ಕೋಮು ಘರ್ಷಣೆ: ಬಿಜೆಪಿ ವಕ್ತಾರ ದಿಲೀಪ್‌ರ ಫೇಸ್‌ಬುಕ್‌ ಪುಟ ಮರುಸ್ಥಾಪಿಸಲು ಹೈಕೋರ್ಟ್‌ ನಿರ್ದೇಶನ

2026ರ ಆಗಸ್ಟ್‌ 27ರಂದು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಅಳಿಸಲು ಆದೇಶಿಸಿದ್ದ ಆಕ್ಷೇಪಾರ್ಹ ಲಿಂಕ್‌ಗಳನ್ನು ಮರುಸ್ಥಾಪಿಸಬಾರದು ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.
ಕೋಮು ಘರ್ಷಣೆ: ಬಿಜೆಪಿ ವಕ್ತಾರ ದಿಲೀಪ್‌ರ ಫೇಸ್‌ಬುಕ್‌ ಪುಟ ಮರುಸ್ಥಾಪಿಸಲು ಹೈಕೋರ್ಟ್‌ ನಿರ್ದೇಶನ
Published on: 

ಕೋಮು ಘರ್ಷಣೆಗೆ ಸಂಬಂಧಿಸಿದ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಹೊರತುಪಡಿಸಿ ಬಿಜೆಪಿ ರಾಜ್ಯ ವಕ್ತಾರ ದಿಲೀಪ್‌ ಟಿ.ಎನ್‌. ಅಲಿಯಾಸ್‌ ದಿಲೀಪ್‌ ಗೌಡ ಕುಣಿಗಲ್‌ ಅವರ ಫೇಸ್‌ಬುಕ್‌ ಪುಟವನ್ನು ಮರುಸ್ಥಾಪಿಸುವಂತೆ ಕರ್ನಾಟಕ ಹೈಕೋರ್ಟ್‌ ಈಚೆಗೆ ಮಧ್ಯಂತರ ಆದೇಶ ನೀಡಿದೆ.

ಅರ್ಜಿದಾರರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಮರುಸ್ಥಾಪಿಸುವಂತೆ ಮೆಟಾ ಪ್ಲಾಟ್‌ಫಾರ್ಮ್ಸ್‌ಗೆ ಸೂಚನೆ ನೀಡಬೇಕು ಎಂದು ಬಸವನಗುಡಿ ಠಾಣೆಯ ತನಿಖಾಧಿಕಾರಿಗೆ ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ಏಕಸದಸ್ಯ ಪೀಠ ನಿರ್ದೇಶಿಸಿದೆ.

Justice CM Poonacha
Justice CM Poonacha

2026ರ ಆಗಸ್ಟ್‌ 27ರಂದು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಅಳಿಸಲು ಆದೇಶಿಸಿದ್ದ ಆಕ್ಷೇಪಾರ್ಹ ಲಿಂಕ್‌ಗಳನ್ನು ಮರುಸ್ಥಾಪಿಸಬಾರದು ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಅಲ್ಲದೆ, ಮೆಟಾ ಪ್ಲಾಟ್‌ಫಾರ್ಮ್ಸ್‌ ಇಂಕ್‌ ಮತ್ತು ಮೆಟಾ ಪ್ಲಾಟ್‌ಫಾರ್ಮ್ಸ್‌ ಟೆಕ್ನಾಲಜೀಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ಗೆ ನೋಟಿಸ್‌ ಜಾರಿಗೊಳಿಸಿರುವ ನ್ಯಾಯಾಲಯವು ಅರ್ಜಿಯ ಮುಂದಿನ ವಿಚಾರಣೆಯನ್ನು ನವೆಂಬರ್‌ 12ಕ್ಕೆ ನಿಗದಿಪಡಿಸಿದೆ.

ಅರ್ಜಿದಾರರ ಪರ ವಕೀಲರಾದ ಗಿರೀಶ್‌ ಭಾರದ್ವಾಜ್‌ ಮತ್ತು ಎನ್ ವಿವೇಕಾನಂದ ಅವರು “ದಿಲೀಪ್‌ ಪ್ರಕರಣದ ಆರೋಪಿಯಲ್ಲ ಹಾಗೂ ಮ್ಯಾಜಿಸ್ಟ್ರೇಟ್‌ ಆದೇಶದಲ್ಲೂ ಅವರ ಹೆಸರಿಲ್ಲ. ಅವರ ಪುಟಕ್ಕೆ ಸಂಬಂಧಿಸಿರುವುದು ಮರುಹಂಚಿಕೊಂಡ ಒಂದು ವಿಡಿಯೊದ ಯುಆರ್‌ಎಲ್‌ ಮಾತ್ರ. ಆರೋಪಿಯಲ್ಲದ ವ್ಯಕ್ತಿಯ ಇಡೀ ಸಾಮಾಜಿಕ ಮಾಧ್ಯಮ ಖಾತೆಯನ್ನು ನಿರ್ಬಂಧಿಸುವ ಅಧಿಕಾರ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಡಿ ಮ್ಯಾಜಿಸ್ಟ್ರೇಟ್‌ಗಿಲ್ಲ. ಅಂತಹ ಅಧಿಕಾರ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್‌ 69ಎ ಅಡಿಯಲ್ಲಿದ್ದು, ಅದಕ್ಕೆ ಪ್ರತ್ಯೇಕ ಕಾನೂನು ಸುರಕ್ಷತಾ ಕ್ರಮಗಳಿವೆ” ಎಂದರು.

