ಛತ್ತೀಸ್‌ಗಢ ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯ ವಿಜಯ್ ದರ್ಡಾ, ಅವರ ಪುತ್ರ ದೇವೆಂದರ್ ದರ್ಡಾ ಹಾಗೂ ಜೆಎಲ್‌ಡಿ ಯವತ್ಮಲ್ ಎನರ್ಜಿ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಮನೋಜ್ ಕುಮಾರ್ ಜಯಸ್ವಾಲ್ ಅವರಿಗೆ ದೆಹಲಿ ನ್ಯಾಯಾಲಯ ಬುಧವಾರ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಕಲ್ಲಿದ್ದಲು ಕಾರ್ಯದರ್ಶಿ ಎಚ್‌ಸಿ ಗುಪ್ತಾ ಮತ್ತು ಐಎಎಸ್ ಅಧಿಕಾರಿಗಳಾದ ಕೆಎಸ್ ಕ್ರೋಫಾ, ಕೆಸಿ ಸಮರಿಯಾ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿ ರವೂಜ್ ಅವೆನ್ಯೂ ನ್ಯಾಯಾಲಯ ಸಂಕೀರ್ಣದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂಜಯ್ ಬನ್ಸಾಲ್ ಅವರು ಆದೇಶ ನೀಡಿದ್ದಾರೆ.
ದರ್ಡಾ ಹಾಗೂ ಅವರ ಪುತ್ರ, ಜಯಸ್ಪಾಲ್ ಅವರಿಗೆ ತಲಾ ₹ 10 ಲಕ್ಷ ದಂಡ ವಿಧಿಸಲಾಗಿದ್ದು, ಗುಪ್ತಾ, ಕ್ರೋಫಾ ಹಾಗೂ ಸಮರಿಯಾ ತಲಾ ₹ 10,000 ದಂಡ ಪಾವತಿಸಬೇಕಿದೆ. ಆದೇಶದ ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.
ಜುಲೈ 13ರಂದು ನೀಡಲಾಗಿದ್ದ ಆದೇಶದಲ್ಲಿ, ಐಪಿಸಿ ಸೆಕ್ಷನ್ 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ಸಂಪಾದನೆಗೆ ಪ್ರೇರಣೆ) ಸಹವಾಚನ ಸೆಕ್ಷನ್ 120ಬಿ (ಕ್ರಿಮಿನಲ್ ಪಿತೂರಿ) ಮತ್ತು ಭ್ರಷ್ಟಾಚಾರ ನಿಗ್ರಹ ಕಾಯಿದೆಯ 13 (1) (ಡಿ) (iii) ಸೆಕ್ಷನ್ ಅಡಿ ಎಲ್ಲಾ ಆರೋಪಿಗಳು ಅಪರಾಧಿಗಳೆಂದು ನ್ಯಾಯಾಲಯ ತೀರ್ಪು ನೀಡಿತ್ತು. ಹಗರಣಕ್ಕೆ ಸಂಬಂಧಿಸಿದಂತೆ 13ನೇ ಬಾರಿ ದೋಷಿಗಳನ್ನು ಪ್ರಕಟಿಸಲಾಗಿತ್ತು.