ಟೇಬಲ್‌ ಟೆನಿಸ್‌ ಮಹಿಳಾ ತಂಡದಿಂದ ಕೈಬಿಟ್ಟದ್ದನ್ನು ಪ್ರಶ್ನಿಸಿದ್ದ ಅರ್ಚನಾ ಕಾಮತ್‌ ಅರ್ಜಿ ವಜಾ ಮಾಡಿದ ಹೈಕೋರ್ಟ್‌

ಮುಂಬೈ ಆಟಗಾರ್ತಿ ಸ್ವಸ್ತಿಕಾ ಘೋಷ್‌ ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್‌ ವಜಾ ಮಾಡಿತ್ತು. ನಮ್ಮ ದೃಷ್ಟಿಯಲ್ಲಿ ಮನವಿಗೆ ಅರ್ಹತೆ ಇದೆ ಎನಿಸುವುದಿಲ್ಲ. ಹೀಗಾಗಿ ಅರ್ಜಿ ವಜಾ ಮಾಡಲಾಗಿದೆ ಎಂದ ಪೀಠ.
Table Tennis player Archana Kamath and Karnataka HC
Table Tennis player Archana Kamath and Karnataka HC

ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಜುಲೈ-ಆಗಸ್ಟ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌ ಗೇಮ್ಸ್‌-2022ಕ್ಕೆ ಭಾರತದ ಟೇಬಲ್‌ ಟೆನಿಸ್‌ ಮಹಿಳಾ ತಂಡಕ್ಕೆ ತಮ್ಮನ್ನು ಆಯ್ಕೆ ಮಾಡದ ಭಾರತೀಯ ಟೇಬಲ್‌ ಟೆನಿಸ್‌ ಒಕ್ಕೂಟದ (ಟಿಟಿಎಫ್‌ಐ) ನಿರ್ಧಾರ ಪ್ರಶ್ನಿಸಿ ಆಟಗಾರ್ತಿ ಅರ್ಚನಾ ಕಾಮತ್‌ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಬುಧವಾರ ವಜಾ ಮಾಡಿದೆ.

ಬೆಂಗಳೂರಿನ ಅರ್ಚನಾ ಕಾಮತ್‌ ಅವರು 2022ರ ಜೂನ್‌ 6ರಂದು ಟಿಟಿಎಫ್ಐ ಮಾಡಿರುವ ಶಿಫಾರಸ್ಸನ್ನು ಪ್ರಶ್ನಿಸಿ ಹಾಗೂ ಮಹಿಳಾ ತಂಡದಿಂದ ತಮ್ಮನ್ನು ಕೈಬಿಟ್ಟಿರುವುದಕ್ಕೆ ಆಕ್ಷೇಪಿಸಿ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಪಿ ಎಸ್‌ ದಿನೇಶ್‌ ಕುಮಾರ್‌ ಮತ್ತು ಸಿ ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ನಿವೃತ್ತ ಮುಖ್ಯ ನ್ಯಾಯಮೂರ್ತಿ ಹಾಗೂ ಇಬ್ಬರು ಪ್ರಮುಖ ವ್ಯಕ್ತಿಗಳನ್ನು ಆಡಳಿತಗಾರರ ಸಮಿತಿ ಒಳಗೊಂಡಿದೆ. ಸಮಿತಿಯು ಫೆಬ್ರವರಿಯಲ್ಲಿ ಅಧಿಕಾರ ಸ್ವೀಕರಿಸಿದೆ ಎಂಬುದಕ್ಕೆ ಯಾವುದೇ ಆಕ್ಷೇಪ ವ್ಯಕ್ತವಾಗಿಲ್ಲ. ಪೋಷಕರ ಅಭಿಪ್ರಾಯ ಆಧರಿಸಿ ಸಮಿತಿಯು 2022ರ ಅಕ್ಟೋಬರ್‌ನಲ್ಲಿ ನೂತನ ಆಯ್ಕೆ ಪ್ರಕ್ರಿಯೆ ಆರಂಭಿಸಲು ನಿರ್ಧರಿಸಿದೆ. ಹಿಂದಿನ ನೀತಿಯ ಪ್ರಕಾರ ಸದ್ಯ ಆಟಗಾರರ ಆಯ್ಕೆ ಮಾಡಲಾಗಿದೆ. ಇದು ತಜ್ಞರ ಸಮಿತಿಗೆ ಒಳಪಟ್ಟಿರುವ ವಿಚಾರವಾಗಿದ್ದು, ಹಾಲಿ ಪ್ರಕರಣದಲ್ಲಿ ಸದರಿ ವಿಚಾರವು ಆಡಳಿತಗಾರರ ಸಮಿತಿಯ ವ್ಯಾಪ್ತಿಗೆ ಸೇರಿದೆ. ಆಯ್ಕೆಯನ್ನು ಪ್ರಶ್ನಿಸಿ ಹಾಲಿ ಪ್ರಕರಣದಲ್ಲಿ ಎಂಟನೇ ಪ್ರತಿವಾದಿಯಾಗಿರುವ ಮುಂಬೈನ ಆಟಗಾರ್ತಿ ಸ್ವಸ್ತಿಕಾ ಘೋಷ್‌ ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್‌ ವಜಾ ಮಾಡಿತ್ತು. ನಮ್ಮ ದೃಷ್ಟಿಯಲ್ಲಿ ಮನವಿಗೆ ಅರ್ಹತೆ ಇದೆ ಎನಿಸುವುದಿಲ್ಲ. ಹೀಗಾಗಿ ಅರ್ಜಿ ವಜಾ ಮಾಡಲಾಗಿದೆ” ಎಂದು ಪೀಠ ಹೇಳಿದೆ.

