ಬ್ಯಾಂಕ್‌ ಖಾತೆಗಳನ್ನು ಜಫ್ತಿ ಮಾಡಿರುವ ಇ ಡಿ ಆದೇಶ ಪ್ರಶ್ನಿಸಿರುವ ಶಓಮಿ ಅರ್ಜಿ ಆತುರದ್ದು: ಹೈಕೋರ್ಟ್‌

ಶಓಮಿ ಇಂಡಿಯಾ ಎತ್ತಿರುವ ಆಕ್ಷೇಪಗಳನ್ನು ಫೇಮಾ ಅಡಿ 60 ದಿನಗಳಲ್ಲಿ ನಿರ್ಧರಿಸುವಂತೆ ಸಕ್ಷಮ ಪ್ರಾಧಿಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.
Xiaomi India, enforcement directorate and Karnataka HC
Xiaomi India, enforcement directorate and Karnataka HC

ಜಾರಿ ನಿರ್ದೇಶನಾಲಯವು ತನ್ನ ಬ್ಯಾಂಕ್‌ ಖಾತೆಗಳಲ್ಲಿನ ₹5,551.27 ಕೋಟಿ ಮೊತ್ತ ಹಣವನ್ನು ಜಫ್ತಿ ಮಾಡಿರುವ ಆದೇಶವನ್ನು ಪ್ರಶ್ನಿಸಿ ಚೀನಾದ ಶಓಮಿ ತಂತ್ರಜ್ಞಾನ ಸಂಸ್ಥೆಯು ಸಲ್ಲಿಸಿರುವ ಮನವಿಯು ಆತುರದ್ದಾಗಿದೆ ಎಂದು ಈಚೆಗೆ ಕರ್ನಾಟಕ ಹೈಕೋರ್ಟ್‌ ಆದೇಶ ಮಾಡಿದೆ.

ಜಾರಿ ನಿರ್ದೇಶನಾಲಯದ ಆದೇಶ ಪ್ರಶ್ನಿಸಿ ಶಓಮಿ ಸಲ್ಲಿಸಿರುವ ಮನವಿಯ ವಿಚಾರಣೆ ನಡೆಸಿ ಜೂನ್‌ 16ರಂದು ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಸ್‌ ಜಿ ಪಂಡಿತ್ ಅವರ ನೇತೃತ್ವದ ಏಕಸದಸ್ಯ ಪೀಠವು ಪ್ರಕಟಿಸಿದೆ. ಇ ಡಿಯ ನಿರ್ಬಂಧ ಆದೇಶಕ್ಕೆ ಪ್ರತಿಯಾಗಿ ಕಂಪೆನಿಗೆ ಯಾವುದೇ ಪರ್ಯಾಯ ಹಾದಿ ಇಲ್ಲದಿದ್ದರೂ ಮನವಿಯು ಅವಸರದಿಂದ ಕೂಡಿದೆ ಎಂದು ಪೀಠ ಹೇಳಿದೆ.

“ಶಓಮಿ ಖಾತೆ ಜಫ್ತಿ ಆದೇಶ ಮಾಡಿರುವ ಅಧಿಕಾರಿಯು ಕಾಯಿದೆಯ ಅನ್ವಯ 30 ದಿನಗಳಲ್ಲಿ ಸದರಿ ಆದೇಶವನ್ನು ಸಕ್ಷಮ ಪ್ರಾಧಿಕಾರದ ಮುಂದೆ ಇಡಬೇಕು. ಭಾದಿತರಿಗೆ ಅವಕಾಶ ಮಾಡಿಕೊಟ್ಟು, ಸಕ್ಷಮ ಪ್ರಾಧಿಕಾರವು 180 ದಿನಗಳಲ್ಲಿ ಈ ಸಂಬಂಧ ನಿರ್ಧಾರ ಕೈಗೊಳ್ಳಬೇಕು. ಈ ಆದೇಶವನ್ನು ಮೇಲ್ಮನವಿ ನ್ಯಾಯ ಮಂಡಳಿಯ ಮುಂದೆ ಪ್ರಶ್ನಿಸಬಹುದಾಗಿದೆ” ಎಂದು ಪೀಠ ಆದೇಶದಲ್ಲಿ ಹೇಳಿದೆ.

