ಸಿಎಂ ಆಯ್ಕೆ ಪ್ರಕರಣ: ವರುಣಾದಲ್ಲಿ ಬಳಕೆ ಮಾಡಿದ್ದ ಇವಿಎಂ-ವಿವಿಪ್ಯಾಟ್‌ ಲೋಕಸಭಾ ಚುನಾವಣೆಗೆ ಬಳಸಲು ಹೈಕೋರ್ಟ್‌ ಸಮ್ಮತಿ

ವರುಣಾ ಕ್ಷೇತ್ರದ ಮತದಾನಕ್ಕೆ ಬಳಸಿಕೊಳ್ಳಲಾಗಿದ್ದ 314 ಇವಿಎಂ ಹಾಗೂ 338 ವಿವಿಪ್ಯಾಟ್‌ಗಳನ್ನು ಬಳಸಿಕೊಳ್ಳಲು ಅನುಮತಿ ನೀಡಬೇಕು ಎಂದು ಮೈಸೂರು ಜಿಲ್ಲಾಧಿಕಾರಿಯು ಮಧ್ಯಂತರ ಅರ್ಜಿಯಲ್ಲಿ ಕೋರಿದ್ದನ್ನು ನ್ಯಾಯಾಲಯ ಪುರಸ್ಕರಿಸಿದೆ.
CM Siddaramaiah and Karnataka HC
CM Siddaramaiah and Karnataka HC
Published on

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೆದ್ದಿರುವ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ಬಳಸಲಾಗಿದ್ದ ಇವಿಎಂ-ವಿವಿಪ್ಯಾಟ್‌ಗಳನ್ನು ಮುಂದಿನ ಲೋಕಸಭಾ ಚುನಾವಣೆಗೆ ಬಳಕೆ ಮಾಡಲು ಚುನಾವಣಾ ಆಯೋಗಕ್ಕೆ ಕರ್ನಾಟಕ ಹೈಕೋರ್ಟ್ ಸೋಮವಾರ ಅನುಮತಿಸಿದೆ.

ಸಿದ್ದರಾಮಯ್ಯ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಮೈಸೂರಿನ ವರುಣಾ ಹೋಬಳಿಯ ಕೂಡನಹಳ್ಳಿ ನಿವಾಸಿ ಕೆ ಎಂ ಶಂಕರ್ ಸಲ್ಲಿಸಿರುವ ಚುನಾವಣಾ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಉಚಿತ ಗ್ಯಾರಂಟಿಗಳ ಮೂಲಕ ಆಮಿಷವೊಡ್ಡಿ ಚುನಾವಣಾ ಅಕ್ರಮ ಎಸಗಿ ಸಿದ್ದರಾಮಯ್ಯ ಗೆದ್ದಿದ್ದಾರೆ ಎಂದು ಅವರ ಆಯ್ಕೆ ಅನೂರ್ಜಿತಗೊಳಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಚುನಾವಣಾ ಅರ್ಜಿಯು ವಿಚಾರಣೆಗೆ ಬಾಕಿ ಇರುವ ಹಿನ್ನೆಲೆಯಲ್ಲಿ ವರುಣಾ ಕ್ಷೇತ್ರದಲ್ಲಿ ಬಳಸಲಾಗಿದ್ದ ಇವಿಎಂ-ವಿವಿಪ್ಯಾಟ್‌ಗಳು ಜಿಲ್ಲಾ ಚುನಾವಣಾಧಿಕಾರಿಗಳ ಸುಪರ್ದಿಯಲ್ಲಿ ಜಿಲ್ಲಾ ಇವಿಎಂ ವೇರ್‌ಹೌಸ್‌ನಲ್ಲಿ ಸಂಗ್ರಹಿಸಿಡಲಾಗಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಮುಂದಿನ ಲೋಕಸಭಾ ಚುನಾವಣೆಗೆ ಅವುಗಳನ್ನು ಬಳಸಿಕೊಳ್ಳಲು ಅನುಮತಿ ನೀಡುವಂತೆ ಜಿಲ್ಲಾಧಿಕಾರಿ ಮಧ್ಯಂತರ ಅರ್ಜಿಯ ಮೂಲಕ ಕೋರಿದ್ದರು. ಇದಕ್ಕೆ ಹೈಕೋರ್ಟ್ ಅನುಮತಿಸಿದೆ.

ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಮೈಸೂರು ಜಿಲ್ಲಾಧಿಕಾರಿ ಕೆ ವಿ ರಾಜೇಂದ್ರ ಅವರ ಮಧ್ಯಂತರ ಅರ್ಜಿಯನ್ನು ಚುನಾವಣಾ ಆಯೋಗದ ಪರ ವಕೀಲ ಎಸ್ ಆರ್ ದೊಡ್ಡವಾಡ ಪೀಠಕ್ಕೆ ಸಲ್ಲಿಸಿದರು.

ಚುನಾವಣಾ ಅರ್ಜಿ ವಿಚಾರಣೆಗೆ ಬಾಕಿ ಇರುವುದರಿಂದ ವರುಣಾ ಕ್ಷೇತ್ರದಲ್ಲಿ ಬಳಸಲಾಗಿದ್ದ ಇವಿಎಂ-ವಿವಿಪ್ಯಾಟ್‌ಗಳು ಜಿಲ್ಲಾ ಇವಿಎಂ ವೇರ್‌ಹೌಸ್‌ನಲ್ಲಿ ಇಡಲಾಗಿದೆ. ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಬರುವುದರಿಂದ ಇವಿಎಂ-ವಿವಿಪ್ಯಾಟ್‌ಗಳನ್ನು ಬಳಸಿಕೊಳ್ಳಲು ಅವುಗಳನ್ನು ತಪಾಸಣೆ ಮಾಡಬೇಕಾಗಿದೆ. ಆದ್ದರಿಂದ, ವರುಣಾ ಕ್ಷೇತ್ರದ ಮತದಾನಕ್ಕೆ ಬಳಸಿಕೊಳ್ಳಲಾಗಿದ್ದ 314 ಇವಿಎಂ ಹಾಗೂ 338 ವಿವಿಪ್ಯಾಟ್‌ಗಳನ್ನು ಬಳಸಿಕೊಳ್ಳಲು ಅನುಮತಿ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

Also Read
ಗ್ಯಾರಂಟಿ ಯೋಜನೆಗಳು ಆಮಿಷಕ್ಕೆ ಸಮ, ಚುನಾವಣಾ ಅಕ್ರಮ: ಸಿದ್ದರಾಮಯ್ಯ ಅನರ್ಹತೆ ಕೋರಿ ಹೈಕೋರ್ಟ್‌ನಲ್ಲಿ ಪ್ರಕರಣ

ಇವಿಎಂ-ವಿವಿಪ್ಯಾಟ್‌ ಬಳಕೆಗೆ ತಮ್ಮ‌ ಆಕ್ಷೇಪಣೆ ಇಲ್ಲ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದರು. ಇದನ್ನು ಪುರಸ್ಕರಿಸಿದ ಪೀಠವು ವರುಣಾ ಕ್ಷೇತ್ರದ ಇವಿಎಂ-ವಿವಿಪ್ಯಾಟ್‌ಗಳನ್ನು ಮುಂದಿನ ಲೋಕಸಭಾ ಚುನಾವಣೆಗೆ ಬಳಸಿಕೊಳ್ಳಲು ಚುನಾವಣಾ ಆಯೋಗಕ್ಕೆ ಅನುಮತಿ ನೀಡಿ, ಮಧ್ಯಂತರ ಅರ್ಜಿ ಇತ್ಯರ್ಥಪಡಿಸಿತು.

ಮೂಲ ಪ್ರಕರಣದಲ್ಲಿ ವಾದ ಮಂಡನೆಗೆ ಸಿಎಂ ಸಿದ್ದರಾಮಯ್ಯ ಪರ ವಕೀಲರು ಕಾಲಾವಕಾಶ ಕೇಳಿದರು. ಅದಕ್ಕೆ ಅರ್ಜಿದಾರರ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಅಂತಿಮವಾಗಿ ಪೀಠ ವಿಚಾರಣೆಯನ್ನು ಫೆಬ್ರವರಿ 28ಕ್ಕೆ ಮುಂದೂಡಿತು.

Kannada Bar & Bench
kannada.barandbench.com