ದೆಹಲಿಯ ಐಟಿಸಿ ಮೌರ್ಯ ಹೋಟೆಲ್‌ನಲ್ಲಿ ಸೂಕ್ತವಲ್ಲದ ಕೇಶ ವಿನ್ಯಾಸ ಮಾಡಿದ್ದಕ್ಕಾಗಿ ಹಾಗೂ ಆನಂತರ ನಿರ್ಲಕ್ಷ್ಯದಿಂದ ಕೇಶಚಿಕಿತ್ಸೆ ಮಾಡಿದ್ದಕ್ಕಾಗಿ ಮಹಿಳೆಯೊಬ್ಬರಿಗೆ ₹ 2 ಕೋಟಿ ಪರಿಹಾರ ನೀಡುವಂತೆ ತಾನು ಈ ಹಿಂದೆ ನೀಡಿದ್ದ ಆದೇಶವನ್ನು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಎತ್ತಿ ಹಿಡಿದಿದೆ.
ಎನ್‌ಸಿಡಿಆರ್‌ಸಿ ಈ ಹಿಂದೆ ವಿಧಿಸಿದ್ದ ದಂಡದ ಮೊತ್ತವನ್ನು ಮರುಪರಿಶೀಲಿಸುವಂತೆ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ವಿಚಾರಣೆ ನಡೆಸಿದ ಎನ್‌ಸಿಡಿಆರ್‌ಸಿ ನವದೆಹಲಿ ಅಧ್ಯಕ್ಷ ನ್ಯಾಯಮೂರ್ತಿ ಆರ್‌ಕೆ ಅಗರ್‌ವಾಲ್ ಮತ್ತು ಸದಸ್ಯ ಡಾ ಎಸ್ ಎಂ ಕಾಂತಿಕರ್ ಈ ಆದೇಶ ನೀಡಿದ್ದಾರೆ.
ಎನ್‌ಸಿಡಿಆರ್‌ಸಿ ತಾನು ನೀಡಿದ ಹಿಂದಿನ ಮೊತ್ತವನ್ನು ಮರುದೃಢೀಕರಿಸಬೇಕು ಎಂದು ಕೋರಿ ಅರ್ಜಿದಾರರು ಸಲ್ಲಿಸಿದ್ದ ರೂಪದರ್ಶಿ ಮತ್ತು ನಟನೆಯ ಒಪ್ಪಂದದ ಇಮೇಲ್ ಮತ್ತು ಅರ್ಜಿಗಳನ್ನು ಆಧರಿಸಿ ಆಯೋಗ ಈ ಆದೇಶ ನೀಡಿದೆ.
ಸಮರ್ಥ ಸಾಕ್ಷ್ಯಗಳನ್ನು ಒದಗಿಸುವ ಮೂಲಕ ದೂರುದಾರೆ ತನ್ನ ಪರಿಹಾರದ ಹಕ್ಕನ್ನು ಸಮರ್ಥಿಸಿಕೊಂಡಿದ್ದಾರೆ. ಆದರೂ ಪರಿಹಾರವನ್ನು ಹೆಚ್ಚಿಸುವಂತೆ ಆಕೆ ಯಾವುದೇ ವಾದ ಮಂಡಿಸಿಲ್ಲ. ದೂರುದಾರೆ ಸಲ್ಲಿಸಿದ ವಿವಿಧ ಸಾಕ್ಷ್ಯಾಧಾರ/ ದಾಖಲೆಗಳನ್ನು ಪರಿಗಣಿಸಿ ದೂರುದಾರರಿಗೆ ₹ 2,00,00,000/- (ಎರಡು ಕೋಟಿ ರೂಪಾಯಿ) ಪರಿಹಾರವನ್ನು ನೀಡಿದರೆ ನ್ಯಾಯದ ಹಿತಾಸಕ್ತಿ ಈಡೇರುತ್ತದೆ ಎಂಬ ಅಭಿಪ್ರಾಯವನ್ನು ಪರಿಗಣಿಸಲಾಗಿದೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪರಿಹಾರ ನೀಡುವ ಮೊದಲ ಆದೇಶ ಸೆಪ್ಟೆಂಬರ್ 2021ರಲ್ಲಿ ಹೊರಡಿಸಲಾಗಿದ್ದರಿಂದ ಪ್ರತಿವಾದಿಯಾದ ಐಟಿಸಿ ಹೋಟೆಲ್ ಆ ದಿನದಿಂದ ಶೇ 9ರಷ್ಟು ಬಡ್ಡಿಯೊಂದಿಗೆ ಪರಿಹಾರದ ಮೊತ್ತ ಪಾವತಿಸಬೇಕು ಎಂದು ಸೂಚಿಸಲಾಯಿತು.
