ಸಿಎಲ್ಎಟಿ ಗೃಹ ಕೇಂದ್ರಿತ ಆನ್‌ಲೈನ್ ಪರೀಕ್ಷೆಯಲ್ಲ, ಅತ್ಯಂತ ಸುರಕ್ಷತೆಯಿಂದ ಪರೀಕ್ಷೆ ನಡೆಸಲಾಗುವುದು: ಎನ್ಎಲ್‌ಯುಸಿ

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅನ್ ಲಾಕ್-3 ಮಾರ್ಗಸೂಚಿಗಳಿಗೆ ಸಿಎಲ್ಎಟಿ-2020 ವಿರುದ್ಧವಾಗಿದೆ ಎಂಬ ಅರ್ಜಿದಾರರ ವಾದಕ್ಕೆ ಪ್ರತಿಕ್ರಿಯಿಸಿರುವ ಒಕ್ಕೂಟವು ಮಾರ್ಗಸೂಚಿಗಳು ಪ್ರಸ್ತುತ ಜಾರಿಯಲ್ಲಿಲ್ಲ ಎಂದಿದೆ.
CLAT 2020 and Delhi HC
CLAT 2020 and Delhi HC

ಪ್ರಸಕ್ತ ವರ್ಷದ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯು (ಸಿಎಲ್‌ಎಟಿ-2020) ಗೃಹ ಕೇಂದ್ರಿತ ಆನ್‌ಲೈನ್ ಪರೀಕ್ಷೆಯಲ್ಲ ಎಂದು ದೆಹಲಿ ಹೈಕೋರ್ಟ್‌ಗೆ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟ ತಿಳಿಸಿದೆ (ವಿ ಗೋವಿಂದ ವರ್ಸಸ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟ).

ಸೆಪ್ಟೆಂಬರ್ 28ರಂದು ನಡೆಯುವ ಸಿಎಲ್‌ಎಟಿ ಪರೀಕ್ಷೆಯನ್ನು ಸುಮಾರು 78 ಸಾವಿರ ವಿದ್ಯಾರ್ಥಿಗಳು ಬರೆಯುವ ನಿರೀಕ್ಷೆಯಿದೆ ಎಂದಿರುವ ಒಕ್ಕೂಟವು “ತಾಂತ್ರಿಕ ಕ್ರಮಗಳನ್ನು ಒಳಗೊಂಡ ಗೃಹ ಕೇಂದ್ರಿತ ಆನ್‌ಲೈನ್ ಪರೀಕ್ಷೆಯಿಂದ ಸಿಎಲ್ಎಟಿಯಂಥ ಅತಿ ಹೆಚ್ಚು ಮಹತ್ವವಿರುವ ಪರೀಕ್ಷೆಯಲ್ಲಿ ಪಾರದರ್ಶಕತೆ, ನ್ಯಾಯಬದ್ಧತೆ ಮತ್ತು ಸಮಗ್ರತೆ ನಿರೀಕ್ಷಿಸಲಾಗದು” ಎಂದು ಹೇಳಿದೆ.

“ಎಲ್ಲಾ ಅಭ್ಯರ್ಥಿಗಳ ಮನೆಯಲ್ಲಿ ಈ ಸಂಪನ್ಮೂಲಗಳಿವೆ (ಲ್ಯಾಪ್ ಟಾಪ್, ಡೆಸ್ಕ್ ಟಾಪ್, ಇಂಟರ್ ನೆಟ್ ಮತ್ತು ನೆಟ್ ವರ್ಕ್ ಸ್ಥಿರತೆ) ಎಂದು ಒಕ್ಕೂಟ ನಿರೀಕ್ಷಿಸಲಾಗದು. ಹೀಗೆ ಮಾಡುವುದರಿಂದ (ಗೃಹ ಕೇಂದ್ರಿತ ಆನ್ ಲೈನ್ ಪರೀಕ್ಷೆ ನಡೆಸುವುದರಿಂದ) ಆರ್ಥಿಕವಾಗಿ ಹಿಂದುಳಿದ ಅಥವಾ ಇಂಟರ್ ನೆಟ್ ಸೌಕರ್ಯ ಹೊಂದಿಲ್ಲದ ಪ್ರದೇಶಗಳಲ್ಲಿನ ಅಭ್ಯರ್ಥಿಗಳಿಗೆ ಸಾಕಷ್ಟು ತೊಂದರೆಯಾಗಲಿದೆ.”
ಎನ್ಎಲ್‌ಯು ಒಕ್ಕೂಟ ಸಲ್ಲಿಸಿರುವ ಅರ್ಜಿ

