ವೃಷಭಾವತಿ ನದಿ ಜಲಾನಯನ ಪ್ರದೇಶದ 14 ಒತ್ತುವರಿ ತೆರವು: ಹೈಕೋರ್ಟ್‌ಗೆ ಬಿಬಿಎಂಪಿ ವಿವರಣೆ

ಬಿಬಿಎಂಪಿಯ ರಾಜಕಾಲುವೆ ಉಸ್ತುವಾರಿ ವಿಭಾಗದ ಮುಖ್ಯ ಎಂಜಿನಿಯರ್‌ ಅವರು ಸಿದ್ಧಪಡಿಸಿರುವ ಅನುಪಾಲನಾ ವರದಿಯನ್ನು ಫೋಟೊ ಸಹಿತ ದಾಖಲೆಗಳೊಂದಿಗೆ ಪೀಠಕ್ಕೆ ಸಲ್ಲಿಕೆ.
BBMP and Karnataka HC
BBMP and Karnataka HC
Published on

ಬೆಂಗಳೂರಿನ ವೃಷಭಾವತಿ ನದಿ ಜಲಾನಯನ ಪ್ರದೇಶದ ಒಟ್ಟು 14 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಕರ್ನಾಟಕ ಹೈಕೋರ್ಟ್‌ಗೆ ಗುರುವಾರ ಮಾಹಿತಿ ನೀಡಿದೆ.

ತ್ಯಾಜ್ಯ ಹಾಗೂ ರಾಸಾಯನಿಕ ಸೇರ್ಪಡೆಯಿಂದ ಮಲಿನಗೊಂಡಿರುವ ವೃಷಭಾವತಿ ನದಿ ಸಂರಕ್ಷಣೆಗೆ ಕ್ರಮ ಕೈಗೊಳ್ಳಲು ನಿರ್ದೇಶಿಸುವಂತೆ ಕೋರಿ ವಕೀಲೆ ಗೀತಾ ಮಿಶ್ರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಬಿಬಿಎಂಪಿಯ ರಾಜಕಾಲುವೆ ಉಸ್ತುವಾರಿ ವಿಭಾಗದ ಮುಖ್ಯ ಎಂಜಿನಿಯರ್‌ ಎಂ ಲೋಕೇಶ್ ಅವರು ಸಿದ್ಧಪಡಿಸಿರುವ ಅನುಪಾಲನಾ ವರದಿಯನ್ನು ಫೋಟೊ ಸಹಿತ ದಾಖಲೆಗಳೊಂದಿಗೆ ಪೀಠಕ್ಕೆ ಬಿಬಿಎಂಪಿ ಪ್ರತಿನಿಧಿಸಿದ್ದ ವಕೀಲರು ಸಲ್ಲಿಸಿದರು. ಇದನ್ನು ದಾಖಲಿಸಿಕೊಂಡ ಪೀಠವು ವಿಚಾರಣೆಯನ್ನು ಮೂರು ವಾರ ಕಾಲ ಮುಂದೂಡಿತು.

ಕಳೆದ ಜುಲೈ 28ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಸರ್ವೇ ಇಲಾಖೆ ನಡೆಸಿರುವ ಸಮೀಕ್ಷೆಯ ಪ್ರಕಾರ ವೃಷಭಾವತಿ ಉಪ ನದಿಗಳ ನಾಲೆಯ ಒಟ್ಟು 17 ಎಕರೆ 25 ಗುಂಟೆ ಹಾಗೂ ನದಿ ಜಲಾಯನ ಪ್ರದೇಶಗಳಲ್ಲಿ 10 ಎಕರೆ 25 ಗುಂಟೆ ಜಾಗ ಖಾಸಗಿ ವ್ಯಕ್ತಿಗಳಿಂದ ಒತ್ತುವರಿಯಾಗಿದೆ. ಈ ಒತ್ತುವರಿಯನ್ನು ಬಿಬಿಎಂಪಿಯ ಸಂಬಂಧಪಟ್ಟ ಸಹಾಯಕ ಕಾರ್ಯಕಾರಿ ಎಂಜಿನಿಯರ್‌ಗಳು ಸೆಪ್ಟೆಂಬರ್‌ 30ರೊಳಗೆ ತೆರವುಗೊಳಿಸಿ, ಅಕ್ಟೋಬರ್‌ 11ರೊಳಗೆ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿತ್ತು.

ಇದರ ಭಾಗವಾಗಿ ಅನುಪಾಲನಾ ವರದಿ ಸಲ್ಲಿಸಿರುವ ಬಿಬಿಎಂಪಿಯು ಹೈಕೋರ್ಟ್ ನಿರ್ದೇಶದನಂತೆ ವೃಷಭಾವತಿ ನದಿ ಜಲಾಯನ ಪ್ರದೇಶದ ಸರ್ವೇ ನಡೆಸಲಾಗಿದೆ. ಸರ್ವೇ ಇಲಾಖೆಯ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿರುವ ಒತ್ತುವರಿ ಪ್ರದೇಶಗಳಲ್ಲಿದ್ದ ಹಲವು ಒತ್ತುವರಿದಾರರಿಗೆ ನೋಟಿಸ್ ನೀಡಿ, ಒತ್ತುವರಿ ತೆರವುಗೊಳಿಸಲು ಸಾಕಷ್ಟು ಕಾಲಾವಕಾಶ ನೀಡಲಾಗಿತ್ತು. ಅವಧಿ ಮೀರಿದರೂ ತೆರವು ಮಾಡದ ಹಿನ್ನೆಲೆಯಲ್ಲಿ (ಆರ್‌ಆರ್ ನಗರ ಹಾಗೂ ದಾಸರಹಳ್ಳಿ ವಲಯಗಳಲ್ಲಿ) ಸೆಪ್ಟೆಂಬರ್‌ 3 ಹಾಗೂ ಸೆಪ್ಟೆಂಬರ್‌ 15ರಂದು ಪೊಲೀಸ್ ಭದ್ರತೆಯೊಂದಿಗೆ ತೆರವುಗೊಳಿಸಲಾಗಿದೆ. ಈವರೆಗೆ ಒಟ್ಟು 14 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ ಎಂದು ವಿವರಿಸಿದೆ.

