ಅಭ್ಯರ್ಥಿಗೆ ನ್ಯಾಯಮೂರ್ತಿ ಹುದ್ದೆ ತಿರಸ್ಕರಿಸಲು ಕೊಲಿಜಿಯಂ ನೀಡಿದ ಕಾರಣಗಳನ್ನು ಬಹಿರಂಗಪಡಿಸಲಾಗದು: ದೆಹಲಿ ಹೈಕೋರ್ಟ್

ಕಾರಣಗಳನ್ನು ಬಹಿರಂಗಗೊಳಿಸಿದರೆ, ಹೆಸರು ಶಿಫಾರಸು ಮಾಡಿದವರ ಹಿತಾಸಕ್ತಿ ಮತ್ತು ಸ್ಥಾನಮಾನಕ್ಕೆ ಧಕ್ಕೆಯಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.
Supreme Court collegium
Supreme Court collegium
Published on

ನ್ಯಾಯಮೂರ್ತಿ ಹುದ್ದೆಗೆ ಹೈಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದ ಹೆಸರನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ತಿರಸ್ಕರಿಸಲು ನೀಡಿರುವ ಕಾರಣಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಾಗುವುದಿಲ್ಲ ಏಕೆಂದರೆ ಅದು ಅಂತಹ ಅಭ್ಯರ್ಥಿಗಳ ಹಿತಾಸಕ್ತಿಗಳಿಗೆ ಧಕ್ಕೆ ತರುತ್ತದೆ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಸಿಎ ರಾಕೇಶ್ ಕುಮಾರ್ ಗುಪ್ತಾ ವಿರುದ್ಧ ಪ್ರಧಾನ ಕಾರ್ಯದರ್ಶಿ ಮೂಲಕ ಭಾರತದ ಸುಪ್ರೀಂ ಕೋರ್ಟ್ ನಡುವಣ ಪ್ರಕರಣ].

ಕೊಲಿಜಿಯಂ ವ್ಯಕ್ತಿಯ ಖಾಸಗಿ ಮಾಹಿತಿ ಆಧಾರದ ಮೇಲೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತದೆ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.

"ಅಂತಹ ಮಾಹಿತಿಯನ್ನು ಸಾರ್ವಜನಿಕಗೊಳಿಸಿದರೆ, ನೇಮಕಾತಿ ಪ್ರಕ್ರಿಯೆ ಕುಂಠಿತಗೊಳ್ಳುವ ಪರಿಣಾಮ ಎದುರಾಗುತ್ತದೆ” ಎಂದು ಪೀಠ ಅಭಿಪ್ರಾಯಪಟ್ಟಿದೆ.

ಸುಪ್ರೀಂ ಕೋರ್ಟ್ ಕೊಲಿಜಿಯಂನ ವ್ಯಕ್ತಿನಿಷ್ಠ ತೃಪ್ತಿಗೆ ಸಂಬಂಧಿಸಿದಂತೆ ಹೈಕೋರ್ಟ್ ಮೇಲ್ಮನವಿಯನ್ನು ನಿರ್ಧರಿಸಲಾಗದು ಎಂದು ಪೀಠ ಹೇಳಿದೆ.

Also Read
ಕೊಲಿಜಿಯಂ ವ್ಯವಸ್ಥೆಯಾಗಬಾರದು ಎಂದು ರಾಜಕೀಯ ವ್ಯವಸ್ಥೆ ಭಾವಿಸುವುದರಿಂದ ಅಲ್ಲಿ ಸಮಸ್ಯೆಗಳು ಉಳಿದಿವೆ: ನ್ಯಾ. ಕೌಲ್

ನ್ಯಾಯಮೂರ್ತಿಗಳ ನೇಮಕಾತಿ ಕುರಿತಾಗಿ ಈಗಾಗಲೇ ಸಾಕಷ್ಟು ಇತ್ಯರ್ಥಗೊಂಡ ತೀರ್ಪುಗಳಿದ್ದು, ಅಲ್ಲಿ ಸುಪ್ರೀಂ ಕೋರ್ಟ್ ಪದೇ ಪದೇ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ನೇಮಕಗೊಳ್ಳುವ ವ್ಯಕ್ತಿಗಿರಬೇಕಾದ ಅರ್ಹತೆ ಮತ್ತು ಸೂಕ್ತತೆಯನ್ನು ಗುರುತಿಸುತ್ತದೆ.

ಹೈಕೋರ್ಟ್ ಕೊಲಿಜಿಯಂನ ಶಿಫಾರಸುಗಳನ್ನು ತಿರಸ್ಕರಿಸಲು ಕಾರಣಗಳನ್ನು ಪ್ರಕಟಿಸಲು ಸುಪ್ರೀಂ ಕೋರ್ಟ್‌ಗೆ ನಿರ್ದೇಶನ ನೀಡುವಂತೆ ಕೋರಿ ಸಿ ಎ ರಾಕೇಶ್ ಕುಮಾರ್ ಗುಪ್ತಾ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸುವಾಗ ಈ ಅವಲೋಕನಗಳನ್ನು ಮಾಡಲಾಗಿದೆ.

