ಈಶ್ವರಪ್ಪ ವಿರುದ್ಧದ ಪ್ರತಿಭಟನೆ: ಸಿಎಂ, ಸುರ್ಜೆವಾಲಾ, ಇಬ್ಬರು ಸಚಿವರಿಗೆ ತಲಾ ₹10 ಸಾವಿರ ದಂಡ ವಿಧಿಸಿದ ಹೈಕೋರ್ಟ್
ಗುತ್ತಿಗೆದಾರರೊಬ್ಬರ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಈ ಹಿಂದಿನ ಬಿಜೆಪಿ ಸರ್ಕಾರ ಅವಧಿಯಲ್ಲಿ ಸಚಿವರಾಗಿದ್ದ ಕೆ ಎಸ್ ಈಶ್ವರಪ್ಪ ರಾಜೀನಾಮಗೆ ಆಗ್ರಹಿಸಿ ನಡೆಸಿದ್ದ ಪ್ರತಿಭಟನೆ ಸಂಬಂಧ ದಾಖಲಾಗಿದ್ದ ಪ್ರಕರಣವನ್ನು ವಜಾ ಮಾಡಲು ಮಂಗಳವಾರ ನಿರಾಕರಿಸಿರುವ ಕರ್ನಾಟಕ ಹೈಕೋರ್ಟ್ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಂ ಬಿ ಪಾಟೀಲ್, ರಾಮಲಿಂಗಾರೆಡ್ಡಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಅವರಿಗೆ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಆದೇಶ ಮಾಡಿದೆ. ಅಲ್ಲದೇ, ತೀರ್ಪಿಗೆ ತಡೆ ಕೋರಿರುವ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಂ ಬಿ ಪಾಟೀಲ್, ರಾಮಲಿಂಗಾರೆಡ್ಡಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಅವರು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.
“ನಿಮ್ಮೆಲ್ಲರ ವಾದವನ್ನು ಪರಿಗಣಿಸಿದ್ದೇನೆ. ಅಮೆರಿಕಾದ ಒಂದು ತೀರ್ಪು ಮತ್ತು ಸುಪ್ರೀಂ ಕೋರ್ಟ್‌ನ ಮೂರು ತೀರ್ಪುಗಳನ್ನು ಉಲ್ಲೇಖಿಸಿದ್ದು, ಎಲ್ಲಾ ಅರ್ಜಿಗಳನ್ನು ವಜಾ ಮಾಡಲಾಗಿದೆ” ಎಂದು ನ್ಯಾ. ದೀಕ್ಷಿತ್ ಹೇಳಿದರು.
“ಅರ್ಜಿದಾರರು ಅಧೀನ ನ್ಯಾಯಾಲಯಕ್ಕೆ ಒಂದೇ ದಿನ ಹೋದರೆ ಗದ್ದಲವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ವಿಭಿನ್ನ ದಿನಾಂಕಗಳನ್ನು ನಿಗದಿಪಡಿಸಿದ್ದೇನೆ. ನಿಗದಿಪಡಿಸಿರುವ ದಿನದಂದು ಅರ್ಜಿದಾರರು ವಿಚಾರಣಾಧೀನ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರಾಗಿ ಆದೇಶ ಪಡೆಯಬಹುದು” ಎಂದಿದ್ದಾರೆ.
“ಸಿದ್ದರಾಮಯ್ಯ ಮಾರ್ಚ್ 6ರಂದು, ರಣದೀಪ್ ಸುರ್ಜೇವಾಲಾ ಅವರು ಮಾರ್ಚ್ 7ರಂದು, ಎಂ ಬಿ ಪಾಟೀಲ್, ರಾಮಲಿಂಗಾ ರೆಡ್ಡಿ ಅವರು ಮಾರ್ಚ್ 15ರಂದು ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಿ, ಆದೇಶ ಪಡೆಯಬೇಕು” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
“ಎಲ್ಲಾ ಅರ್ಜಿದಾರರು ತಲಾ 10 ಸಾವಿರ ರೂಪಾಯಿಗಳನ್ನು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಸಲ್ಲಿಸಬೇಕು. ಪೊಲೀಸ್ ಅಧಿಕಾರಿಯನ್ನು ಯಾವುದೇ ಸಮರ್ಥನೆ ನೀಡದೆ ಪ್ರತಿವಾದಿಯಾಗಿಸಿರುವುದಕ್ಕೆ ದಂಡ ವಿಧಿಸಲಾಗಿದ್ದು, ಆಕೆಯನ್ನು ವ್ಯಕ್ತಿಗತವಾಗಿ ಪ್ರತಿವಾದಿಯನ್ನಾಗಿಸಲಾಗಿದೆ. ರಾಜಕೀಯ ಪ್ರೇರಿತ ಎಂದು ಅರ್ಜಿಯಲ್ಲಿ ಹೇಳಿರುವುದನ್ನು ಬಿಟ್ಟರೆ ಪೊಲೀಸ್ ಅಧಿಕಾರಿಯನ್ನು ಏಕೆ ಪ್ರತಿವಾದಿಯನ್ನಾಗಿಸಲಾಗಿದೆ ಎಂಬುದನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿಲ್ಲ” ಎಂದು ನ್ಯಾಯಾಲಯ ವಿವರಿಸಿದೆ.
