ನ್ಯಾಯಮೂರ್ತಿಗಳನ್ನು ನೇಮಕಾತಿ ಮಾಡುವ ಕೊಲಿಜಿಯಂ ಶಿಫಾರಸುಗಳನ್ನು ಸರ್ಕಾರ ಜಾರಿಗೊಳಿಸದಿರುವ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ತೀವ್ರ ಅತೃಪ್ತಿ ವ್ಯಕ್ತಪಡಿಸಿದೆ.
ಕೊಲಿಜಿಯಂ ಮಾಡಿದ ಶಿಫಾರಸ್ಸುಗಳನ್ನು ಜಾರಿಗೊಳಿಸುವುದನ್ನು ಖಾತರಿಪಡಿಸಿಕೊಳ್ಳುವ ಸಲುವಾಗಿ ನ್ಯಾಯಿಕ ಆದೇಶಗಳನ್ನು ನೀಡಬೇಕಾಗಬಹುದು ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎ ಎಸ್ ಓಕಾ ಅವರಿದ್ದ ಪೀಠ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
“ಅಟಾರ್ನಿ ಜನರಲ್ ಅವರೇ ನಾನು ಎಲ್ಲಾ ಪತ್ರಿಕಾ ವರದಿಗಳನ್ನು ನಿರ್ಲಕ್ಷಿಸುತ್ತಾ ಬಂದಿದ್ದೆ. ಆದರೆ ಉನ್ನತ ಸ್ಥಾನದಲ್ಲಿ ಇರುವಂತಹವರು ಅದರಲ್ಲೂ ಸಂದರ್ಶನ ನೀಡಿ ಇದನ್ನು ಹೇಳಿದ್ದಾರೆ. ನಾನು ಬೇರೇನೂ ಹೇಳುವುದಿಲ್ಲ. ನಾವು ನಿರ್ಧಾರ ತೆಗೆದುಕೊಳ್ಳಲೇ ಬೇಕಾದರೆ ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂದು ನ್ಯಾ. ಕೌಲ್ ಅವರು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರನ್ನುದ್ದೇಶಿಸಿ ಹೇಳಿದರು.
"ದಯವಿಟ್ಟು ಇದನ್ನು ಪರಿಹರಿಸಿ. ಈ ವಿಚಾರವಾಗಿ ನ್ಯಾಯಾಂಗ ನಿರ್ಧಾರ ತಳೆಯುವಂತೆ ಮಾಡಬೇಡಿ" ಎಂದು ಪೀಠ ತನ್ನ ತೀವ್ರ ಅಸಮಧಾನ ಸೂಚಿಸುವುದರೊಟ್ಟಿಗೆ ಎಚ್ಚರಿಕೆಯನ್ನೂ ನೀಡಿತು.
ಪೀಠವು ಯಾರನ್ನೂ ಹೆಸರಿಸದೇ ಇದ್ದರೂ, ಟೈಮ್ಸ್ ನೌ ಸುದ್ದಿವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ನೀಡಿದ ಹೇಳಿಕೆಗಳನ್ನು ಪೀಠ ಉದ್ದೇಶಿಸಿತ್ತು. ಸಂದರ್ಶನದಲ್ಲಿ ರಿಜಿಜು ಅವರು ಸರ್ಕಾರ ಕೊಲಿಜಿಯಂ ಶಿಫಾರಸುಗಳನ್ನು ಅಂಗೀಕರಿಸುತ್ತಿಲ್ಲ ಎಂದು ಆರೋಪಿಸಲಾಗದು ಮತ್ತು ತಾನು ಮಾಡಿದ ಎಲ್ಲಾ ಶಿಫಾರಸುಗಳಿಗೆ ಸರ್ಕಾರ ಸಹಿ ಹಾಕಬೇಕೆಂದು ನ್ಯಾಯಮೂರ್ತಿಗಳ ಮಂಡಳಿ ನಿರೀಕ್ಷಿಸಲೂ ಆಗದು ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್ “ಕೊಲಿಜಿಯಂ ಶಿಫಾರಸುಗಳಿಗೆ ಸರ್ಕಾರ ಆಕ್ಷೇಪಿಸಬಹುದಾದರೂ ತನ್ನ ಅತೃಪ್ತಿ ಏನೆಂದು ತಿಳಿಸದೆ ಕೇವಲ ಹೆಸರುಗಳನ್ನು ತಡೆಹಿಡಿಯುವಂತಿಲ್ಲ ಎಂದು ಒತ್ತಿ ಹೇಳಿದೆ.
