ಆಳಂದದ ದರ್ಗಾ ಸಮೀಪ ಕೋಮು ಉದ್ವಿಗ್ನತೆ: 19 ಮಂದಿಗೆ ಕಲಬುರ್ಗಿ ಜಿಲ್ಲಾ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಮಂಜೂರು

ಆಳಂದ ಲಾಡ್ಲೆ ಮಶಾಕ್‌ ದರ್ಗಾದ ಆವರಣದಲ್ಲಿ ಗುರು ರಾಘವ ಚೈತನ್ಯ ಅವರ ಸಮಾಧಿ ಮೇಲಿನ ಲಿಂಗದ ಬಳಿ ಮೈಲಿಗೆ ಮಾಡಲಾಗಿತ್ತು. ಇದನ್ನು ಶುದ್ಧೀಕರಿಸುವ ಉದ್ದೇಶದಿಂದ ಮಾರ್ಚ್‌ 1ರಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Ladle Mashak Darga at Aland
Ladle Mashak Darga at Aland

ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಲಾಡ್ಲೆ ಮಶಾಕ್‌ ದರ್ಗಾದ ಸಮೀಪ ಸಮಸ್ಯೆ ಸೃಷ್ಟಿಸುವ ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತರುವ ಉದ್ದೇಶದಿಂದ ನೆರೆದಿದ್ದ ಆರೋಪದ ಹಿನ್ನೆಲೆಯಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ 19 ಮಂದಿಗೆ ಕಲಬುರ್ಗಿ ಜಿಲ್ಲಾ ನ್ಯಾಯಾಲಯ ಈಚೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಆಳಂದ ಅಲೀಂ ಸೇರಿದಂತೆ 10 ಮಂದಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಮನವಿಯನ್ನು ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಜಗದೀಶ್‌ ವಿ ಎನ್‌ ಅವರು ಪುರಸ್ಕರಿಸಿದ್ದಾರೆ.

ತನಿಖಾಧಿಕಾರಿಯ ಮುಂದೆ 15 ದಿನಗಳ ಒಳಗೆ ಹಾಜರಾಗಬೇಕು ಮತ್ತು 1 ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್‌ ಮತ್ತು ಒಂದು ಭದ್ರತೆ ನೀಡಬೇಕು. ಪ್ರಾಸಿಕ್ಯೂಷನ್‌ ಸಾಕ್ಷಿಯನ್ನು ತಿರುಚಬಾರದು, ನಿರಂತರವಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕು. ಇಂಥ ಕೃತ್ಯದಲ್ಲಿ ಭಾಗಿಯಾಗಬಾರದು. ತನಿಖಾಧಿಕಾರಿಗೆ ತನಿಖೆ ನಡೆಸಲು ಸಹಕರಿಸಬೇಕು ಎಂಬ ಷರತ್ತುಗಳನ್ನು ಪೀಠವು ವಿಧಿಸಿದ್ದು, ಅಲೀಂ, ಮೌಲಾ ಸಾಬ್‌ ನಿರಗುಡಿ, ನಿಜಾಮ್‌ ಅಲಿ, ಮಶಾಕ್‌, ಆಯೂಬ್‌, ಲಾಡ್ಲೆ ಸಾಬ್‌, ಸಲಾಮ್‌, ಅಸ್ಲಾಮ್‌, ರುಕುಮ್‌ ಮದರ್‌, ಮೆಹೆಬೂಬ್‌, ಅಬ್ದುಲ್‌ ಅಲಿ, ಉಸ್ಮಾನ್‌, ಖಾಸೀಮ್‌, ಮೈನು, ಮಸ್ತಾನ್‌, ಅಬ್ದುಲ್‌ ಸಲಾಮ್‌, ಖಾಸಿಮ್‌, ರುಕ್‌ಮೊದ್ದಿನ್‌ ಮತ್ತು ಮಶಾಕ್‌ ಅನ್ಸಾರ್‌ ಅವರಿಗೆ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಘಟನೆಯ ಹಿನ್ನೆಲೆ: ಆಳಂದ ಲಾಡ್ಲೆ ಮಶಾಕ್‌ ದರ್ಗಾದ ಆವರಣದಲ್ಲಿ ಗುರು ರಾಘವ ಚೈತನ್ಯ ಅವರ ಸಮಾಧಿ ಮೇಲೆ ಲಿಂಗ ಪ್ರತಿಷ್ಠಾಪನೆ ಮಾಡಲಾಗಿದೆ. 2021ರ ನವೆಂಬರ್‌ನಲ್ಲಿ ಕೆಲವು ಕಿಡಿಗೇಡಿಗಳು ಲಿಂಗದ ಬಳಿ ಮೈಲಿಗೆ ಮಾಡಲಾಗಿತ್ತು. ಇದನ್ನು ಶುದ್ಧೀಕರಿಸುವ ಉದ್ದೇಶದಿಂದ ಮಾರ್ಚ್‌ 1ರಂದು ಮಹಾ ಶಿವರಾತ್ರಿ ಹಬ್ಬದಂದು ಗುರು ರಾಘವ ಚೈತನ್ಯ ಅವರ ಸಮಾಧಿ ಬಳಿಗೆ ಕಾಲ್ನಡಿಗೆಯಲ್ಲಿ ತೆರಳಲು ಆಂದೋಲಾದ ಸಿದ್ದಲಿಂಗ ಸ್ವಾಮೀಜಿ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ದಂಡಾಧಿಕಾರಿ ಅವರು ಫೆಬ್ರವರಿ 27ರಿಂದ ಸಿಆರ್‌ಪಿಸಿ ಸೆಕ್ಷನ್‌ 133, 143, 144, 144(ಎ) ರ ಅಡಿ ಆಳಂದದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದರು.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮಾರ್ಚ್‌ 1ರಂದು ದರ್ಗಾದ ಸಮೀಪ ಪೊಲೀಸರನ್ನು ನಿಯೋಜಿಸಲಾಗಿತ್ತು. ಮಧ್ಯಾಹ್ನದ ವೇಳೆಗೆ ಸುಮಾರು 10 ಹಿಂದೂ ಯುವಕರು ರಾಘವ ಚೈತನ್ಯ ಶಿವಲಿಂಗ ಶುಚಿಗೊಳಿಸಲು ದರ್ಗಾ ಪ್ರವೇಶಿಸಿದ್ದರು. 15 ನಿಮಿಷಗಳ ಬಳಿಕ 2500 – 3000 ಮಂದಿ ಮುಸ್ಲಿಮರು ಕಲ್ಲು, ಕಬ್ಬಿಣದ ರಾಡು, ತಲವಾರು, ಚಾಕು ಮತ್ತು ಮಾರಕಾಸ್ತ್ರಗಳನ್ನು ಹಿಡಿದು “ಅಲ್ಲಾಹೋ ಅಕ್ಬರ್‌” ಎಂದು ಕೂಗುತ್ತಾ ಕಾನೂನುಬಾಹಿರವಾಗಿ ಗುಂಪುಗಟ್ಟಿದ್ದರು.

