ಕೋ-ಲೊಕೇಷನ್ ಹಗರಣ: ಎನ್‌ಎಸ್‌ಇ, ಚಿತ್ರಾ ರಾಮಕೃಷ್ಣ ವಿರುದ್ಧದ ಆರೋಪ ಕೈಬಿಟ್ಟ ಸೆಬಿ

ಎನ್‌ಎಸ್‌ಇ ಮತ್ತು ಅದರ ಉನ್ನತ ಅಧಿಕಾರಿಗಳ ವಿರುದ್ಧದ ಆರೋಪ ರುಜುವಾತುಪಡಿಸಲು ಸಾಕಷ್ಟು ಪುರಾವೆಗಳು ದೊರೆಯದ ಹಿನ್ನೆಲೆಯಲ್ಲಿ ಸೆಬಿ ಕಾಯಂ ಸದಸ್ಯ ಕಮಲೇಶ್ ಸಿ ವರ್ಷ್ನಿ ಈ ಆದೇಶ ನೀಡಿದ್ದಾರೆ.
NSE, EBI with Co-Location case.
NSE, EBI with Co-Location case.
Published on

ಕೋ- ಲೊಕೇಷನ್‌ ಹಗರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್ಎಸ್ಇ) ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಚಿತ್ರಾ ರಾಮಕೃಷ್ಣ, ಮಾಜಿ ಉಪಾಧ್ಯಕ್ಷ ರವಿ ನಾರಾಯಣ್, ಮಾಜಿ ಗ್ರೂಪ್ ಆಪರೇಟಿಂಗ್ ಆಫೀಸರ್ ಆನಂದ್ ಸುಬ್ರಮಣಿಯನ್ ಮತ್ತು ಇತರ ನಾಲ್ವರು ಮಾಜಿ ಹಿರಿಯ ಎನ್ಎಸ್ಇ ಅಧಿಕಾರಿಗಳ ವಿರುದ್ಧದ ವಿಚಾರಣೆಯನ್ನು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಕೈಬಿಟ್ಟಿದೆ [ಎನ್‌ಎಸ್‌ಇ ಮತ್ತಿತರರ (ಕೋ- ಲೊಕೇಷನ್‌) ನಡುವಣ ಪ್ರಕರಣದ ಆದೇಶ].

Also Read
ಎನ್ಎಸ್ಇ ಹಗರಣ: ಚಿತ್ರಾ ರಾಮಕೃಷ್ಣಗೆ ನೀಡಿರುವ ಜಾಮೀನು ಎತ್ತಿಹಿಡಿದ ಸುಪ್ರೀಂ ಕೋರ್ಟ್‌

ಎನ್ಎಸ್ಇ ಮತ್ತು ಅದರ ಉನ್ನತ ಅಧಿಕಾರಿಗಳ ವಿರುದ್ಧದ ಆರೋಪ ರುಜುವಾತುಪಡಿಸಲು ಸಾಕಷ್ಟು ಪುರಾವೆಗಳು ದೊರೆಯದ ಹಿನ್ನೆಲೆಯಲ್ಲಿ ಸೆಬಿ ಕಾಯಂ ಸದಸ್ಯ ಕಮಲೇಶ್ ಸಿ ವರ್ಷ್ನಿ ಈ ಆದೇಶ ನೀಡಿದ್ದಾರೆ.

ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ (ಐಎಸ್‌ಬಿ) 2023ರಲ್ಲಿ ನೀಡಿದ್ದ ವರದಿಯ ಆಚೆಗೆ "ಪ್ರಸ್ತುತ ವಿಚಾರಣೆಗೆ ಸಂಬಂಧಿಸಿದಂತೆ ಯಾವುದೇ ಹೊಸ ಪುರಾವೆಗಳು ಕಂಡುಬಂದಿಲ್ಲ" ಎಂದು ಸೆಬಿ  ಆದೇಶದಲ್ಲಿ ಒತ್ತಿಹೇಳಿದೆ .

Also Read
ಎನ್ಎಸ್ಇ ಕೋ- ಲೊಕೇಷನ್ ಹಗರಣ: ಚಿತ್ರಾ, ಆನಂದ್ ಸುಬ್ರಮಣಿಯಂ ಜಾಮೀನು ಅರ್ಜಿಯ ತೀರ್ಪು ಕಾಯ್ದಿರಿಸಿದ ವಿಶೇಷ ನ್ಯಾಯಾಲಯ

