ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಕೆ ವಿ ವಿಶ್ವನಾಥನ್ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಸುಪ್ರೀಂ ಕೋರ್ಟ್ ಕೊಲಿಜಿಯಂ ತೋರಿದ ಕ್ಷಿಪ್ರತೆ ಅದರ ಕಾರ್ಯೋತ್ಸಾಹಕ್ಕೆ ಪುರಾವೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಮಂಗಳವಾರ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ವಕೀಲರ ಸಂಘ (ಎಸ್‌ಸಿಬಿಎ) ಇತ್ತೀಚೆಗೆ ಪದೋನ್ನತಿ ನೀಡಲಾದ ಆ ಇಬ್ಬರು ನ್ಯಾಯಮೂರ್ತಿಗಳಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೊಲಿಜಿಯಂ ಶಿಫಾರಸು ಮಾಡಿದ 72 ಗಂಟೆಗಳಲ್ಲಿ ಇಬ್ಬರೂ ನ್ಯಾಯಮೂರ್ತಿಗಳ ನೇಮಕಾತಿಗೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ ಎಂದು ಸಿಜೆಐ ಒತ್ತಿ ಹೇಳಿದರು.
ನೇಮಕಾತಿ ಪ್ರಕ್ರಿಯೆಯಲ್ಲಿ ಸರ್ಕಾರ ಪಾಲುದಾರ ಎಂಬ ಅಂಶವನ್ನು ನಾವು ಒಪ್ಪಿಕೊಳ್ಳಬೇಕಿದ್ದು ಹೆಸರು ಶಿಫಾರಸು ಮಾಡಿದ 72 ಗಂಟೆಗಳೊಳಗೆ ನೇಮಕಾತಿ ಮಾಡಲಾಗಿದೆ. ಕೊಲಿಜಿಯಂ ಕಾರ್ಯೋತ್ಸಾಹದಿಂದ ಕೂಡಿದ್ದು ಸಕ್ರಿಯವಾಗಿದೆ ಮತ್ತು ತನ್ನ ಕಾರ್ಯಕ್ಕೆ ಬದ್ಧವಾಗಿದೆ ಎಂಬ ಸಂದೇಶವನ್ನು ನಾವು ಈ ಮೂಲಕ ದೇಶಕ್ಕೆ ರವಾನಿಸಿದ್ದೇವೆ ಎಂದು ಭಾವಿಸುವುದಾಗಿ ಅವರು ತಿಳಿಸಿದರು.
ನ್ಯಾಯಮೂರ್ತಿಗಳ ನೇಮಕಾತಿ ವೇಳೆ ಸುಪ್ರೀಂ ಕೋರ್ಟ್ ನಡೆಸುವ ಸಮಾಲೋಚನೆ ಮತ್ತದರ ವ್ಯಾಪಕ ಸ್ವರೂಪದ ಕುರಿತು ಅವರು ಮಾತನಾಡಿದರು ಅಲ್ಲದೆ ವಕೀಲ ವರ್ಗದಿಂದ ನೇರವಾಗಿ ನ್ಯಾಯಮೂರ್ತಿಗಳಾಗಿ ಪದೋನ್ನತಿ ನೀಡುವುದರ ಮಹತ್ವವನ್ನು ವಿವರಿಸಿದರು.
ಪೀಠಕ್ಕೆ ನೇಮಕಗೊಳ್ಳುವ ವಕೀಲ ಸದಸ್ಯರು ಆಲೋಚನೆಗಳಲ್ಲಿ ತಾಜಾತನ ಮೂಡಿಸುತ್ತಾರೆ. ಜಿಲ್ಲಾ ನ್ಯಾಯಾಂಗದಿಂದ ಹೈಕೋರ್ಟ್‌ಗೆ, ಅಲ್ಲಿಂದ ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆಯುವ ವಕೀಲ ಸಮುದಾಯದ ಸದಸ್ಯರು ನಿರಂತರತೆಯ ಪರಂಪರೆಯನ್ನು ಉಳಿಸುತ್ತಾರೆ. ಸಂಸ್ಥೆಯ ಉಳಿವಿಗೆ ಇಬ್ಬರೂ (ನ್ಯಾಯಮೂರ್ತಿಗಳ ವರ್ಗ ಮತ್ತು ವಕೀಲ ವರ್ಗ) ಮುಖ್ಯ. ವಕೀಲ ಸಮುದಾಯದಿಂದ ಉನ್ನತ ನ್ಯಾಯಾಂಗ ಹುದ್ದೆಗೇರಿದವರಲ್ಲಿ ಸ್ಫೂರ್ತಿ ಮತ್ತು ಮುಂದಾಳತ್ವದ ಗುಣವಿರುತದೆ ಏಕೆಂದರೆ ನ್ಯಾಯಮೂರ್ತಿಗಳಾಗಿ ನೇಮಕವಾಗುವವರೆಗೂ ಅವರು ಬದುಕಿನ ವಾಸ್ತವ ಸಂಗತಿಗಳೊಂದಿಗೆ ಮುಖಾಮುಖಿಯಾಗಿಯೇ ಇರುತ್ತಾರೆ” ಎಂದರು.
ನೇಮಕಗೊಂಡಿರುವ ಇಬ್ಬರೂ ನ್ಯಾಯಮೂರ್ತಿಗಳ ಕಾರ್ಯಕ್ಷಮತೆಯ ಬಗ್ಗೆ ಭಾರತದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ಹೆಮ್ಮೆ ವ್ಯಕ್ತಪಡಿಸಿದರು. ನ್ಯಾಯಮೂರ್ತಿಗಳಾದ ಮಿಶ್ರಾ ಮತ್ತು ವಿಶ್ವನಾಥನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.