ಸಾವರ್ಕರ್ ಭಾವಚಿತ್ರ ಪ್ರಶ್ನಿಸಿದ್ದ ಪಿಐಎಲ್: ಸಮಯ ವ್ಯರ್ಥ ಎಂದ ಸುಪ್ರೀಂ ಕೋರ್ಟ್, ವಿಚಾರಣೆಗೆ ನಕಾರ

“ನಿಮಗೆ ದಂಡ ವಿಧಿಸಲು ಬಯಸುತ್ತೇವೆ. ಏನೆಂದುಕೊಂಡಿದ್ದೀರಿ?” ಎಂದು ನ್ಯಾಯಾಲಯ ಕೆಂಡಾಮಂಡಲವಾಯಿತು. ಬಳಿಕ ಅರ್ಜಿದಾರರು ಪಿಐಎಲ್‌ ಹಿಂಪಡೆಯುವುದಾಗಿ ತಿಳಿಸಿದರು.
VD Savarkar, Supreme Court
VD Savarkar, Supreme Court
Published on

ಸಂಸತ್‌ ಹಾಗೂ ಉಳಿದ ಸಾರ್ವಜನಿಕ ಸ್ಥಳಗಳಲ್ಲಿರುವ ಹಿಂದುತ್ವ ಚಿಂತಕ ವಿನಾಯಕ ದಾಮೋದರ ಸಾವರ್ಕರ್‌ ಅವರ ಭಾವಚಿತ್ರ ತೆರವುಗೊಳಿಸಬೇಕೆಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಮಂಗಳವಾರ ನಿರಾಕರಿಸಿದೆ [ಬಾಲಸುಂದರಂ ಬಾಲಮುರುಗನ್‌ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಅರ್ಜಿಯ ವಿಚಾರಣೆ ಮುಂದುವರೆಸುವಂತೆ ಕೋರಿದರೆ ಅರ್ಜಿದಾರರಾದ ನಿವೃತ್ತ ಭಾರತೀಯ ಕಂದಾಯ ಸೇವೆ ಅಧಿಕಾರಿ ಬಿ ಬಾಲಮುರಗನ್ ಅವರಿಗೆ ಭಾರೀ ದಂಡ ವಿಧಿಸಲಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್  ಹಾಗೂ ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಂಚೋಲಿ ಅವರನ್ನೊಳಗೊಂಡ ಪೀಠ ಎಚ್ಚರಿಕೆ ನೀಡಿತು. ಬಳಿಕ ಅರ್ಜಿದಾರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಿಂಪಡೆಯುವುದಾಗಿ ತಿಳಿಸಿದರು.

Also Read
"ಭಗವದ್ಗೀತೆ ಪಠ್ಯದಲ್ಲಿ ಬೇಡ ಎಂದಾದರೆ ಮತ್ತೇನು ಕಲಿಸುತ್ತೀರಿ?" ನ್ಯಾ. ವಿ ಶ್ರೀಶಾನಂದ

ಇದಕ್ಕೆ ಸಮ್ಮತಿಸಿದ ಸಿಜೆಐ ಸೂರ್ಯಕಾಂತ್‌, “ದಯವಿಟ್ಟು ಇಂತಹ ಪ್ರಕರಣಗಳಲ್ಲಿ ತೊಡಗಿಸಿಕೊಳ್ಳಬೇಡಿ. ನಿಮ್ಮ ನಿವೃತ್ತ ಜೀವನ ಆನಂದಿಸಿ. ಸಮಾಜದಲ್ಲಿ ಯಾವುದಾದರೂ ಸೃಜನಾತ್ಮಕ ಪಾತ್ರ ನಿರ್ವಹಿಸಿ,” ಎಂದು ಹೇಳಿದರು. ಹಿಂಪಡೆಯಲಾಗಿದೆ ಎಂದು ಪರಿಗಣಿಸಿ ನ್ಯಾಯಾಲಯ ಅರ್ಜಿ ವಜಾಗೊಳಿಸಿತು.

