

ರಾಜ್ಯದ ಮುಖ್ಯಮಂತ್ರಿಗೆ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಮತ್ತು ಸ್ಥಳ ನಿಯುಕ್ತಿ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಕ್ಕಿಂತಲೂ ಬೇರೆ ಮಹತ್ವದ ಕೆಲಸಗಳಿವೆ ಎಂದಿರುವ ಕರ್ನಾಟಕ ಹೈಕೋರ್ಟ್, ಮುಖ್ಯಮಂತ್ರಿಯು ತಮ್ಮ ಕಚೇರಿಯ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನವನ್ನು ನೀಡಬೇಕು ಎಂದಿದೆ.
ಇಬ್ಬರು ಅಧಿಕಾರಿಗಳ ಪರಸ್ಪರ ವರ್ಗಾವಣೆಗೆ ಮುಖ್ಯಮಂತ್ರಿಗಳ ಕಚೇರಿ ನೀಡಿರುವ ಶೀಫಾರಸ್ಸು ನಿರ್ಲಕ್ಷಿಸಿ ತನ್ನನ್ನು ವರ್ಗಾವಣೆ ಮಾಡಿದ ಕ್ರಮ ಪ್ರಶ್ನಿಸಿ ಅಂಗವಿಕಲರೂ ಆಗಿರುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿಯ (ಬೆಸ್ಕಾಂ) ವೈಟ್‌ಫೀಲ್ಡ್ ವಿಭಾಗದ ಸಹಾಯಕ ಎಂಜಿನಿಯರ್ ಎಸ್ ಚೇತನ್ ಎಂಬುವರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಡಿ ಕೆ ಸಿಂಗ್ ಮತ್ತು ಟಿ ಎಂ ನದಾಫ್ ಅವರ ವಿಭಾಗೀಯ ಪೀಠವು ಇತ್ಯರ್ಥಪಡಿಸಿದೆ.
“ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಅಥವಾ ಸ್ಥಳ ನಿಯುಕ್ತಿ ಮನವಿಗಳನ್ನು ಮುಖ್ಯಮಂತ್ರಿಗಳ ಕಚೇರಿಯು ನೇರವಾಗಿ ಪರಿಗಣಿಸಬಾರದು. ಇಲಾಖಾ ಹಂತದಲ್ಲೇ ಈ ವಿಚಾರಗಳು ಮುಗಿಯಬೇಕು. ಸರ್ಕಾರಿ ಅಧಿಕಾರಿಗಳು ಮತ್ತು ಸರ್ಕಾರಿ ಉದ್ಯಮದಲ್ಲಿ ಕೆಲಸ ಮಾಡುವ ಅಧಿಕಾರಿಗಳ ವರ್ಗಾವಣೆ ಮತ್ತು ಸ್ಥಳ ನಿಯುಕ್ತಿಗಿಂತ ಉತ್ತಮವಾದ ಮತ್ತು ಮಹತ್ವದ ಕೆಲಸ ಮಾಡುವ ಜವಾಬ್ದಾರಿ ಮುಖ್ಯಮಂತ್ರಿಗಳ ಮೇಲಿದೆ. ತನ್ನ ಕಚೇರಿಗೆ ಅಗತ್ಯ ನಿರ್ದೇಶನ ನೀಡುವುದಕ್ಕೂ ಈ ಆದೇಶವನ್ನು ಮುಖ್ಯಮಂತ್ರಿಗಳ ಮುಂದೆ ಇಡಬೇಕು” ಎಂದು ಹೈಕೋರ್ಟ್ ಆದೇಶಿಸಿದೆ.
“24.02.2026ರ ಹೈಕೋರ್ಟ್ ಆದೇಶಕ್ಕೆ ಪೂರಕವಾಗಿ 03.03.2026ರಂದು ಮುಖ್ಯ ಕಾರ್ಯದರ್ಶಿಯು ಅನುಪಾಲನಾ ವರದಿ ಸಲ್ಲಿಸಿದ್ದು, ಮುಖ್ಯಮಂತ್ರಿಗಳ ಕಚೇರಿಯು ನೀಡಿರುವ ನೋಟ್ಸ್ ಶಿಫಾರಸ್ಸಿನ ರೂಪದಲ್ಲಿದ್ದು, ಅದು ವರ್ಗಾವಣೆ ಆದೇಶ ಅಥವಾ ವರ್ಗಾವಣೆಗೆ ಒಪ್ಪಿಗೆ ನೀಡುವುದಾಗಿರುವುದಿಲ್ಲ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ರೂಪಿಸಿರುವ ವೃಂದ ಮತ್ತು ನೇಮಕಾತಿ ನಿಯಮಗಳು ಮತ್ತು ಸಾಮಾನ್ಯ ವರ್ಗಾವಣೆ ಮಾರ್ಗಸೂಚಿಗಳನ್ನು ಆಧರಿಸಿ ಸಕ್ಷಮ ಇಲಾಖೆಗಳು ಶಿಫಾರಸ್ಸುಗಳನ್ನು