕುರಿತು ಶೀಘ್ರ ನಿರ್ಣಯ ಕೈಗೊಳ್ಳುವುದರಿಂದ ಅರ್ಜಿದಾರರು ಆಶಾವಾದಿಗಳಾಗಿರಬೇಕು ಎಂದು ಪೀಠ ಹೇಳಿತ್ತು.
ಅನಿರ್ದಿಷ್ಟಾವಧಿಗೆ ಪರೀಕ್ಷೆಗಳನ್ನು ಮುಂದೂಡದಂತೆ ಐಸಿಎಸ್‌ಇ ಮತ್ತು ಸಿಬಿಎಸ್‌ಇಯನ್ನು ತಡೆಯಬೇಕು. ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ಕಳೆದ ವರ್ಷ ಅನುಸರಿಸಿದ್ದ ವಿಧಾನ ಬಳಸಿ ಅಂಕಗಳನ್ನು ನೀಡಬೇಕು ಎಂದು ದೆಹಲಿ ಮೂಲದ ವಕೀಲೆ ಮಮತಾ ಶರ್ಮಾ ಮನವಿಯಲ್ಲಿ ಒತ್ತಾಯಿಸಿದ್ದರು.