ಭಾರತೀಯ ಸಂಸತ್ತಿನ ಕೇಂದ್ರ ಸಭಾಂಗಣ ಹಾಗೂ ಅಧಿಕೃತ ನಿವಾಸ ಒಳಗೊಂಡಂತೆ ವಿವಿಧ ಸಾರ್ವಜನಿಕ ಸ್ಥಳಗಳಿಂದ ಸಾವರ್ಕರ್ ಅವರ ಭಾವಚಿತ್ರವನ್ನು ತೆರವುಗೊಳಿಸುವಂತೆ ನಿರ್ದೇಶನ ನೀಡಬೇಕೆಂದು ಬಾಲಮುರುಗನ್‌ ಮನವಿ ಮಾಡಿದ್ದರು.

ಹತ್ಯೆ ಅಥವಾ ರಾಷ್ಟ್ರವಿರೋಧಿ ಚಟುವಟಿಕೆಗಳಂತಹ ಗಂಭೀರ ಅಪರಾಧಗಳಲ್ಲಿ ಆರೋಪಪಟ್ಟಿ ಸಲ್ಲಿಸಲಾದ ಹಾಗೂ ಗೌರವಯುತವಾಗಿ ನಿರ್ದೋಷಿ ಎಂದು ತೀರ್ಪು ಪಡೆಯದ ಯಾವುದೇ ವ್ಯಕ್ತಿಯನ್ನು ಸರ್ಕಾರ ಗೌರವಿಸದಂತೆ ತಡೆಯಬೇಕು ಎಂದು ಅವರು ಕೋರಿದ್ದರು.

ಇಂದು ಪ್ರಕರಣ ಆಲಿಸುವ ವೇಳೆ ನ್ಯಾ. ಸೂರ್ಯಕಾಂತ್‌ ಅವರು ಅರ್ಜಿದಾರರ ಪೂರ್ವಾಪರಗಳನ್ನು ವಿಚಾರಿಸಿದರು. ಅವರಿಗೆ ಬಡ್ತಿ ನಿರಾಕರಿಸಿದ ಸಂದರ್ಭಗಳು ಯಾವುವು? ಅವರ ವಿರುದ್ಧ ಭ್ರಷ್ಟಾಚಾರ ಆರೋಪಗಳಿವೆಯೇ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಬಾಲಮುರುಗನ್‌ ಅವರು ತಮ್ಮ ವಿರುದ್ಧ ಯಾವುದೇ ಭ್ರಷ್ಟಾಚಾರ ಆರೋಪಗಳಿಲ್ಲ. 2009ರಲ್ಲಿ ‘ಶ್ರೀಲಂಕಾದಲ್ಲಿ ಶಾಂತಿಗಾಗಿ ಉಪವಾಸ ಸತ್ಯಾಗ್ರಹ ನಡೆಸಿದ ನಂತರ ತಮ್ಮ ವಿರುದ್ಧ ಇಲಾಖಾ ಕ್ರಮ ಜರುಗಿಸಲಾಗಿತ್ತುʼ ಎಂದರು.

ಈ ಹಂತದಲ್ಲಿ ನ್ಯಾ. ಕಾಂತ್‌ ಅವರು ಇಂತಹ ಕ್ಷುಲ್ಲಕ ಅರ್ಜಿಗಳು ನಿಮ್ಮ ಮನಸ್ಥಿತಿಯನ್ನು ಹೇಳುತ್ತವೆ ಎಂದರು. ಇದಲ್ಲದೆ ಪ್ರಕರಣದಲ್ಲಿ ಖುದ್ದು ವಾದ ಮಂಡಿಸುವುದಾಗಿ ಹೇಳಿದ್ದ ಬಾಲಮುರುಗನ್‌ ಬಳಿಕ ಚೆನ್ನೈನಿಂದ ವಿಡಿಯೋ ಕಾನ್ಫರೆನ್ಸ್‌ ಮೂಲಕ ವಾದ ಮಂಡನೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದರು. ದೆಹಲಿಯಲ್ಲಿ ಸುಪ್ರೀಂ ಕೋರ್ಟ್‌ ಎದುರು ಹಾಜರಾಗಲು ಆರ್ಥಿಕ ತೊಂದರೆಗಳಿವೆ ಎಂದಿದ್ದರು.