ಘಟನೆ 2018ರಲ್ಲಿ ನಡೆದಿತ್ತು. ಸಂದರ್ಶನವೊಂದಕ್ಕೆ ಹಾಜರಾಗಬೇಕಿದ್ದ ಪ್ರತಿವಾದಿ ಆಶ್ನಾ ರಾಯ್ ಅವರು ಕೇಶ ಶೃಂಗಾರಕ್ಕಾಗಿ ಐಟಿಸಿ ಮೌರ್ಯದಲ್ಲಿರುವ ಸೆಲೂನ್‌ಗೆ ತೆರಳಿದ್ದರು. ರೂಢಿಯಂತೆ ಕೇಶ ವಿನ್ಯಾಸ ಮಾಡುತ್ತಿದ್ದ ವಿನ್ಯಾಸಕಿ ಇಲ್ಲದಿದ್ದರಿಂದ ಬೇರೊಬ್ಬ ಸ್ಟೈಲಿಸ್ಟ್ ಅನ್ನು ಸಲೂನ್ ನಿಯೋಜಿಸಿತ್ತು. ಸಲೂನ್ ವ್ಯವಸ್ಥಾಪಕರ ಭರವಸೆ ಮೇರೆಗೆ ಆಶ್ನಾ ಅವರು ಸೇವೆ ಪಡೆಯಲು ಮುಂದಾದರು.
ತಮ್ಮನ್ನು ಆ ವಿನ್ಯಾಸಕಿ ಪದೇ ಪದೇ ತಲೆ ತಗ್ಗಿಸು ಎಂದು ಹೇಳುತ್ತಿದ್ದುದರಿಂದ ಕನ್ನಡಿ ನೋಡಲು ಆಗುತ್ತಿರಲಿಲ್ಲ. ಕಡೆಗೆ ತನ್ನ ಕೇಶ ವಿನ್ಯಾಸ ನೋಡಿ ತೀವ್ರ ಆಘಾತಕ್ಕೆ ಒಳಗಾದೆ. ತಲೆಯ ತುದಿಯಿಂದ ಕೇವಲ ನಾಲ್ಕು ಇಂಚು ಬಿಟ್ಟು ಉಳಿದೆಲ್ಲಾ ಕೂದಲನ್ನು ಕತ್ತರಿಸಿಹಾಕಲಾಗಿತ್ತು. ಕೂದಲು ತನ್ನ ಭುಜವನ್ನು ತಾಕುತ್ತಲೇ ಇರಲಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದರು.
ಈ ಬಗ್ಗೆ ಸಲೂನ್ ವ್ಯವಸ್ಥಾಪಕರಿಗೆ ಆಕೆ ದೂರು ನೀಡಿದರು. ದೂರಿನ ಬಳಿಕ ಉಚಿತವಾಗಿ ಕೇಶಚಿಕಿತ್ಸೆ ನಡೆಸುವುದಾಗಿ ಹೋಟೆಲ್‌ನವರು ಹೇಳಿದರು. ಆಗ ಒಲ್ಲದ ಮನಸ್ಸಿನಿಂದಲೇ ಆಶ್ನಾ ಒಪ್ಪಿಗೆ ಸೂಚಿಸಿದರು.
ತಾವು ರೂಢಿಯಂತೆ ಕೇಶ ವಿನ್ಯಾಸ ಮಾಡಿಕೊಳ್ಳುವ ಸ್ಟೈಲಿಸ್ಟ್ ಮೇಲ್ವಿಚಾರಣೆಯಲ್ಲಿ; ತರಬೇತುಪಡೆದ, ಪರಿಣತರಾದ ಸಲೂನಿನ ಮತ್ತೊಬ್ಬ ಕೇಶ ವಿನ್ಯಾಸಕಿ ಕೇಶಚಿಕಿತ್ಸೆ ನೀಡಲಿದ್ದಾರೆ ಎಂದು ಅಶ್ನಾ ಅವರಿಗೆ ತಿಳಿಸಲಾಯಿತು. ಆದರೆ ಚಿಕಿತ್ಸೆ ವೇಳೆ ಬಳಸಿದ ಅಧಿಕ ಅಮೋನಿಯಾದಿಂದಾಗಿ ಮತ್ತು ವಿನ್ಯಾಸದ ವಿಧಾನದಿಂದಾಗಿ ಕೂದಲು ಮತ್ತು ನೆತ್ತಿ ಹಾನಿಗೊಳಗಾಗಿ ಮತ್ತಷ್ಟು ಕಿರಿಕಿರಿಯಾಯಿತು ಎಂದು ಆಶ್ನಾ ದೂರಿದರು. ಚಿಕಿತ್ಸೆ ಬಳಿಕ ಕೂದಲ ತುರಿಕೆ ಉಂಟಾಯಿತು. ಸುಟ್ಟ ನೆತ್ತಿ ಒರಟಾಗಿ ಕಾಣತೊಡಗಿತು. ಈ ವಿಚಾರದಲ್ಲಿ ಹೋಟೆಲ್ ಸಿಬ್ಬಂದಿಯ ಸಹಾಯ ಪಡೆಯಲು ಯತ್ನಿಸಿದರೂ ತನಗೆ ನಿಂದನೀಯ ಪದ ಬಳಸಿ ಬೆದರಿಕೆ ಹಾಕಲಾಯಿತು ಎಂದು ಆಶ್ನಾ ತಿಳಿಸಿದರು. ತಮಗೆ ಉಂಟಾದ ಸೇವಾ ದೋಷ, ಕಿರುಕುಳ, ಅವಮಾನ ಹಾಗೂ ಮಾನಸಿಕ ಆಘಾತದ ಕಾರಣಕ್ಕೆ ₹ 3 ಕೋಟಿ ಪರಿಹಾರ ನೀಡಬೇಕು. ಜೊತೆಗೆ ಐಟಿಸಿ ವ್ಯವಸ್ಥಾಪಕ ಮಂಡಳಿ ಕ್ಷಮೆ ಯಾಚಿಸಬೇಕು ಎಂದು ಆಶ್ನಾ ಕೋರಿದ್ದರು.