Also Read
ವೃಷಭಾವತಿ ನದಿ ಪುನಶ್ಚೇತನ: ಪ್ರಗತಿ ಅಫಿಡವಿಟ್‌ ಸಲ್ಲಿಸಲು ಬಿಬಿಎಂಪಿಗೆ ಎರಡು ವಾರ ಕಾಲಾವಕಾಶ ನೀಡಿದ ಹೈಕೋರ್ಟ್‌

ಬಾಕಿ ಒತ್ತುವರಿಗಳ ತೆರವಿಗಾಗಿ ಭೂದಾಖಲೆಗಳ ಉಪ ನಿರ್ದೇಶಕರಿಗೆ (ಡಿಡಿಎಲ್‌ಆರ್) ಸೆಪ್ಟೆಂಬರ್‌ 13ರಂದು ಪತ್ರ ಬರೆದಿರುವ ಬಿಬಿಎಂಪಿಯು ನದಿ ಪ್ರದೇಶದಲ್ಲಾಗಿರುವ ಒತ್ತುವರಿಗಳನ್ನು ತೋರಿಸುವ ನಕ್ಷೆ ಒದಗಿಸುವಂತೆ ಹಾಗೂ ಬಿಬಿಎಂಪಿ ಅಧಿಕಾರಿಗಳ ಸಮ್ಮುಖದಲ್ಲೇ ಒತ್ತುವರಿಯಾಗಿರುವ ಭಾಗಗಳನ್ನು ಭೌತಿಕವಾಗಿ ಗುರುತಿಸುವಂತೆ ಕೋರಿದೆ. ಆ ಪತ್ರ ಆಧರಿಸಿ ಜಿಲ್ಲಾಧಿಕಾರಿಗಳು ಸೆಪ್ಟೆಂಬರ್‌ 21ರಂದು ಉತ್ತರ/ದಕ್ಷಿಣ ತಾಲ್ಲೂಕಿನ ತಹಸೀಲ್ದಾರ್‌ಗೆ ಪತ್ರ ಬರೆದಿದ್ದು, ಬಿಬಿಎಂಪಿ ಕೋರಿರುವ ನಕ್ಷೆ ಒದಗಿಸುವಂತೆ ಹಾಗೂ ಒತ್ತುವರಿಯಾಗಿರುವ ಭಾಗಗಳನ್ನು ಭೌತಿಕವಾಗಿ ಗುರುತಿಸುವಂತೆ ಮತ್ತು ಒತ್ತುವರಿ ತೆರವಿಗೆ ಅಗತ್ಯವಿರುವ ಸರ್ವೇ ಅಧಿಕಾರಿಗಳನ್ನು ನಿಯೋಜಿಸುವಂತೆ ಸೂಚಿಸಿದ್ದಾರೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಅಲ್ಲದೆ, ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಬೆಂಗಳೂರು ಉತ್ತರದ ಎಡಿಎಲ್‌ಆರ್ ಪಾಲಿಕೆಗೆ ಸೆಪ್ಟೆಂಬರ್‌ 28ರಂದು ಪತ್ರ ಬರೆದು, ಬಿಬಿಎಂಪಿ ಅಧಿಕಾರಿಗಳಿಗೆ ಸಹಕರಿಸಲು ಮೂವರು ಸರ್ವೇಯರ್‌ಗಳನ್ನು ನಿಯೋಜಿಸುವುದಾಗಿ ತಿಳಿಸಿತ್ತು. ಜತೆಗೆ, ತಹಸೀಲ್ದಾರರು ನಕ್ಷೆ ಮತ್ತಿತರ ದಾಖಲೆಗಳನ್ನು ಪರಿಶೀಲಿಸುತ್ತಿರುವುದಾಗಿ ಹೇಳಿತ್ತು. ಆದರೆ, ಈವರೆಗೂ ಸರ್ವೇಯರ್‌ಗಳು ಸಮೀಕ್ಷೆ ನಡೆಸುವುದಕ್ಕಾಗಿ ಹಾಜರಾಗಿಲ್ಲ. ಆದ್ದರಿಂದ, ಅಕ್ಟೋಬರ್‌ 14ರಂದು ಜ್ಞಾಪನಾ ಪತ್ರ ಕಳುಹಿಸಲಾಗಿದೆ ಎಂದು ಪಾಲಿಕೆ ಅನುಪಾಲನಾ ವರದಿಯಲ್ಲಿ ಹೇಳಿದೆ.

Kannada Bar & Bench
kannada.barandbench.com