"ನಿಮ್ಮ ಅಸಮಾಧಾನ ಏನೆಂದು ತಿಳಿಸದೆ ನೀವು ಹೆಸರನ್ನು ತಡೆಹಿಡಿಯುವಂತಿಲ್ಲ. 4 ತಿಂಗಳುಗಳು ಕಳೆದಿಲ್ಲವಾದ್ದರಿಂದ ನಾನು ಹೈಕೋರ್ಟ್ ಶಿಫಾರಸ್ಸುಗಳ ಹೆಸರುಗಳ ಬಗ್ಗೆ ಪ್ರತಿಕ್ರಿಯಿಸಲು ಹೋಗುವುದಿಲ್ಲ, ಆದರೆ 1.5 ವರ್ಷಗಳಿಂದ ಹೆಸರುಗಳು ಬಾಕಿ ಉಳಿದಿವೆ. ನೀವು ನೇಮಕಾತಿ ಪ್ರಿಕ್ರಿಯೆಯನ್ನು ಹತಾಶಗೊಳಿಸುತ್ತಿದ್ದೀರಿ. ನಾವು ಸಮಸ್ಯೆ ಪತ್ತೆ ಹಚ್ಚಿ ಎಂದು ನೋಟಿಸ್ ನೀಡಿದ್ದೇವಷ್ಟೇ, ”ಎಂದು ಪೀಠ ಹೇಳಿದೆ.
ಬೆಂಗಳೂರಿನ ವಕೀಲರ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ನೇಮಕಾತಿಗೆ ಶಿಫಾರಸು ಮಾಡಲಾದ ಹೆಸರುಗಳನ್ನು ಅಂಗೀಕರಿಸುವಲ್ಲಿನ ಕೇಂದ್ರದ ವೈಫಲ್ಯ ಎರಡನೇ ನ್ಯಾಯಮೂರ್ತಿಗಳ ಪ್ರಕರಣದಲ್ಲಿ ನೀಡಿದ ತೀರ್ಪಿಗೆ ನೇರ ವ್ಯತಿರಿಕ್ತವಾಗಿದೆ ಎಂದು ಅದು ಹೇಳಿದೆ.
ಗಡುವು ನೀಡಿದ್ದು ಅವುಗಳನ್ನು ಪಾಲಿಸಬೇಕಿದೆ. ಹಲವು ಶಿಪಾರಸುಗಳು ಬಾಕಿ ಉಳಿದಿವೆ. ಒಳ್ಳೆಯ ಜನರನ್ನು ಪೀಠಕ್ಕೆ ಆರಿಸಬೇಕು ವಿನಾಯಿತಿಗೆ ಅವಕಾಶ ಇಲ್ಲದಿದ್ದರೆ ಗಡುವಿಗೆ ಬದ್ಧವಾಗಿರಬೇಕು. ಶಿಫಾರಸು ಮಾಡಲಾದ ಬಹುತೇಕ ಹೆಸರುಗಳು 4 ತಿಂಗಳ ಮಿತಿ ದಾಟಿವೆ. ನಮಗೆ ಯಾವುದೇ ಮಾಹಿತಿ ಇಲ್ಲ
ಇಂತಹ ವಿಳಂಬಗಳು ನ್ಯಾಯಾಧೀಶರ ಹಿರಿತನದ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎನ್ನುವುದನ್ನು ಕೊಲಿಜಿಯಂ ಗಣನೆಗೆ ತೆಗೆದುಕೊಳ್ಳಲಿದೆ.
ನೇಮಕಾತಿಯ ಈ ಸುತ್ತು ಬಳಸು ಪ್ರಕ್ರಿಯೆಯಿಂದಾಗಿ ಮೊದಲ ತಲೆಮಾರಿನ ಅತ್ಯುತ್ತಮ ವಕೀಲರು ಪೀಠದ ಭಾಗವಾಗಲು ನಿರಾಕರಿಸುತ್ತಿದ್ದಾರೆ.
ಪ್ರಕರಣವನ್ನು ಪರಿಶೀಲಿಸುವುದಾಗಿ ಅಟಾರ್ನಿ ಜನರಲ್ ಮತ್ತು ಸಾಲಿಸಿಟರ್ ಜನರಲ್ ಅವರು ಭರವಸೆ ನೀಡಿದ ನಂತರ ನ್ಯಾಯಾಲಯ ವಿಚಾರಣೆಯನ್ನು ಡಿಸೆಂಬರ್ 8ಕ್ಕೆ ಮುಂದೂಡಿತು.