ಉದ್ರಿಕ್ತರ ಗುಂಪು ಉಪ ವಿಭಾಗಾಧಿಕಾರಿ ವಾಹನವನ್ನು ಜಖಂಗೊಳಿಸಿತ್ತು. ದರ್ಗಾದಲ್ಲಿನ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ತೆರಳುತ್ತಿರುವ ಹಿಂದೂಗಳ ಜೊತೆ ತೆರಳುವ ಪೊಲೀಸರನ್ನು ಮುಗಿಸಿ ಎಂದು ಅಧಿಕಾರಿಗಳ ವಿರುದ್ಧ ಘೋಷಣೆ ಹಾಕಿದ್ದರು. ಬಳಿಕ ಪೊಲೀಸರತ್ತ ಉದ್ರಿಕ್ತರ ಗುಂಪು ಕಲ್ಲು, ಕಬ್ಬಿಣದ ರಾಡು, ಮಾರಕಾಸ್ತ್ರಗಳನ್ನು ಎಸೆದಿದ್ದರಿಂದ ಗ್ರಾಮೀಣ ವಿಭಾಗದ ಉಪ ಪೊಲೀಸ್‌ ವರಿಷ್ಠಾಧಿಕಾರಿ ಶೀಲವಂತ್‌, ಪೊಲೀಸ್‌ ಸಿಬ್ಬಂದಿ ಚಂದ್ರಶೇಖರ್‌ ಮತ್ತು ಸಿಕಂದರ್‌ ಅವರಿಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಇದರ ಬೆನ್ನಿಗೇ ಉದ್ರಿಕ್ತರನ್ನು ಪೊಲೀಸರು ಚದುರಿಸಿದ್ದರು ಎಂದು ಆಳಂದ ಪೊಲೀಸ್‌ ಇನ್‌ಸ್ಪೆಕ್ಟರ್‌ ವರದಿ ನೀಡಿದ್ದರು. ಇದನ್ನು ಆಧರಿಸಿ ಠಾಣಾಧಿಕಾರಿ ಘಟನೆಯಲ್ಲಿ ಭಾಗಿಯಾಗಿದ್ದವರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 427, 504, 120(ಬಿ), 143, 147, 148, 307, 332 ,333, 353 ಜೊತೆ 149, ಸಾರ್ವಜನಿಕ ಆಸ್ತಿ ಹಾನಿತಡೆ ಕಾಯಿದೆ ಸೆಕ್ಷನ್‌ 3ರ ಅಡಿ ಪ್ರಕರಣ ದಾಖಲಿಸಿದ್ದರು. ಅರ್ಜಿದಾರರನ್ನು ವಕೀಲ ಉಸ್ತಾದ್‌ ಜಾಕೀರ್‌ ಹುಸೈನ್‌ ಪ್ರತಿನಿಧಿಸಿದ್ದರು.

Attachment
PDF
Aleem and others Versus Aland PS.pdf
Preview

Related Stories

No stories found.
Kannada Bar & Bench
kannada.barandbench.com