Also Read
ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣ ಮೇಲ್ನೋಟಕ್ಕೆ ವಿಚಾರಣೆಗೆ ಅರ್ಹ: ಹೈಕೋರ್ಟ್‌

ಆಗ ನ್ಯಾ. ಸೂರ್ಯಕಾಂತ್‌ ಅವರು ನೀವು ಐಆರ್‌ಎಸ್ ಅಧಿಕಾರಿಯಾಗಿದ್ದಿರಿ. ದೆಹಲಿಗೆ ಬಂದು ಸ್ವತಃ ಹಾಜರಾಗಲು ನಿಮಗೆ ಸಾಮರ್ಥ್ಯವಿದೆ. ನಿಮಗೆ ದಂಡ (ಉಳಿದವರಿಗೂ ಎಚ್ಚರಿಕೆ ನೀಡಲು ವಿಧಿಸುವ ದಂಡ)  ವಿಧಿಸಲು ಬಯಸುತ್ತೇವೆ. ನೀವು ನಿಮ್ಮನ್ನು ಏನೆಂದುಕೊಂಡಿದ್ದೀರಿ?” ಎಂದು ಕಟುವಾಗಿ ಪ್ರತಿಕ್ರಿಯಿಸಿದರು. ಈ ವೇಳೆ ಅರ್ಜಿದಾರರಾದ ಬಾಲಮುರುಗನ್‌, ಇದು ಸಾರ್ವಜನಿಕ ಹಿತಾಸಕ್ತಿಯಿಂದ ಸಲ್ಲಿಸಿದ ಅರ್ಜಿ ಎಂದು ಉತ್ತರಿಸಿದರು.

ಇದರಿಂದ ತೃಪ್ತರಾಗದ ಸಿಜೆಐ “ನೀವು ₹1 ಲಕ್ಷ ಜಮಾ ಮಾಡಿ. ಅರ್ಜಿ ವಜಾ ಮಾಡಿದರೆ ದಂಡ ವಿಧಿಸಲು ನಮಗೆ ಅವಕಾಶ ಇರಲಿ. ಆಗ ಸಾರ್ವಜನಿಕ ಹಿತಾಸಕ್ತಿ ಎಂದರೇನು ಎಂಬುದನ್ನು ತಿಳಿಸಿಕೊಡುತ್ತೇವೆ. ನೀವು ನ್ಯಾಯಾಲಯದ ಅಮೂಲ್ಯ ಸಮಯ ವ್ಯರ್ಥ ಮಾಡುತ್ತಿದ್ದೀರಿ. ನಿಮಗೆ ಬೇಕಿರುವುದು ಏನು? ನಾವು ದಂಡ ವಿಧಿಸಬೇಕೆ, ಅಥವಾ ನೀವು ಸುಮ್ಮನೆ ಅರ್ಜಿ ಹಿಂಪಡೆಯುತ್ತೀರಾ?” ಎಂದು ಕೇಳಿದರು. ಕಡೆಗೆ ಅರ್ಜಿ ಹಿಂಪಡೆಯುವುದಾಗಿ ಬಾಲಮುರಗನ್‌ ತಿಳಿಸಿದ ಹಿನ್ನೆಲೆಯಲ್ಲಿ ಪ್ರಕರಣ ಮುಕ್ತಾಯಗೊಳಿಸಲಾಯಿತು.

Kannada Bar & Bench
kannada.barandbench.com