ಪರಿಶೀಲಿಸಬೇಕು. ಹಾಲಿ ಪ್ರಕರಣದಲ್ಲಿ ಒಪ್ಪಿತ ವರ್ಗಾವಣೆಗೆ ಮುಖ್ಯಮಂತ್ರಿ ಕಾರ್ಯಾಲಯವು ಮಾಡಿರುವ ಶಿಫಾರಸ್ಸು/ನೋಟ್ಸ್ ಶಿಫಾರಸ್ಸಿನ ರೂಪದಲ್ಲಿದ್ದು, ಅದು ಒಪ್ಪಿತ ವರ್ಗಾವಣೆ ಆದೇಶವಲ್ಲ. ಏಕಸದಸ್ಯ ಪೀಠವು 09.09.2024ರಂದು ಮಾಡಿರುವ ತೀರ್ಪನ್ನು ಮುಖ್ಯಮಂತ್ರಿ ಗಮನಕ್ಕೆ ತರಲಾಗಿದೆ. ಮುಖ್ಯಮಂತ್ರಿ ಕಾರ್ಯಾಲಯ ಮತ್ತು ವರ್ಗಾವಣೆ ಮನವಿಗಳ ಬಗ್ಗೆ ನೋಡಿಕೊಳ್ಳುವ ಅಧಿಕಾರಿಗಳಿಗೆ ಈ ಕುರಿತು ಅರಿವು ಮೂಡಿಸಲಾಗಿದೆ ಎಂದು ಮುಖ್ಯ ಕಾರ್ಯದರ್ಶಿಯು ಅಫಿಡವಿಟ್‌ನಲ್ಲಿ ವಿವರಿಸಿದ್ದಾರೆ.
“ವರ್ಗಾವಣೆ ಶಿಫಾರಸ್ಸು/ಮನವಿಯನ್ನು ಸಂಬಂಧಿತ ಆಡಳಿತಾತ್ಮಕ ಇಲಾಖೆಯಲ್ಲಿ ಪರಿಶೀಲಿಸಲಿದ್ದು, ವರ್ಗಾವಣೆ ಮಾರ್ಗಸೂಚಿಯ ನಿಬಂಧನೆಗಳ ಅನುಗುಣವಾಗಿ ಹಾಗೂ ಸಕ್ಷಮ ಪ್ರಾಧಿಕಾರದ ಒಪ್ಪಿಗೆಯ ಮೇರೆಗೆ ಆಡಳಿತಾತ್ಮಕ ಇಲಾಖೆಯು ವರ್ಗಾವಣೆ ಆದೇಶವನ್ನು ಹೊರಡಿಸುತ್ತದೆ ಎಂದು ಮುಖ್ಯ ಕಾರ್ಯದರ್ಶಿ ಹೇಳಿದ್ದಾರೆ” ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.
ಪ್ರಕರಣದ ಹಿನ್ನೆಲೆ: ಮುಖ್ಯಮಂತ್ರಿ ಅನುಮೋದನೆ ನೀಡಿದ್ದರೂ ಬೆಸ್ಕಾಂ ತನ್ನನ್ನು ನಿರ್ದಿಷ್ಟ ಉಪವಿಭಾಗಕ್ಕೆ ನಿಯೋಜಿಸಿಲ್ಲ. ಆದ್ದರಿಂದ, ತಮ್ಮನ್ನು ಮುಖ್ಯಮಂತ್ರಿ ಸೂಚಿಸಿದಂತೆ ನಿಯೋಜನೆ ಮಾಡಬೇಕು ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠವು ಮುಖ್ಯಮಂತ್ರಿಗಳ ಕಚೇರಿಯಿಂದ ಗ್ರೂಪ್ 'ಬಿ' ಹಾಗೂ 'ಸಿ' ವರ್ಗದ ನೌಕರರ ವರ್ಗಾವಣೆಗೆ ಹಲವು ಪತ್ರಗಳು ಬರುತ್ತಿರುವುದು ಹೈಕೋರ್ಟ್ ಗಮನಕ್ಕೆ ಬಂದಿದೆ. ಈ ಎಲ್ಲಾ ಆದೇಶಗಳು ಮುಖ್ಯಮಂತ್ರಿಗೆ ತಮ್ಮ ಕಚೇರಿಯಿಂದ ಪಡೆದು ಹೊರಡಿಸಿರುವ ಆದೇಶಗಳು ಎಂಬುದರ ಬಗ್ಗೆ ತಿಳಿದಿದೆಯೇ ಎಂಬ ಅನುಮಾನ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ಕಚೇರಿಯಲ್ಲಿ ಕುಳಿತಿರುವ ಯಾರೋ ಒಬ್ಬರು ಯಾಂತ್ರಿಕವಾಗಿ ಅಂತಹ ಆದೇಶಗಳನ್ನು ಹೊರಡಿಸುತ್ತಿದ್ದಾರೆ. ಆದ್ದರಿಂದ, ನೌಕರರು ಆತಂಕಿತರಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿ 2024ರ ಸೆಪ್ಟಂಬರ್ 9ರಂದು ಅರ್ಜಿ ವಜಾಗೊಳಿಸಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ದ್ವಿಸದಸ್ಯ ಪೀಠಕ್ಕೆ ಚೇತನ್ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.