ಅರ್ಚನಾ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್‌ ಹೊಳ್ಳ ಅವರು “ಅರ್ಚನಾ ಅವರನ್ನು ಕೈಬಿಟ್ಟು 2022ರ ಜೂನ್‌ 6ರಂದು ಟಿಟಿಎಫ್‌ಐ ಮಾಡಿರುವ ಆಕ್ಷೇಪಾರ್ಹ ಆದೇಶವು ಸ್ವೇಚ್ಛೆಯಿಂದ ಕೂಡಿದ್ದು, ಟಿಟಿಎಫ್‌ಐ ಕಾರ್ಯವಿಧಾನ ಮತ್ತು ಉದ್ದೇಶಗಳಿಗೆ ವಿರುದ್ಧವಾಗಿದೆ. ಕಾಮನ್‌ವೆಲ್ತ್‌ ಗೇಮ್ಸ್‌ಗೆ ತಂಡ ಆಯ್ಕೆ ಮಾಡಲಾಗುತ್ತಿದೆ ಎಂಬುದನ್ನು ಆಯ್ಕೆ ಸಮಿತಿ ಪರಿಗಣಿಸಲು ವಿಫಲವಾಗಿದ್ದು, ದೇಶೀಯ ಟೂರ್ನಿಯ ಪ್ರದರ್ಶನ ಆಧರಿಸಿ ಆಯ್ಕೆ ಮಾಡಲಾಗಿದೆ. ಇದು ಸಮರ್ಥನೀಯವಲ್ಲ” ಎಂದು ವಾದಿಸಿದರು.

ಟಿಟಿಎಫ್‌ಐ ಪ್ರತಿನಿಧಿಸಿದ್ದ ಹಿರಿಯ ವಕೀಲ ವಿಕ್ರಮ್‌ ಹುಯಿಲಗೋಳ ಅವರು “ದೆಹಲಿ ಹೈಕೋರ್ಟ್‌ ಆಡಳಿತಗಾರರ ಸಮಿತಿಯನ್ನು ನೇಮಕ ಮಾಡಿದ್ದು, 2022ರ ಫೆಬ್ರವರಿಯಲ್ಲಿ ಸಮಿತಿ ಅಧಿಕಾರ ವಹಿಸಿಕೊಂಡಿದೆ. ಕಾಮನ್‌ವೆಲ್ತ್‌ ಗೇಮ್ಸ್‌ಗೆ ಆಯ್ಕೆ ಪ್ರಕ್ರಿಯೆ ಬದಲಿಸಬಾರದು ಎಂದು ಕೆಲವು ಪೋಷಕರು ಮನವಿ ಮಾಡಿದ್ದರು. ಹೀಗಾಗಿ, ಆಯ್ಕೆ ಪ್ರಕ್ರಿಯೆ ಬದಲಾವಣೆ ವಿಚಾರವನ್ನು 2022ರ ಅಕ್ಟೋಬರ್‌ಗೆ ಮುಂದೂಡಲಾಗಿದೆ” ಎಂದರು.