“ಆಶ್ನಾ ಅವರ ಸೂಚನೆಗಳಿಗೆ ವಿರುದ್ಧವಾಗಿ ಸಲೂನ್ ಕೇಶ ವಿನ್ಯಾಸದ ವೇಳೆ ಕೂದಲು ಕತ್ತರಿಸಿದ್ದರಿಂದಾಗಿ ಆಕೆ ಅನೇಕ ಅವಕಾಶಗಳಿಂದ ವಂಚಿತರಾಗಿ ದೊಡ್ಡ ನಷ್ಟ ಅನುಭವಿಸಿದರು. ಅವರ ಜೀವನಶೈಲಿ ಬದಲಾಗಿ ಅತ್ಯುತ್ತಮ ರೂಪದರ್ಶಿ ಆಗಬೇಕೆಂಬ ಆಕೆಯ ಕನಸು ಛಿದ್ರಗೊಂಡಿತು” ಎಂದು 2021ರ ಸೆಪ್ಟೆಂಬರ್‌ನಲ್ಲಿ ಎನ್‌ಸಿಡಿಆರ್‌ಸಿ ತೀರ್ಪು ನೀಡಿತು. ಈ ಕಾರಣಕ್ಕೆ ಅವರಿಗೆ ₹ 2 ಕೋಟಿ ಪರಿಹಾರ ನೀಡುವಂತೆ ಆದೇಶಿಸಿತ್ತು. ಕೇಶಚಿಕಿತ್ಸೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಐಟಿಸಿ ಹೋಟೆಲ್ ಕೂಡ ತಪ್ಪಿತಸ್ಥ ಎಂದು ಅದು ಘೋಷಿಸಿತು. ಇದನ್ನು ಪ್ರಶ್ನಿಸಿ ಐಟಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಕಳೆದ ಫೆಬ್ರುವರಿಯಲ್ಲಿ ಪರಿಹಾರ ಕುರಿತಂತೆ ಹೊಸದಾಗಿ ಆದೇಶ ನೀಡುವಂತೆ ಸೂಚಿಸಿ ಪ್ರಕರಣವನ್ನು ಸುಪ್ರೀಂ ಕೋರ್ಟ್ ಎನ್‌ಸಿಡಿಆರ್‌ಸಿಗೆ ರವಾನಿಸಿತ್ತು. ಪುರಾವೆಗಳ ಆಧಾರದ ಮೇಲೆ ಪರಿಹಾರದ ಮೊತ್ತ ನಿರ್ಧರಿಸಬೇಕೇ ವಿನಾ ಗ್ರಾಹಕರು ಕೋರಿದ ಪರಿಹಾರ ಆಧರಿಸಿ ಅಲ್ಲ ಎಂದು ಅದು ಹೇಳಿತ್ತು,
ಎನ್‌ಸಿಡಿಆರ್‌ಸಿ ನೀಡಿರುವ ಈಗಿನ ಆದೇಶದಲ್ಲಿ ಐಟಿಸಿ ಹೋಟೆಲ್ ಸೇವೆಯಲ್ಲಿನ ನ್ಯೂನತೆಯನ್ನು ಸುಪ್ರೀಂ ಕೋರ್ಟ್ ದೃಢಿಕರಿಸಿದ್ದು ಅಂತಿಮತೆಯನ್ನು ಸಾಧಿಸಿದೆ ಎಂದು ಅದು ಹೇಳಿದೆ.