ಕೋವಿಡ್ ಹಿನ್ನೆಲೆಯಲ್ಲಿ ಗೃಹ ಕೇಂದ್ರಿತ ಆನ್‌ಲೈನ್ ಪರೀಕ್ಷೆ ನಡೆಸುವಂತೆ ವಿ ಗೋಂವಿದ ರಮಣನ್ ಅವರು ಸಲ್ಲಿಸಿದ್ದ ಅರ್ಜಿಗೆ ಒಕ್ಕೂಟವು ಮೇಲಿನಂತೆ ಪ್ರತಿಕ್ರಿಯಿಸಿದೆ. ಇಂದು ಪ್ರಕರಣದ ಅಂತಿಮ ವಿಚಾರಣೆ ನಡೆಯುವ ಸಾಧ್ಯತೆ ಇದೆ.

ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಹಲವು ಕೇಂದ್ರ ನಿರ್ಧರಿತ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಇದರ ಸಾಧ್ಯಾಸಾಧ್ಯತೆಯ ಮೇಲೆ ಸುಪ್ರೀಂ ಕೋರ್ಟ್ ಕಣ್ಣಿಟ್ಟಿದೆ ಎಂದು ಹೈಕೋರ್ಟ್‌ಗೆ ಒಕ್ಕೂಟ ಹೇಳಿದೆ. ಭೌತಿಕ ಕೇಂದ್ರಗಳಲ್ಲಿ ಸಿಎಲ್‌ಎಟಿ ಆನ್‌ಲೈನ್ ಪರೀಕ್ಷೆ ನಡೆಸುವ ಒಕ್ಕೂಟದ ತೀರ್ಮಾನವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಜುಲೈ 29ರಂದು ವಜಾಗೊಳಿಸಿತ್ತು.

Also Read
ಸಿಎಲ್ಎಟಿ ನಿರಂತರ ಮುಂದೂಡಿಕೆ, ಅಡೆತಡೆಯಿಂದ ಎನ್ಎಲ್ಎಟಿಗೆ ನಿರ್ಧಾರ:ಹೈಕೋರ್ಟ್‌ಗೆ ಎನ್ಎಲ್ಎಸ್ಐಯು ಅಫಿಡವಿಟ್ ಸಲ್ಲಿಕೆ

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅನ್ ಲಾಕ್-3 ಮಾರ್ಗಸೂಚಿಗಳಿಗೆ ಸಿಎಲ್ಎಟಿ-2020 ವಿರುದ್ಧವಾಗಿದೆ ಎಂಬ ಅರ್ಜಿದಾರರ ವಾದಕ್ಕೆ ಪ್ರತಿಕ್ರಿಯಿಸಿರುವ ಒಕ್ಕೂಟವು ಸರ್ಕಾರದ ಮಾರ್ಗಸೂಚಿಗಳು ಪ್ರಸ್ತುತ ಜಾರಿಯಲ್ಲಿಲ್ಲ ಎಂದಿದೆ.

ಸಿಎಲ್‌ಎಟಿ ನಡೆಸುವುದಕ್ಕೂ ಮುನ್ನ ಕೈಗೊಳ್ಳುವ ಮುಂಜಾಗ್ರತಾ ಕ್ರಮದ ಕುರಿತು ಈಗಾಗಲೇ ಕೇಂದ್ರ ಕಾನೂನು ಸಚಿವಾಲಯಕ್ಕೆ ಮಾಹಿತಿ ನೀಡಲಾಗಿದೆ. ಅತ್ಯಂತ ಸುರಕ್ಷತೆಯಿಂದ ಪರೀಕ್ಷೆ ನಡೆಸಲು ನಿಗಾ ವಹಿಸಲಾಗಿದ್ದು, ಅಧಿಕಾರಿ ವರ್ಗದ ಜೊತೆ ನಿರಂತರ ಸಂಪರ್ಕ ಇಟ್ಟುಕೊಳ್ಳಲಾಗಿದೆ. ಯಾವೊಂದು ಪರೀಕ್ಷಾ ಕೇಂದ್ರವೂ ಕಂಟೈನ್‌ಮೆಂಟ್ ವಲಯದಲ್ಲಿ ಇಲ್ಲ ಎಂದು ಒಕ್ಕೂಟ ಹೇಳಿದೆ.

ಒಕ್ಕೂಟವು ಬೆಂಗಳೂರಿನಲ್ಲಿರುವುದರಿಂದ ಪ್ರಕರಣದ ವಿಚಾರಣೆ ನಡೆಸುವ ಪ್ರಾದೇಶಿಕ ವ್ಯಾಪ್ತಿಯು ದೆಹಲಿ ಹೈಕೋರ್ಟ್‌ಗೆ ಇಲ್ಲ ಎಂದು ವಾದಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com