ವೃಷಭಾವತಿ ನದಿ ಪುನಶ್ಚೇತನ: ಪ್ರಗತಿ ಅಫಿಡವಿಟ್‌ ಸಲ್ಲಿಸಲು ಬಿಬಿಎಂಪಿಗೆ ಎರಡು ವಾರ ಕಾಲಾವಕಾಶ ನೀಡಿದ ಹೈಕೋರ್ಟ್‌

ಮಲಿನಗೊಂಡಿರುವ ವೃಷಭಾವತಿ ನದಿ ಸಂರಕ್ಷಣೆಗೆ ಕ್ರಮ ಕೈಗೊಳ್ಳಲು ಸರ್ಕಾರ ಹಾಗೂ ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಸಲಾಗಿದೆ.
ವೃಷಭಾವತಿ ನದಿ ಪುನಶ್ಚೇತನ: ಪ್ರಗತಿ ಅಫಿಡವಿಟ್‌ ಸಲ್ಲಿಸಲು ಬಿಬಿಎಂಪಿಗೆ ಎರಡು ವಾರ ಕಾಲಾವಕಾಶ ನೀಡಿದ ಹೈಕೋರ್ಟ್‌
BBMP and Karnataka HC

ವೃಷಭಾವತಿ ನದಿ ಪುನಶ್ಚೇತನಕ್ಕೆ ಅನುಸರಿಸಬಹುದಾದ ಅಲ್ಪಾವಧಿ ಕ್ರಮಗಳ ಬಗ್ಗೆ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ನೀರಿ) ಮಾಡಿರುವ ಶಿಫಾರಸ್ಸುಗಳ ಜಾರಿ ವಿಚಾರದಲ್ಲಿ ಆಗಿರುವ ಪ್ರಗತಿ ಕುರಿತು ಅಫಿಡವಿಟ್‌ ಸಲ್ಲಿಸಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಸೋಮವಾರ ಕರ್ನಾಟಕ ಹೈಕೋರ್ಟ್ ಎರಡು ವಾರ ಕಾಲಾವಕಾಶ ನೀಡಿದೆ.

ಮಲಿನಗೊಂಡಿರುವ ವೃಷಭಾವತಿ ನದಿ ಸಂರಕ್ಷಣೆಗೆ ಕ್ರಮ ಕೈಗೊಳ್ಳಲು ಸರ್ಕಾರ ಹಾಗೂ ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ನಗರದ ಗೀತಾ ಮಿಶ್ರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಬಿಬಿಎಂಪಿ ಪರ ವಕೀಲರು “ನೀರಿ ಶಿಫಾರಸ್ಸಿನಂತೆ ವೃಷಭಾವತಿ ನದಿ ಪುನಶ್ಚೇತನಕ್ಕೆ ಅನುಸರಿಸಬಹುದಾದ ಕ್ರಮಗಳ ಕುರಿತು ವರದಿ ಸಲ್ಲಿಸಬೇಕಿದೆ. ಆದರೆ, ನೀರಿಯ ಅಂತಿಮ ವರದಿ ಇನ್ನೂ ಬಿಬಿಎಂಪಿ ಕೈಸೇರಿಲ್ಲ. ಆದ್ದರಿಂದ, ಅಫಿಡವಿಟ್‌ ಸಲ್ಲಿಸಲು ಕಾಲಾವಕಾಶ ನೀಡಬೇಕು” ಎಂದು ಕೋರಿದರು.

Also Read
ಮಂಗಳೂರಿನ 13 ಹಳ್ಳಿಗಳಿಗೆ ಕಲುಷಿತ ಕುಡಿಯುವ ನೀರು ಪೂರೈಕೆ; ಐಐಎಸ್‌ಸಿ ತಂಡಕ್ಕೆ ವರದಿ ಸಲ್ಲಿಸಲು ಆದೇಶಿಸಿದ ಹೈಕೋರ್ಟ್‌

ಅರ್ಜಿದಾರರ ಪರ ವಕೀಲ ಜಿ ಆರ್ ಮೋಹನ್‌ ಅವರು “ನೀರಿ ಶಿಫಾರಸ್ಸು ಮಾಡಿರುವ ಅಲ್ಪಾವಧಿ ಹಾಗೂ ದೀರ್ಘಾವಧಿ ಕ್ರಮಗಳನ್ನು ಜಾರಿಗೆ ತರಲು ಜೂನ್‌ 21ರಂದು ಸಭೆ ನಡೆಸಿ, ಅಲ್ಪಾವಧಿ ಶಿಫಾರಸ್ಸುಗಳನ್ನು ತುರ್ತಾಗಿ ಜಾರಿಗೆ ತರಲು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಅಲ್ಪಾವಧಿ ಕ್ರಮಗಳ ಜಾರಿ ವಿಚಾರದಲ್ಲಿ ಏನೆಲ್ಲ ಪ್ರಗತಿಯಾಗಿದೆ ಎಂಬ ಬಗ್ಗೆ ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಹಾಗೂ ಜಲಮಂಡಳಿಗೆ ಸಮಗ್ರ ಅಫಿಡವಿಟ್ ಸಲ್ಲಿಸಬೇಕು ಎಂದು 2021ರ ಜುಲೈ 19ರಂದು ನ್ಯಾಯಾಲಯ ಆದೇಶಿಸಿತ್ತು. ಪಾಲಿಕೆ ಹೊರತುಪಡಿಸಿ ಉಳಿದೆಲ್ಲವೂ ಅಫಿಡವಿಟ್ ಸಲ್ಲಿಸಿವೆ” ಎಂದು ಪೀಠಕ್ಕೆ ತಿಳಿಸಿದರು.

ನೀರಿ ಶಿಫಾರಸ್ಸು ಜಾರಿ ವಿಚಾರದಲ್ಲಾಗಿರುವ ಪ್ರಗತಿ ಕುರಿತು ಎರಡು ವಾರಗಳಲ್ಲಿ ಪ್ರಮಾಣಪತ್ರ ಸಲ್ಲಿಸುವಂತೆ ಬಿಬಿಎಂಪಿಗೆ ಸೂಚಿಸಿ, ವಿಚಾರಣೆಯನ್ನು ಫೆಬ್ರವರಿ 3ಕ್ಕೆ ಮುಂದೂಡಿತು.

Related Stories

No stories found.