₹10 ಸಾವಿರ ದಂಡ ಆದೇಶ ಬದಿಗೆ ಸರಿಸಲು ಕೋರಿ ಸುಪ್ರೀಂ ಕೋರ್ಟ್‌ ಕದತಟ್ಟಿದ ಸಿಎಂ ಸಿದ್ದರಾಮಯ್ಯ

ವಕೀಲ ರಾಜೇಶ್‌ ಗುಲಾಬ್‌ ಇನಾಂದಾರ್‌ ಅವರು ವಕಾಲತ್ತು ಹಾಕಿದ್ದು, ಅರ್ಜಿಯು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ. ವಾಸ್ತವಿಕ ಅಂಶಗಳನ್ನು ಪರಿಗಣಿಸದೇ ಹೈಕೋರ್ಟ್‌ ಆದೇಶ ಮಾಡಿದೆ ಎಂದು ಆಕ್ಷೇಪಿಸಲಾಗಿದೆ.
CM Siddaramaiah and Supreme Court
CM Siddaramaiah and Supreme Court
Published on

ವಿಪಕ್ಷ ನಾಯಕರಾಗಿದ್ದಾಗ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ನ್ಯಾಯಾಲಯದ ಮುಂದೆ ಮಾರ್ಚ್‌ 6ರಂದು ಹಾಜರಾಗಲು ಹಾಗೂ 10 ಸಾವಿರ ರೂಪಾಯಿ ದಂಡ ಪಾವತಿಸಲು ಸೂಚಿಸಿದ್ದ ಕರ್ನಾಟಕ ಹೈಕೋರ್ಟ್‌ ಆದೇಶವನ್ನು ಬದಿಗೆ ಸರಿಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ವಕೀಲ ರಾಜೇಶ್‌ ಗುಲಾಬ್‌ ಇನಾಂದಾರ್‌ ಅವರು ವಕಾಲತ್ತು ಹಾಕಿದ್ದು, ಅರ್ಜಿಯು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ. ವಾಸ್ತವಿಕ ಅಂಶಗಳನ್ನು ಪರಿಗಣಿಸದೇ ಹೈಕೋರ್ಟ್‌ ಆದೇಶ ಮಾಡಿದೆ. 2023ರ ಫೆಬ್ರವರಿ 12ರಂದು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಆರೋಪ ಪಟ್ಟಿಯನ್ನೂ ಹೈಕೋರ್ಟ್‌ ಪರಿಗಣಿಸಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಹೈಕೋರ್ಟ್‌ನ ಆಕ್ಷೇಪಾರ್ಹವಾದ ಆದೇಶಕ್ಕೆ ತಡೆ ನೀಡದಿದ್ದರೆ ಕಾನೂನಿನ ದುರ್ಬಳಕೆಯಾಗಲಿದ್ದು, ಸುಳ್ಳು ಪ್ರಕರಣದಲ್ಲಿ ಅರ್ಜಿದಾರರಿಗೆ ಕಾನೂನುಬಾಹಿರವಾಗಿ ಕಿರುಕುಳ ನೀಡಿದಂತಾಗಲಿದೆ ಎಂದು ಹೇಳಲಾಗಿದೆ. ಈ ನೆಲೆಯಲ್ಲಿ 2024ರ ಫೆಬ್ರವರಿ 6ರ ಹೈಕೋರ್ಟ್‌ ಆದೇಶಕ್ಕೆ ತಕ್ಷಣ ಮಧ್ಯಂತರ ತಡೆಯಾಜ್ಞೆ ನೀಡಬೇಕು ಹಾಗೂ ಬೆಂಗಳೂರಿನ ವಿಶೇಷ (ಮ್ಯಾಜಿಸ್ಟ್ರೇಟ್‌) ನ್ಯಾಯಾಲಯದಲ್ಲಿನ ಪ್ರಕ್ರಿಯೆಗೆ ಏಕಪಕ್ಷೀಯ ತಡೆಯಾಜ್ಞೆ ನೀಡಬೇಕು ಎಂದು ಕೋರಲಾಗಿದೆ.

ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ಆಗ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಕೆ ಎಸ್‌ಈಶ್ವರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿ 2022ರ ಏಪ್ರಿಲ್ 14ರಂದು ಬೆಂಗಳೂರಿನ ರೇಸ್ ವ್ಯೂ ಹೋಟೆಲ್ ಬಳಿ ಕಾಂಗ್ರೆಸ್‌ ಪಕ್ಷದ ನಾಯಕರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸಾರ್ವಜನಿಕರ ಮುಕ್ತ ಸಂಚಾರಕ್ಕೆ ಅಡ್ಡಿಪಡಿಸಿದ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದ ಆರೋಪದ ಮೇಲೆ ನಗರದ ಹೈಗ್ರೌಂಡ್ಸ್‌ ಪೊಲೀಸರು ಅರ್ಜಿದಾರರ ವಿರುದ್ಧ ಐಪಿಸಿ ಸೆಕ್ಷನ್‌ 143 (ಕಾನೂನುಬಾಹಿರವಾಗಿ ಸಮಾವೇಶಗೊಳ್ಳುವುದು), ಕರ್ನಾಟಕ ಪೊಲೀಸ್‌ ಕಾಯಿದೆ ಸೆಕ್ಷನ್‌ 103 ಅಡಿ ಪ್ರಕರಣ ದಾಖಲಿಸಿದ್ದರು.

ಈ ಸಂಬಂಧ 42ನೇ ಎಸಿಎಂಎಂ ನ್ಯಾಯಾಲಯ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ಜಾರಿ ಮಾಡಿದ್ದ ಎನ್‌ಬಿಡಬ್ಲ್ಯೂ( ಜಾಮೀನು ರಹಿತ ಬಂಧನ ವಾರೆಂಟ್) ಹಾಗೂ ವಿಶೇಷ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ರಾಮಲಿಂಗಾರೆಡ್ಡಿ, ಎಂ ಬಿ ಪಾಟೀಲ್ ಮತ್ತು ಎಎಐಸಿಸಿ ಮುಖಂಡ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಅರ್ಜಿ ಸಲ್ಲಿಸಿದ್ದರು. ಇದನ್ನು ಮನ್ನಿಸದ ನ್ಯಾ. ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಅರ್ಜಿಗಳನ್ನು ವಜಾ ಮಾಡಿತ್ತು.

Also Read
ಈಶ್ವರಪ್ಪ ವಿರುದ್ಧದ ಪ್ರತಿಭಟನೆ: ಸಿಎಂ, ಸುರ್ಜೆವಾಲಾ, ಇಬ್ಬರು ಸಚಿವರಿಗೆ ತಲಾ ₹10 ಸಾವಿರ ದಂಡ ವಿಧಿಸಿದ ಹೈಕೋರ್ಟ್‌

ಅಲ್ಲದೇ, “ಸಿದ್ದರಾಮಯ್ಯ ಮಾರ್ಚ್‌ 6ರಂದು, ರಣದೀಪ್‌ ಸುರ್ಜೇವಾಲಾ ಅವರು ಮಾರ್ಚ್‌ 7ರಂದು, ಎಂ ಬಿ ಪಾಟೀಲ್‌ ಮಾರ್ಚ್‌ 11ರಂದು, ರಾಮಲಿಂಗಾರೆಡ್ಡಿ ಅವರು ಮಾರ್ಚ್‌ 15ರಂದು ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಿ, ಆದೇಶ ಪಡೆಯಬೇಕು” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿತ್ತು.

“ಎಲ್ಲಾ ಅರ್ಜಿದಾರರು ತಲಾ 10 ಸಾವಿರ ರೂಪಾಯಿಗಳನ್ನು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಸಲ್ಲಿಸಬೇಕು. ಪೊಲೀಸ್‌ ಅಧಿಕಾರಿಯನ್ನು ಯಾವುದೇ ಸಮರ್ಥನೆ ನೀಡದೆ ಪ್ರತಿವಾದಿಯಾಗಿಸಿರುವುದಕ್ಕೆ ದಂಡ ವಿಧಿಸಲಾಗಿದ್ದು, ಆಕೆಯನ್ನು ವ್ಯಕ್ತಿಗತವಾಗಿ ಪ್ರತಿವಾದಿಯನ್ನಾಗಿಸಲಾಗಿದೆ. ರಾಜಕೀಯ ಪ್ರೇರಿತ ಎಂದು ಅರ್ಜಿಯಲ್ಲಿ ಹೇಳಿರುವುದನ್ನು ಬಿಟ್ಟರೆ ಪೊಲೀಸ್‌ ಅಧಿಕಾರಿಯನ್ನು ಏಕೆ ಪ್ರತಿವಾದಿಯನ್ನಾಗಿಸಲಾಗಿದೆ ಎಂಬುದನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿಲ್ಲ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿತ್ತು.

Kannada Bar & Bench
kannada.barandbench.com