ಈ ಹಿಂದೆ ಇದೇ ವಿಚಾರವಾಗಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಏಕಸದಸ್ಯ ಪೀಠ ತಿರಸ್ಕರಿಸಿ ₹ 25,000 ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಅವರು ವಿಭಾಗೀಯ ಪೀಠದ ಮೊರೆ ಹೋಗಿದ್ದರು.

Also Read
ಸದುದ್ದೇಶದಿಂದ ಕೊಲಿಜಿಯಂ ರೂಪುತಳೆಯಿತು, ಆದರೆ ಆಧಿಕಾರದ ದುರ್ಬಳಕೆಯೂ ಸಹ ಭ್ರಷ್ಟತೆಯೇ ಅಗಿದೆ: ನ್ಯಾ. ಚಲಮೇಶ್ವರ್

ತಾನು ದೆಹಲಿಯ ನಿವಾಸಿಯಾಗಿದ್ದು ನ್ಯಾಯಮೂರ್ತಿಗಳ ನೇಮಕಾತಿ ನಡೆಯದೆ ಇರುವುದರಿಂದ ನ್ಯಾಯಾಲಯಗಳಲ್ಲಿ ತಮ್ಮ ಪ್ರಕರಣಗಳು ಬಾಕಿ ಉಳಿದಿವೆ. ಹೀಗಾಗಿ ರಿಟ್‌ ಅರ್ಜಿ ಸಲ್ಲಿಸಲು ತಾನು ಅರ್ಹ ಎಂದು ಅವರು ವಿಭಾಗೀಯ ಪೀಠಕ್ಕೆ ತಿಳಿಸಿದ್ದರು.

ಹೈಕೋರ್ಟ್‌ಗೆ ನ್ಯಾಯಮೂರ್ತಿಗಳಾಗಿ ಪದೋನ್ನತಿ ನೀಡುವುದಕ್ಕೆ ಸಂಬಂಧಿಸಿದಂತೆ 2023ರಲ್ಲಿ ಹೈಕೋರ್ಟ್‌ಗಳು ಮಾಡಿದ ಶಿಫಾರಸುಗಳಲ್ಲಿ ಶೇ.35.29ರಷ್ಟನ್ನು  ಸುಪ್ರೀಂ ಕೋರ್ಟ್‌ ತಿರಸ್ಕರಿಸಿದ್ದು, 2021ರಲ್ಲಿ ಈ ನಿರಾಕರಣೆಯ ಪ್ರಮಾಣ ಶೇ.4.38ರಷ್ಟು ಮಾತ್ರ ಇತ್ತು ಎಂದು ಅವರು ಹೇಳಿದ್ದರು.

ವಾದ ಆಲಿಸಿದ ನ್ಯಾಯಾಲಯ ಹೈಕೋರ್ಟ್‌ ಶಿಫಾರಸುಗಳನ್ನು ಕೊಲಿಜಿಯಂ  ತಿರಸ್ಕರಿಸಿರುವ ಕುರಿತಂತೆ ಗುಪ್ತಾ ಅವರ ವಾದ ತಪ್ಪು ಗ್ರಹಿಕೆಯಿಂದ ಕೂಡಿದೆ ಎಂದು ಅದು ಹೇಳಿದೆ.  ಹೈಕೋರ್ಟ್‌ ಅಥವಾ ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆ ಸಮಗ್ರ, ಸಮಾಲೋಚನಾಯುಕ್ತ ಮತ್ತು ವಿರೋಧಕ್ಕೆ ಆಸ್ಪದವಿಲ್ಲದಂತಹ ಪ್ರಕ್ರಿಯೆ ಎಂದು ಅರ್ಥಮಾಡಿಕೊಳ್ಳಲು ಮೇಲ್ಮನವಿದಾರರು ವಿಫಲರಾಗಿದ್ದಾರೆ. ಹೆಸರಿಸಲಾದವರ ಸಮಾಲೋಚನೆಯ ಕೊರತೆಯ ಆಧಾರದ ಮೇಲೆ ಅಥವಾ ಅರ್ಹತೆಯ ಕೊರತೆ ಇದ್ದಲ್ಲಿ ಮಾತ್ರ ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸಬಹುದು ಎಂದು ಅದು ವಿವರಿಸಿದೆ.

 ಈ ಹಿನ್ನೆಲೆಯಲ್ಲಿ ಮನವಿ ವಜಾಗೊಳಿಸಿದ ನ್ಯಾಯಾಲಯ ಗುಪ್ತಾ ಅವರ ಪ್ರಕರಣಗಳ ವಿಚಾರಣೆ ವಿಳಂಬವಾಗುತ್ತಿದೆ ಎನಿಸಿದರೆ ಅವು ತುರ್ತು ವಿಚಾರಣೆಗೆ ಅರ್ಜಿ ಸಲ್ಲಿಸಬಹುದು ಎಂದು ಸಲಹೆ ನೀಡಿತು.

Kannada Bar & Bench
kannada.barandbench.com