“ಆಡಳಿತಗಾರರ ಸಮಿತಿಯು ಅರ್ಜಿದಾರರ ಹೆಸರನ್ನು ಉಲ್ಲೇಖಿಸಿದ್ದು ನಿಜ. ಬಳಿಕ ಅದನ್ನು ಭಾರತೀಯ ಕ್ರೀಡಾ ಪ್ರಾಧಿಕಾರದ ಮಹಾನಿರ್ದೇಶಕರಿಗೆ ವರ್ಗಾಯಿಸಲಾಗಿತ್ತು. ಕ್ರೀಡಾ ಪ್ರಾಧಿಕಾರವು ಆಯ್ಕೆ ಮಾಡದಿರುವುದರಿಂದ, ಅದು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿರಲಿಲ್ಲ. ಬಳಿಕ ಆಯ್ಕೆ ವಿಚಾರವನ್ನು ಇಬ್ಬರು ಆಯ್ಕೆಗಾರರಿಗೆ ಬಿಡಲಾಗಿತ್ತು. ಶಿಲ್ಲೋಂಗ್‌ನಲ್ಲಿ ನಡೆದಿದ್ದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅರ್ಜಿದಾರೆ ಅರ್ಚನಾ ಅವರ ಪ್ರದರ್ಶನ ಉತ್ತಮವಾಗಿರಲಿಲ್ಲ. ಹೀಗಾಗಿ, ಅವರ ಹೆಸರನ್ನು ಪರಿಗಣಿಸಲಾಗಿಲ್ಲ. ಹಿಂದೆ ಆಡಿದ್ದ ಪಂದ್ಯ ಮತ್ತು ಕ್ರೀಡಾಕೂಟಗಳಲ್ಲಿ ಆಟಗಾರ್ತಿಯರಾದ ಶ್ರೀಜಾ ಅಕುಲಾ, ರೀತ್‌ ರಿಷ್ಯಾ ಟೆನ್ನಿಸನ್‌, ಮನಿಕಾ ಬಾತ್ರ, ದಿವ್ಯಾ ಪರಾಗ್‌ ಚಿತಾಲೆ ಮತ್ತು ಸ್ವಸ್ತಿಕಾ ಘೋಷ್‌ ಅವರು ಅರ್ಜಿದಾರೆಗಿಂತ ಉತ್ತಮ ಶ್ರೇಯಾಂಕ ಪಡೆದಿದ್ದರು. ದೇಶೀಯ ಟೂರ್ನಿಯಲ್ಲಿ ಮನಿಕಾ ಬಾತ್ರ ಅವರು 33ನೇ ಶ್ರೇಯಾಂಕ ಹೊಂದಿದ್ದು, ಅರ್ಚನಾ ಅವರು 37ನೇ ಶ್ರೇಯಾಂಕಿತರಾಗಿದ್ದರು” ಎಂದು ವಾದಿಸಿದರು.

ಕಳೆದ ವಿಚಾರಣೆಯಲ್ಲಿ ನ್ಯಾಯಾಲಯವು ಭಾರತೀಯ ಟೇಬಲ್‌ ಟೆನಿಸ್‌ ಒಕ್ಕೂಟ, ಭಾರತೀಯ ಕ್ರೀಡಾ ಪ್ರಾಧಿಕಾರ, ಮಹಿಳಾ ತಂಡದಲ್ಲಿ ಸ್ಥಾನ ಪಡೆದಿರುವ ಶ್ರೀಜಾ ಅಕುಲಾ, ರೀತ್‌ ರಿಷ್ಯಾ ಟೆನ್ನಿಸನ್‌, ಮನಿಕಾ ಬಾತ್ರಾ, ದಿಯಾ ಪರಾಗ್‌ ಚಿತಾಲೆ, ಸ್ವಸ್ತಿಕ್‌ ಘೋಷ್‌ ಅವರಿಗೆ ಈಮೇಲ್‌ ಮೂಲಕ ತುರ್ತು ನೋಟಿಸ್‌ ಜಾರಿ ಮಾಡಲು ಆದೇಶಿಸಿತ್ತು. ಟಿಟಿಎಫ್‌ಐ ಮುಂದಿನ ವಿಚಾರಣೆಯವರೆಗೆ ಆಟಗಾರರ ಆಯ್ಕೆ ಪಟ್ಟಿಯನ್ನು ಕಳುಹಿಸಬಾರದು ಎಂದು ಪೀಠವು ಮಧ್ಯಂತರ ಆದೇಶ ಮಾಡಿತ್ತು.

Also Read
ಕಾಮನ್‌ವೆಲ್ತ್‌ ಗೇಮ್ಸ್‌: ಟೇಬಲ್‌ ಟೆನಿಸ್‌ ಮಹಿಳಾ ತಂಡದ ಪಟ್ಟಿ ರವಾನಿಸದಂತೆ ಟಿಟಿಎಫ್‌ಐಗೆ ಹೈಕೋರ್ಟ್‌ ಮಧ್ಯಂತರ ಆದೇಶ

