ಉನ್ನತ ನ್ಯಾಯಾಂಗ ಸಂಸ್ಥೆಗಳೂ ಸೇರಿದಂತೆ ನ್ಯಾಯಾಂಗದಲ್ಲಿ ವ್ಯಾಪಕ ಭ್ರಷ್ಟಾಚಾರವಿದೆ ಎಂದು ಆರೋಪಿಸಿದ್ದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಂಗಳವಾರ ರಾಜಸ್ಥಾನ ಹೈಕೋರ್ಟ್‌ಗೆ ಬೇಷರತ್ ಕ್ಷಮೆ ಯಾಚಿಸಿದ್ದಾರೆ.
ಹೆಚ್ಚಿನ ಪರಿಗಣನೆಗಾಗಿ ಕ್ಷಮೆಯಾಚನೆ ವಿಚಾರವನ್ನು ದಾಖಲೆಯಲ್ಲಿ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ಆಗಸ್ಟಿನ್ ಜಾರ್ಜ್ ಮಸೀಹ್ ಮತ್ತು ನ್ಯಾಯಮೂರ್ತಿ ಮನೀಂದ್ರ ಮೋಹನ್ ಶ್ರೀವಾಸ್ತವ ಅವರ ಪೀಠ ತಿಳಿಸಿತು. ಪ್ರಕರಣ ಗಂಭೀರವಾದುದು ಎಂದು ಕೂಡೆ ನ್ಯಾಯಾಲಯ ಹೇಳಿತು. ಕ್ಷಮೆಯಾಚನೆ ಬಗ್ಗೆ ನಿರ್ಧರಿಸುವುದಕ್ಕಾಗಿ ನವೆಂಬರ್ 7 ರಂದು ಪೀಠ ಪ್ರಕರಣದ ವಿಚಾರಣೆ ನಡೆಸಲಿದೆ.
ಗೆಹ್ಲೋಟ್ ಅವರ ಹೇಳಿಕೆ ಪ್ರಶ್ನಿಸಿರುವ ವಕೀಲರೊಬ್ಬರು ಅವರ ವಿರುದ್ಧ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುವಂತೆ ಕೋರಿ ರಾಜಸ್ಥಾನ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದರು.
ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ನ್ಯಾಯಾಂಗದಲ್ಲಿಯೂ ಭ್ರಷ್ಟಾಚಾರ ವ್ಯಾಪಕವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದ ಗೆಹ್ಲೋಟ್ ಅವರು ಕೆಲವು ವಕೀಲರು ತೀರ್ಪುಗಳನ್ನು ಬರೆದು ಅವುಗಳನ್ನು ನ್ಯಾಯಾಲಯಕ್ಕೆ ಒಯ್ಯುತ್ತಾರೆ, ಅಲ್ಲಿ ಅವುಗಳನ್ನು ಪ್ರಕಟಿಸಲಾಗುತ್ತದೆ ಎಂದು ಕೇಳಿದ್ದೇನೆ ಎಂಬುದಾಗಿ ಟೀಕಿಸಿದ್ದರು.