Girish Bharadwaj
Girish Bharadwaj

“ಆಕ್ಷೇಪಾರ್ಹ ವಿಡಿಯೊವನ್ನು ಈಗಾಗಲೇ ಅಳಿಸಿದ್ದರೂ ಇಡೀ ಖಾತೆಯನ್ನು ನಿಷ್ಕ್ರಿಯಗೊಳಿಸಿರುವುದು ಅಸಮರ್ಪಕ ಕ್ರಮವಾಗಿದ್ದು, ಸಂವಿಧಾನದ ವಿಧಿ 19(1)(ಎ) ಅಡಿ ಖಾತರಿಪಡಿಸಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ” ಎಂದು ಅರ್ಜಿದಾರರು ಪ್ರತಿಪಾದಿಸಿದರು.

ಪ್ರಕರಣದ ಹಿನ್ನೆಲೆ: 2026ರ ಆಗಸ್ಟ್‌ 26ರಂದು ಮಿಲಾದ್‌-ಉನ್‌-ನಬಿ ಮೆರವಣಿಗೆ ವೇಳೆ ಬೆಂಗಳೂರಿನ ಬಸವನಗುಡಿಯ ಕೆ ಆರ್‌ ರಸ್ತೆಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ರಾಷ್ಟ್ರ ರಕ್ಷಣಾ ಪಡೆಯ ಪುನೀತ್‌ ಕೆರೆಹಳ್ಳಿ, ಗೋಪಿ ಗೌಡ, ಪುನೀತ್‌ ಗೌಡ, ಚೇತನ್‌ ನಾಯಕ್‌ ಮತ್ತಿತರರು ಮೆರವಣಿಗೆಗೆ ಅಡ್ಡಿಪಡಿಸಿ, ಘೋಷಣೆಗಳನ್ನು ಕೂಗಿ, ಮೆರವಣಿಗೆಯಲ್ಲಿ ಭಾಗವಹಿಸಿದ್ದವರನ್ನು ನಿಂದಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಮೆರವಣಿಗೆಯ ಸಂಘಟಕ ಅಬ್ದುಲ್‌ ರಜಾಕ್‌ ಖಾನ್‌ ನೀಡಿದ ದೂರಿನ ಆಧಾರದಲ್ಲಿ ಬಸವನಗುಡಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.

ಘರ್ಷಣೆಯ ದೃಶ್ಯಾವಳಿಯಿದ್ದ ವಿಡಿಯೊವನ್ನು ದಿಲೀಪ್‌ ತಮ್ಮ ಫೇಸ್‌ಬುಕ್‌ ಪುಟದಲ್ಲಿ ಮರುಹಂಚಿಕೊಂಡಿದ್ದರು. ಆದರೆ, ತಾವು ಅದರ ಮೂಲ ಲೇಖಕರಲ್ಲ ಮತ್ತು ಪ್ರಚೋದನಕಾರಿ ಶೀರ್ಷಿಕೆ ಅಥವಾ ಬೇರೆ ಯಾವುದೇ ಲಿಂಕ್‌ ಸೇರಿಸಿರಲಿಲ್ಲ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.

ಪ್ರಕರಣದ ತನಿಖಾಧಿಕಾರಿಯ ಮನವಿಯ ಮೇರೆಗೆ, ಹಿಂಸಾಚಾರ ತಡೆಯುವ ಉದ್ದೇಶದಿಂದ ಕೆಲವು ಲಿಂಕ್‌ಗಳನ್ನು ಅಳಿಸುವಂತೆ ಬೆಂಗಳೂರಿನ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಆಗಸ್ಟ್‌ 27ರಂದು ಮೆಟಾ, ಎಕ್ಸ್‌ ಹಾಗೂ ಗೂಗಲ್‌/ಯೂಟ್ಯೂಬ್‌ಗೆ ಸೂಚಿಸಿತ್ತು.

ಬಳಿಕ ದಿಲೀಪ್‌ ಮರುಹಂಚಿಕೊಂಡಿದ್ದ ವಿಡಿಯೊವನ್ನು ಫೇಸ್‌ಬುಕ್‌, ‘ಹಿಂಸಾಚಾರ ಮತ್ತು ಪ್ರಚೋದನೆ’ ನೀತಿಯಡಿ ಗುರುತಿಸಿತ್ತು. ಸೂಚನೆ ಬಂದ ಕೂಡಲೇ ವಿಡಿಯೊವನ್ನು ಸ್ವಯಂಪ್ರೇರಿತವಾಗಿ ಅಳಿಸಿದ್ದರೂ, ನಾಲ್ಕು ದಿನಗಳ ನಂತರ 1.55 ಲಕ್ಷಕ್ಕೂ ಅಧಿಕ ಹಿಂಬಾಲಕರಿದ್ದ ‘ದಿಲೀಪ್‌ ಗೌಡ ಕುಣಿಗಲ್‌’ ಫೇಸ್‌ಬುಕ್‌ ಪುಟವನ್ನು ಭಾರತದಲ್ಲಿ ಜಿಯೋ-ಬ್ಲಾಕ್‌ ಮಾಡಲಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ. ಪುಟವನ್ನು ಮರುಸ್ಥಾಪಿಸುವಂತೆ ಮೆಟಾದ ಕುಂದುಕೊರತೆ ಪರಿಹಾರ ವಿಭಾಗಕ್ಕೆ ಇ-ಮೇಲ್‌ ಕಳುಹಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ದಿಲೀಪ್‌ ತಿಳಿಸಿದ್ದಾರೆ.

Kannada Bar & Bench
kannada.barandbench.com