ಕಲ್ಲಿದ್ದಲು ಹಗರಣ: ನಿವೃತ್ತ ಕಾರ್ಯದರ್ಶಿ, ಮಾಜಿ ಸಂಸದ ಸೇರಿ ಐವರು ದೋಷಿಗಳು ಎಂದು ದೆಹಲಿ ನ್ಯಾಯಾಲಯದ ತೀರ್ಪು

ಸಿಬಿಐ ಏಪ್ರಿಲ್ 15, 2014 ರಂದು ಪ್ರಕರಣ ಮುಕ್ತಾಯಗೊಳಿಸಿ ವರದಿ ಸಲ್ಲಿಸಿತ್ತು. ಆದರೆ ಖಾಸಗಿ ಕಂಪನಿ ಮತ್ತು ಸರ್ಕಾರಿ ಅಧಿಕಾರಿಗಳು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿ ನ್ಯಾಯಾಲಯ ಅದನ್ನು ತಿರಸ್ಕರಿಸಿತ್ತು.
Rouse Avenue District Court
Rouse Avenue District Court

ಛತ್ತೀಸ್‌ಗಢದಲ್ಲಿ ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಕಲ್ಲಿದ್ದಲು ಸಚಿವಾಲಯದ ಮಾಜಿ ಕಾರ್ಯದರ್ಶಿ ಎಚ್‌ ಸಿ ಗುಪ್ತಾ ರಾಜ್ಯಸಭಾ ಸದಸ್ಯ ವಿಜಯ್ ದರ್ಡಾ ಸೇರಿದಂತೆ ಐವರನ್ನು ದೋಷಿಗಳು ಎಂದು ದೆಹಲಿ ನ್ಯಾಯಾಲಯ ಇತ್ತೀಚೆಗೆ ತೀರ್ಪು ನೀಡಿದೆ.

ಐಎಎಸ್ ಅಧಿಕಾರಿಗಳಾದ ಕೆ ಎಸ್ ಕ್ರೋಫಾ ಮತ್ತು ಕೆ ಸಿ ಸಮ್ರಿಯಾ, ದರ್ಡಾ ಅವರ ಪುತ್ರ ದೇವೆಂದರ್ ದರ್ಡಾ, ಜೆಎಲ್‌ಡಿ ಯವತ್ಮಲ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ಹೆಸರಿನ ಕಂಪನಿ ಮತ್ತದರ ನಿರ್ದೇಶಕ ಮನೋಜ್ ಕುಮಾರ್ ಜೈಸ್ವಾಲ್ ಅವರನ್ನು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂಜಯ್ ಬನ್ಸಾಲ್ ಅವರು ಗುರುವಾರ ಹೊರಡಿಸಿದ ಆದೇಶದಲ್ಲಿ ದೋಷಿಗಳೆಂದು ಪ್ರಕಟಿಸಿದ್ದಾರೆ.

Also Read
ಅದಾನಿ ಕಂಪೆನಿಗೆ ಕಲ್ಲಿದ್ದಲು ಹರಾಜಿನಲ್ಲಿ ಪಾಲ್ಗೊಳ್ಳಲು ಅವಕಾಶ: ತನಿಖೆ ನಡೆಸಲು ಸಿಬಿಐಗೆ ದೆಹಲಿ ನ್ಯಾಯಾಲಯ ಆದೇಶ

ಐಪಿಸಿ ಸೆಕ್ಷನ್‌ 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ಸಂಪಾದನೆಗೆ ಪ್ರೇರಣೆ) ಸಹವಾಚನ ಸೆಕ್ಷನ್ 120ಬಿ (ಕ್ರಿಮಿನಲ್‌ ಪಿತೂರಿ) ಮತ್ತು ಭ್ರಷ್ಟಾಚಾರ ನಿಗ್ರಹ ಕಾಯಿದೆಯ 13 (1) (ಡಿ) (iii) ಸೆಕ್ಷನ್‌ ಅಡಿ ಎಲ್ಲಾ ಆರೋಪಿಗಳು ಅಪರಾಧಿಗಳೆಂದು ನ್ಯಾಯಾಲಯ ತೀರ್ಪು ನೀಡಿದೆ. ಹಗರಣಕ್ಕೆ ಸಂಬಂಧಿಸಿದಂತೆ 13ನೇ ಬಾರಿ ದೋಷಿಗಳನ್ನು ಪ್ರಕಟಿಸಲಾಗುತ್ತಿದೆ.

Also Read
[ಕಲ್ಲಿದ್ದಲು ಹಗರಣ] ಕೇಂದ್ರ ಸರ್ಕಾರದ ನಿವೃತ್ತ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿಗೆ ಜೈಲು ಶಿಕ್ಷೆ

ಈ ಪ್ರಕರಣವು 2006ರಲ್ಲಿ ಜಾಹೀರಾತು ನೀಡಲಾದ ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆಗೆ ಸಂಬಂಧಿಸಿದ್ದಾಗಿದೆ. ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿ ಅಕ್ರಮ ಲಾಭ ಪಡೆಯುವ ಸಲುವಾಗಿ ಜೆಎಲ್‌ಡಿ ತನ್ನ ಅರ್ಜಿ ನಮೂನೆಯಲ್ಲಿ ವಿವಿಧ ಸಂಗತಿಗಳನ್ನು ಮರೆಮಾಚಿದೆ ಎಂದು ಆರೋಪಿಸಲಾಗಿತ್ತು.

ಸಿಬಿಐ ಏಪ್ರಿಲ್ 15, 2014 ರಂದು ಪ್ರಕರಣ ಮುಕ್ತಾಯಗೊಳಿಸಿ ವರದಿ ಸಲ್ಲಿಸಿತ್ತು. ಹಗರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಂಚು, ಮೋಸ ನಡೆದಿಲ್ಲ ಎಂದು ಅದು ತಿಳಿಸಿತ್ತು. ಆದರೆ ಈ ವರದಿಯನ್ನು ಖಾಸಗಿ ಕಂಪನಿ ಮತ್ತು ಸರ್ಕಾರಿ ಅಧಿಕಾರಿಗಳು ಹಗರಣದಲ್ಲಿ ಸಕ್ರಿಯವಾಗಿ ಶಾಮೀಲಾಗಿದ್ದಾರೆ ಎಂದು ಹೇಳಿ ನ್ಯಾಯಾಲಯ ತಿರಸ್ಕರಿಸಿತ್ತು.

Kannada Bar & Bench
kannada.barandbench.com