

ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧಿತರಾಗಿದ್ದ ಸ್ಯಾಂಡಲ್‌ವುಡ್ ನಟ ಹರ್ಷವರ್ಧಿನಿ ರನ್ಯಾ ಅಲಿಯಾಸ್ ರನ್ಯಾ ರಾವ್ ಸೇರಿದಂತೆ ಮೂವರು ಆರೋಪಿಗಳು ಅವರು ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳ ಸಾಗಣೆ ಚಟುವಟಿಕೆಗಳ ತಡೆ ಕಾಯಿದೆ (ಕಾಫಿಪೋಸಾ) ಅಡಿ ಒಂದು ವರ್ಷದ ಬಂಧನ ಪೂರೈಸಿದ ಹಿನ್ನೆಲೆಯಲ್ಲಿ ಬುಧವಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ವಿಶೇಷ ಆರ್ಥಿಕ ಅಪರಾಧಗಳ ನ್ಯಾಯಾಲಯದ ನ್ಯಾಯಾಧೀಶರಾದ ವಿಶ್ವನಾಥ್ ಗೌಡರ್ ಅವರು ಜಾಮೀನು ಮಂಜೂರು ಮಾಡಿದ್ದಾರೆ.
2025ರ ಮಾರ್ಚ್ 3ರಂದು ರನ್ಯಾ ದುಬೈನಿಂದ ₹12.56 ಕೋಟಿ ಮೌಲ್ಯದ 14.2 ಕೆಜಿ ಮೌಲ್ಯದ ಚಿನ್ನ ತಂದು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದರು.
ರನ್ಯಾ ಸ್ನೇಹಿತ, ಅಮೆರಿಕಾದ ಪ್ರಜೆ ತರುಣ್ ಕೊಂಡೂರು ರಾಜು ಅಲಿಯಾಸ್ ವಿರಾಟ್ ಕೊಂಡೊರು ಅವರನ್ನು ಆರು ದಿನಗಳ ಬಳಿಕ ಬಂಧಿಸಿದ್ದರು. ಬಳ್ಳಾರಿಯ ಚಿನ್ನ ಮಾರಾಟ ವ್ಯಾಪಾರಿ ಸಾಹಿಲ್ ಸರ್ಕಾರಿಯಾ ಅವರನ್ನು 2025ರ ಮಾರ್ಚ್ 26ರಂದು ನ್ಯಾಯಾಲಯ ಬಂಧಿಸಿತ್ತು.
2025ರ ಮೇ 20ರಂದು ವಿಶೇಷ ಆರ್ಥಿಕ ಅಪರಾಧಗಳ ನ್ಯಾಯಾಲಯವು ಮೂರು ಮಂದಿಗೆ ಡೀಫಾಲ್ಟ್ ಜಾಮೀನು ಮಂಜೂರು ಮಾಡಿತ್ತು. 2025ರ ಏಪ್ರಿಲ್ 22ರಂದು ಕೇಂದ್ರ ಸರ್ಕಾರವು ಕಾಫಿಪೋಸಾ ಅಡಿ ಬಂಧನ ಆದೇಶ ಹೊರಡಿಸಿದ್ದರಿಂದ ಅವರು ಬಿಡುಗಡೆಯಾಗಿರಲಿಲ್ಲ.
ಪ್ರಕರಣದ ಹಿನ್ನೆಲೆ: ಮಾರ್ಚ್ 3ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾರನ್ನು ಬಂಧಿಸಿದ್ದ ಡಿಆರ್‌ಐ ಅಧಿಕಾರಿಗಳು ಆಕೆಯಿಂದ ₹12.86 ಕೋಟಿ ಮೌಲ್ಯದ 14.2 ಕೆ ಜಿ ಚಿನ್ನ ಜಫ್ತಿ ಮಾಡಿದ್ದರು. ಕಸ್ಟಮ್ ಅಧಿಕಾರಿಗಳ ತಪಾಸಣೆ ತಪ್ಪಿಸಿಕೊಳ್ಳಲು ಚಿನ್ನವನ್ನು ಬೆಲ್ಟ್ ಮತ್ತು ಜಾಕೆಟ್‌ಗಳಲ್ಲಿ ಇಟ್ಟುಕೊಂಡು ಬರುತ್ತಿದ್ದರು ಎನ್ನಲಾಗಿದೆ. ರಾಜ್ಯದ ಡಿಜಿಪಿ ಶ್ರೇಣಿ ಅಧಿಕಾರಿಯೊಬ್ಬರ ಸಾಕು ಮಗಳಾದ ರನ್ಯಾ ಅವರು ಅತಿ ಗಣ್ಯ ವ್ಯಕ್ತಿಗಳಿಗೆ ಇರುವ ಮಾರ್ಗದ ಮೂಲಕ ವಿಮಾನ ನಿಲ್ದಾಣದಿಂದ ಸರಾಗವಾಗಿ ಹೊರಬರುತ್ತಿದ್ದರು ಎನ್ನಲಾಗಿತ್ತು.