ಒಪಿಜಿ ಸೆಕ್ಯುರಿಟೀಸ್ (ಒಪಿಜಿ) ಮತ್ತು ಎನ್‌ಎಸ್‌ಇ ಅಧಿಕಾರಿಗಳ ನಡುವೆ ಒಪ್ಪಂದ ಅಥವಾ ಸಖ್ಯ ಇತ್ತು ಎಂಬುದನ್ನು ಸಾಬೀತುಪಡಿಸಲು ಅಗತ್ಯವಿರುವ  ಮಾನದಂಡವನ್ನು ಕೂಡ  ಲಭ್ಯವಿರುವ ಪುರಾವೆಗಳು ಈಡೇರಿಸಿಲ್ಲ ಎಂದು ಅದು ಹೇಳಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಬಿಯು ಎನ್‌ಎಸ್‌ಇಗೆ ₹625 ಕೋಟಿ ಹಣ ನೀಡಲು ಸೂಚಿಸಿದ್ದ ಆದೇಶವನ್ನು ರದ್ದುಪಡಿಸಿ ಷೇರುಪೇಟೆ ಮೇಲ್ಮನವಿ ನ್ಯಾಯಮಂಡಳಿ (ಎಸ್‌ಎಟಿ) ನೀಡಿದ್ದ ತೀರ್ಪಿನ ಹಿನ್ನೆಲೆಯಲ್ಲಿ ಈ ಆದೇಶ ನಿಡಲಾಗಿದೆ.

Also Read
ಅಕ್ರಮ ಹಣ ವರ್ಗಾವಣೆ ಪ್ರಕರಣ: ಚಿತ್ರಾ ರಾಮಕೃಷ್ಣಗೆ ದೆಹಲಿ ಹೈಕೋರ್ಟ್ ಜಾಮೀನು

2009ರಲ್ಲಿ ಎನ್‌ಎಸ್‌ಇ ಜಾರಿಗೆ ತಂದ ಕೋ- ಲೊಕೇಷನ್‌ ಸೌಲಭ್ಯ, ದಲ್ಲಾಳಿಗಳಿಗೆ ತಮ್ಮ ಸರ್ವರ್‌ಗಳನ್ನು ಎನ್‌ಎಸ್‌ಇಯ ದತ್ತಾಂಶ ಕೇಂದ್ರಗಳಲ್ಲಿ ಶುಲ್ಕ ಪಾವತಿಸಿ ಇರಿಸಲು ಅವಕಾಶ ಮಾಡಿಕೊಟ್ಟಿತು. ಆದರೆ, ಇದು ಹೀಗೆ ಸರ್ವರ್‌ಗಳನ್ನು ಇರಿಸಿದವರಿಗೆ ಇತರ ಭಾಗೀದಾರರಿಗಿಂತ ಕೆಲ ಮಿಲಿ ಸೆಕೆಂಡು ಮೊದಲು ಮಾರುಕಟ್ಟೆ ದತ್ತಾಂಶ ಪಡೆಯಲು ಅವಕಾಶ ನೀಡುತ್ತಿತ್ತು. ಈ ಅತ್ಯಲ್ಪ ಕಾಲಾವಧಿಯ ಮುಂಚೂಣಿಯು ಈ ಸಂಸ್ಥೆಗಳು ಷೇರು ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಲು ಅನುವು ಮಾಡಿಕೊಟ್ಟಿತ್ತು.

ಹೀಗೆ ಆದ್ಯತೆಯಲ್ಲಿ ದತ್ತಾಂಶ ಪಡೆಯುವಿಕೆ ಸಮಸ್ಯೆ ಬಗ್ಗೆ ಸೆಬಿಗೆ ಕೆಲವರು 2015 ರಲ್ಲಿ ಎಚ್ಚರಿಕೆ ನೀಡಿದಾಗ ವಿವಾದವು ಹೊರಹೊಮ್ಮಿತು. ಈ ಕುರಿತು ತನಿಖೆ ನಡೆಸಿದ್ದ ಸೆಬಿ ಸಮಿತಿಯು ಎನ್‌ಎಸ್‌ಇಯ ದತ್ತಾಂಶ ಪ್ರಸರಣ ವ್ಯವಸ್ಥೆಯಲ್ಲಿನ ಈ ಲೋಪವನ್ನು ಬಳಸಿಕೊಂಡು ಷೇರು ಮಾರುಕಟ್ಟೆ ದುರುಪಯೋಗ ಪಡಿಸಿಕೊಳ್ಳುವುದು ಸಾಧ್ಯ ಎಂದು ಕಂಡುಹಿಡಿದಿತ್ತು, ಇದು ಒಪಿಜಿ ಷೇರು ವಹಿವಾಟು ಸಂಸ್ಥೆ ಸಹಿತ 15 ಷೇರು ವಹಿವಾಟು ದಲ್ಲಾಳಿಗಳ ವಿರುದ್ಧದ ತನಿಖೆಗೆ ನಾಂದಿ ಹಾಡಿತ್ತು.

Kannada Bar & Bench
kannada.barandbench.com