“ಅರ್ಜಿದಾರರು ಕಾನೂನಿಗೆ ಬದ್ಧರಾಗಿದ್ದರೆ ಉಳಿದವರು ಕಾನೂನಿಗೆ ಬದ್ಧರಾಗಿರುತ್ತಾರೆ. ಪೋಸ್ಟ್‌ಮನ್ ಮತ್ತು ಪ್ರಧಾನ ಮಂತ್ರಿ ಇಬ್ಬರೂ ಕ್ರಿಮಿನಲ್ ಕಾನೂನಿನ ಅಡಿ ಸಮಾನರು” ಎಂದು ಮೌಖಿಕವಾಗಿ ನ್ಯಾಯಾಲಯ ಹೇಳಿದೆ.
“ಬೆಂಗಳೂರಿನಲ್ಲಿ ಬೆಳಗಿನ ಸಮಯದಲ್ಲಿ ಸಾರ್ವಜನಿಕವಾಗಿ ರಸ್ತೆಗಳಿಯುವುದು ಸಾರ್ವಜನಿಕರಿಗೆ ಭಾರಿ ಸಮಸ್ಯೆ ಉಂಟು ಮಾಡುತ್ತದೆ. ನಗರದ ಬದುಕು ಹೆಚ್ಚು ಅಸಹನೀಯ. ಜನಪ್ರತಿನಿಧಿಗಳಾದ ಮಾತ್ರಕ್ಕೆ ಅವರು ಹಾಗೆ ಮಾಡಲಾಗದು. ಅವರು ಕಾನೂನು ಪಾಲಿಸಬೇಕು. ಆನಂತರ ಮತದಾರರು ಕಾನೂನು ಪಾಲಿಸುತ್ತಾರೆ” ಎಂದಿದ್ದಾರೆ.
“ಅರ್ಜಿದಾರರು ವಿಶೇಷ ನ್ಯಾಯಾಲಯಕ್ಕೆ ತೆರಳುವ ದಿನ ವಿಧಾನ ಮಂಡಲ ಕಲಾಪ ಚಾಲ್ತಿಯಲ್ಲಿದ್ದರೆ ವಿಚಾರಣಾಧೀನ ನ್ಯಾಯಾಧೀಶರು ಮತ್ತೊಂದು ದಿನ ಅವರನ್ನು ನ್ಯಾಯಾಲಯದ ಮುಂದೆ ಹಾಜರಾಗಲು ಸೂಚಿಸಬಹುದು” ಎಂದೂ ನ್ಯಾಯಾಲಯ ಹೇಳಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ಪ್ರಕರಣದ ಹಿನ್ನೆಲೆ: ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ಆಗ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಕೆ ಎಸ್‌ಈಶ್ವರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿ 2022ರ ಏಪ್ರಿಲ್ 14ರಂದು ಬೆಂಗಳೂರಿನ ರೇಸ್ ವ್ಯೂ ಹೋಟೆಲ್ ಬಳಿ ಕಾಂಗ್ರೆಸ್ ಪಕ್ಷದ ನಾಯಕರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸಾರ್ವಜನಿಕರ ಮುಕ್ತ ಸಂಚಾರಕ್ಕೆ ಅಡ್ಡಿಪಡಿಸಿದ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದ ಆರೋಪದ ಮೇಲೆ ನಗರದ ಹೈಗ್ರೌಂಡ್ಸ್ ಪೊಲೀಸರು ಅರ್ಜಿದಾರರ ವಿರುದ್ಧ ಐಪಿಸಿ ಸೆಕ್ಷನ್ 143 (ಕಾನೂನುಬಾಹಿರವಾಗಿ ಸಮಾವೇಶಗೊಳ್ಳುವುದು), ಕರ್ನಾಟಕ ಪೊಲೀಸ್ ಕಾಯಿದೆ ಸೆಕ್ಷನ್ 103 ಅಡಿ ಪ್ರಕರಣ ದಾಖಲಿಸಿದ್ದರು.
ಈ ಸಂಬಂಧ 42ನೇ ಎಸಿಎಂಎಂ ನ್ಯಾಯಾಲಯ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ಜಾರಿ ಮಾಡಿದ್ದ ಎನ್‌ಬಿಡಬ್ಲ್ಯೂ( ಜಾಮೀನು ರಹಿತ ಬಂಧನ ವಾರೆಂಟ್) ಹಾಗೂ ವಿಶೇಷ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ರಾಮಲಿಂಗಾ ರೆಡ್ಡಿ, ಎಂ ಬಿ ಪಾಟೀಲ್ ಮತ್ತು ಎಎಐಸಿಸಿ ಮುಖಂಡ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಅರ್ಜಿ ಸಲ್ಲಿಸಿದ್ದರು.