ಟಿಟಿಎಫ್‌ಐ 2022ರ ಜೂನ್‌ 6ರಂದು ಮಾಡಿರುವ ಶಿಫಾರಸ್ಸಿನಲ್ಲಿ ದಿಯಾ ಪರಾಗ್‌ ಚಿತಾಲೆ ಅವರನ್ನು ದೇಶೀಯ ಕ್ರೀಡಾಕೂಟದಲ್ಲಿನ ಪ್ರದರ್ಶನ ಆಧರಿಸಿ ಆಯ್ಕೆ ಮಾಡಲಾಗಿದೆ ಎಂದು ವಿವರಿಸಲಾಗಿದೆ. ದಿಯಾ ಪರಾಗ್‌ ಚಿತಾಲೆ ಅವರು ದೇಶೀಯ ಟೂರ್ನಿಯಲ್ಲಿ 3ನೇ ಶ್ರೇಯಾಂಕ ಹೊಂದಿದ್ದು, ತಾನು (ಅರ್ಚನಾ ಕಾಮತ್‌) ದೇಶೀಯ ಟೂರ್ನಿಯಲ್ಲಿ ಹೆಚ್ಚು ಆಡದೆ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಗಮನಹರಿಸಿರುವುದರಿಂದ ದೇಶೀಯ ಶ್ರೇಣಿಯಲ್ಲಿ 37ನೇ ಶ್ರೇಯಾಂಕ ಹೊಂದಿದ್ದೇನೆ. ಅದೇ ರೀತಿ, ಮನಿಕಾ ಬಾತ್ರಾ ಅವರು ಸಹ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ದೇಶೀಯ ಟೂರ್ನಿಯಲ್ಲಿ 33ನೇ ಶ್ರೇಯಾಂಕ ಹೊಂದಿದ್ದಾರೆ. ಆದಾಗ್ಯೂ ನಮ್ಮಿಬ್ಬರ ಅಂತಾರಾಷ್ಟ್ರೀಯ ಟೂರ್ನಿಗಳ ಉತ್ತಮ ಪ್ರದರ್ಶನ ಹಾಗೂ ಅಲ್ಲಿನ ಶ್ರೇಯಾಂಕದ ಆಧಾರದಲ್ಲಿ ನಮ್ಮಿಬ್ಬರನ್ನು ಪದಕ ಗೆಲ್ಲುವ ದೃಷ್ಟಿಯಿಂದ ತಂಡದಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಆದರೆ, ಈಗ ತಮ್ಮನ್ನು ಮಾತ್ರ ದೇಶೀಯ ಶ್ರೇಯಾಂಕದ ಆಧಾರದಲ್ಲಿ ಕೈಬಿಡಲಾಗಿದ್ದು ಇದು ಅನ್ಯಾಯ ಹಾಗೂ ಅಸಮರ್ಥನೀಯ ಎಂದು ಮನವಿಯಲ್ಲಿ ಹೇಳಲಾಗಿತ್ತು.

ತಮ್ಮ ಹೆಸರನ್ನು ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿತ್ತು. ಆಯ್ಕೆ ಸಮಿತಿಯು ಭಾರತವನ್ನು ಪ್ರತಿನಿಧಿಸುವ ಆಟಗಾರ್ತಿ ಎಂದು ಖಾತರಿ ಪಡಿಸಿತ್ತು (ಶಾರ್ಟ್‌ಲಿಸ್ಟ್‌). ತಾಂತ್ರಿಕ ಅಂಶಗಳನ್ನು ಉಲ್ಲೇಖಿಸಿ ಟಿಟಿಎಫ್‌ಐ ತಮ್ಮ ಹೆಸರನ್ನು ತೆಗೆದು ಹಾಕಿ, ದಿವ್ಯಾ ಪರಾಗ್‌ ಚಿತಾಲೆ ಅವರ ಹೆಸರನ್ನು ಸೇರ್ಪಡೆ ಮಾಡಿದೆ. ಅರ್ಚನಾ ಮತ್ತು ಮನಿಕಾ ಬಾತ್ರಾ ಜೋಡಿಯು ಡಬಲ್ಸ್‌ ವಿಭಾಗದಲ್ಲಿ ದೇಶಕ್ಕೆ ಪದಕ ತಂದು ಕೊಡುವ ಸಾಮರ್ಥ್ಯ ಹೊಂದಿದೆ ಎಂದು ಟಿಟಿಎಫ್‌ಐ ಉಲ್ಲೇಖಿಸಿತ್ತು. ಆದರೆ, ಅಪ್ರಸ್ತುತ ಮತ್ತು ತರ್ಕಹೀನವಾದ ಮಾನದಂಡಗಳ ಅನ್ವಯ ತಮ್ಮ ಹೆಸರನ್ನು ಕೈಬಿಡಲಾಗಿದೆ. ತಮ್ಮನ್ನು ತಂಡದಿಂದ ಕೈಬಟ್ಟಿರುವುದು ತಮ್ಮ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡಿದ್ದು, ಹತಾಶೆಗೊಳ್ಳುವಂತೆ ಮಾಡಿದೆ” ಎಂದು ಅರ್ಚನಾ ಅವರ ಮನವಿಯಲ್ಲಿ ಉಲ್ಲೇಖಿಸಿದ್ದರು.

Related Stories

No stories found.
Kannada Bar & Bench
kannada.barandbench.com