ಅಂತರರಾಷ್ಟ್ರೀಯ ಸಂಗೀತ ಕಂಪೆನಿ ಕೋಕಾ ಕೋಲಾ ಒಡೆತನದ ʼಕೋಕ್ ಸ್ಟುಡಿಯೊʼ ಮತ್ತು ʼಕುಕ್ ಸ್ಟುಡಿಯೊʼ ಹೆಸರಿನ ಅಡುಗೆ ಬ್ಲಾಗಿಂಗ್ ಸಂಸ್ಥೆ ನಡುವಿನ ಟ್ರೇಡ್‌ಮಾರ್ಕ್ ಉಲ್ಲಂಘನೆ ವಿವಾದವನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸಿಕೊಳ್ಳುವಂತೆ ದೆಹಲಿ ಹೈಕೋರ್ಟ್ ಸೂಚಿಸಿದೆ.
"ಮಧ್ಯಸ್ಥಿಕೆ ಮೂಲಕ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಮೊದಲು ಯತ್ನಿಸಬೇಕು" ಎಂದು ನ್ಯಾ. ಪ್ರತಿಭಾ ಎಂ ಸಿಂಗ್ ಹೇಳಿದ್ದಾರೆ. ಅಲ್ಲದೆ ಪ್ರಕರಣದಲ್ಲಿ ಮಧ್ಯಸ್ಥಗಾರರನ್ನಾಗಿ ಹಿರಿಯ ನ್ಯಾಯವಾದಿ ರಾಜೀವ್ ವೀರಮಾನಿ ಅವರನ್ನು ನೇಮಿಸಿರುವ ನ್ಯಾಯಾಲಯ ಮೇ 31, 2022ರಂದು ವೀರಮಾನಿ ಅವರ ಮುಂದೆ ಹಾಜರಾಗುವಂತೆ ಎರಡೂ ಕಡೆಯ ಪಕ್ಷಕಾರರಿಗೆ ಸೂಚಿಸಿದೆ.
ʼಕುಕ್ ಸ್ಟುಡಿಯೊʼವನ್ನು ವಾಣಿಜ್ಯ ಸಂಸ್ಥೆ ʼದಿ ಚಾವ್ಲಾ ಗ್ರೂಪ್ʼನ ಮಾಲೀಕ ನಿಖಿಲ್ ಚಾವ್ಲಾ ನಡೆಸುತ್ತಿದ್ದಾರೆ. ಇದು ಅಡುಗೆ ಕುರಿತಂತೆ ಬ್ಲಾಗ್ ಬರಹ, ವಿಡಿಯೊ ಹಾಗೂ ತರಬೇತಿ ನೀಡುತ್ತದೆ. ಆದರೆ ಇದು ತನ್ನ ಟ್ರೇಡ್‌ಮಾರ್ಕ್ ಆದ ಕೋಕ್ ಸ್ಟುಡಿಯೊವನ್ನು ಹೋಲುವ ಮೂಲಕ ಕಾನೂನನ್ನು ಉಲ್ಲಂಘಿಸಿದೆ ಎಂಬುದು ಕೋಕಾ ಕೋಲಾ ವಕೀಲರ ವಾದ. ಆದರೆ ಕುಕ್ ಮತ್ತು ಸ್ಟುಡಿಯೊ ಪದಗಳು ಸಾಮಾನ್ಯ ಬಳಕೆಯ ಪದಗಳಾಗಿವೆ. ಇನ್ನು ಎರಡರ ನಡುವಿನ ಲೋಗೊ ಹಾಗೂ ವರ್ಣ ಸಂಯೋಜನೆಯಲ್ಲಿ ವ್ಯತ್ಯಾಸವಿದೆ ಎಂದು ಕುಕ್ ಸ್ಟುಡಿಯೊ ಪ್ರತಿಪಾದಿಸಿದೆ.
ವಾದಗಳನ್ನು ಆಲಿಸಿದ ನ್ಯಾಯಾಲಯ ಮಧ್ಯಸ್ಥಿಕೆ ಮೂಲಕ ವಿವಾದ ಬಗೆಹರಿಸಿಕೊಳ್ಳುವಂತೆ ಸೂಚಿಸಿತು. ಈ ಮಧ್ಯೆ 30 ದಿನಗಳೊಳಗೆ ಲಿಖಿತ ಹೇಳಿಕೆ ಸಲ್ಲಿಸುವಂತೆ ಕೋಕಾ ಕೋಲಾ ಕಂಪನಿಗೆ ಸಮನ್ಸ್ ನೀಡಲಾಗಿದೆ. 15 ದಿನಗಳಲ್ಲಿ ಅದರ ಪ್ರತಿಯನ್ನು ಸಲ್ಲಿಸಲು ಫಿರ್ಯಾದಿದಾರರಿಗೆ ಅನುಮತಿಸಲಾಯಿತು. ಸೆಪ್ಟೆಂಬರ್ 12ಕ್ಕೆ ಪ್ರಕರಣದ ಮುಂದಿನ ವಿಚಾರಣೆ ನಿಗದಿಯಾಗಿದೆ.