‍“ಅಧಿಕೃತ ಅಧಿಕಾರಿಯು ಹೊರಡಿಸಿರುವ ಜಫ್ತಿ ಆದೇಶವು ಅಂತಿಮವಲ್ಲ. ಜಫ್ತಿ ಆದೇಶವನ್ನು ಖಾತರಿಗೊಳಿಸುವುದಕ್ಕೂ ಮುನ್ನ ಅರ್ಜಿದಾರರು ತಮ್ಮ ವಾದ ಮಂಡಿಸಲು ಒಂದು ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಭಾರತದಲ್ಲಿ ಮಾರಾಟ ಮಾಡಲಾಗುವ ಮೊಬೈಲ್‌ಗಳಿಗೆ ಸಂಬಂಧಿಸಿದಂತೆ ಮತ್ತು ಇತರೆ ಪರವಾನಗಿ ಹೊಂದಿರುವ ಎಸ್‌ಇಪಿ (ಪ್ರಮಾಣಿತ ಅಗತ್ಯ ಪೇಟೆಂಟ್‌ಗಳು) ಬಳಕೆಗೆ ಸಂಬಂಧಿಸಿದಂತೆ ಕ್ವಾಲ್ಕಾಂ ಮತ್ತು ಬೀಜಿಂಗ್‌ ಶಓಮಿ ಸಾಫ್ಟ್‌ವೇರ್‌ ಕಂಪೆನಿ ಲಿಮಿಟೆಡ್‌ಗೆ ರಾಜಧನ ಪಾವತಿಸಲಾಗಿದೆ ಎಂಬುದನ್ನು ಅರ್ಜಿದಾರರು ಸಕ್ಷಮ ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಡಬಹುದಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಶಓಮಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಜ್ಜನ್‌ ಪೂವಯ್ಯ ಮತ್ತು ವಕೀಲ ಆದಿತ್ಯ ವಿಕ್ರಮ್‌ ಭಟ್‌ ಅವರು “ವಿದೇಶದಲ್ಲಿರುವ ಕ್ವಾಲ್ಕಾಂ ಮತ್ತು ಬೀಜಿಂಗ್‌ ಶಓಮಿ ಸಾಫ್ಟ್‌ವೇರ್‌ ಕಂಪೆನಿ ಲಿಮಿಟೆಡ್‌ಗೆ ರಾಜಧನ ಪಾವತಿಸಿರುವುದು ಫೇಮಾದ ಸೆಕ್ಷನ್‌ 4ರ ಉಲ್ಲಂಘನೆಯಲ್ಲ. ಆದಾಯ ತೆರಿಗೆ ಇಲಾಖೆಯು ಹಣ ಪಾವತಿಯನ್ನು ಕಾನೂನುಬದ್ಧ ಎಂದು ಪರಿಗಣಿಸಿದ್ದು, ಇದನ್ನು ಕಡಿತ (ಡಿಡಕ್ಷನ್) ಎಂದು ಆದಾಯ ತೆರಿಗೆ ಇಲಾಖೆ ಗಣನೆಗೆ ತೆಗೆದುಕೊಂಡಿದೆ“ ಎಂದು ವಾದಿಸಿದ್ದರು.

ಮುಂದುವರಿದು, “2015-16ರಿಂದ ಇಲ್ಲಿಯವರೆಗೆ ಅಧಿಕೃತ ಡೀಲರ್‌ಗಳ ಮೂಲಕವೇ ರಾಜಧನ ಪಾವತಿಸಲಾಗಿದೆ. ಭಾರತದ ಹೊರಗೆ ಕಂಪೆನಿಯು ವಿದೇಶಿ ವಿನಿಮಯದಲ್ಲಿ ತೊಡಗಿದೆ ಎಂಬುದನ್ನು ತೋರಿಸಲು ಯಾವುದೇ ಸಾಕ್ಷಿ ಇಲ್ಲ. ಹೀಗಾಗಿ, ಫೆಮಾದ ಸೆಕ್ಷನ್‌ 37ಎ ಅಡಿ ಜಾರಿ ನಿರ್ದೇಶನಾಲಯವು ಅಧಿಕಾರ ಬಳಸಿ ಮಾಡಿರುವ ಆದೇಶವು ಅಸಮರ್ಥನೀಯ” ಎಂದು ಶಓಮಿ ವಾದಿಸಿತ್ತು.

“ಕಂಪೆನಿಯ ಖಾತೆಗಳನ್ನು ಜಫ್ತಿ ಮಾಡಿರುವುದರಿಂದ ಉದ್ಯಮಕ್ಕೆ ಹೊಡೆತ ಬಿದ್ದಿದ್ದು, ಉದ್ಯೋಗಿಗಳಿಗೆ ವೇತನ ಮತ್ತು ಸಂಬಳ ಪಾವತಿಸಲು ಅಡ್ಡಿಯಾಗಿದೆ. ಜಾರಿ ನಿರ್ದೇಶನಾಲಯದ ಜಫ್ತಿ ಆದೇಶದಿಂದ ತನ್ನ ನಾಗರಿಕ ಹಕ್ಕುಗಳ ನಾಶವಾಗಿದೆ (ಸಿವಿಲ್‌ ಡೆತ್‌) ಕೊಂಡೊಯ್ದಿದೆ. ಕಾಯಿದೆಯ ಅಡಿ ಮೇಲ್ಮನವಿ ನ್ಯಾಯ ಮಂಡಳಿಯು ಸಿಬ್ಬಂದಿಯ ಕೊರತೆಯಿಂದ ಕಾರ್ಯನಿರ್ವಹಿಸುತ್ತಿಲ್ಲವಾದ್ದರಿಂದ ಹೈಕೋರ್ಟ್‌ ಕದ ತಟ್ಟಲಾಗಿದೆ” ಎಂದು ಶಓಮಿ ವಾದಿಸಿತ್ತು.

ಜಾರಿ ನಿರ್ದೇಶನಾಲಯವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಂ ಬಿ ನರಗುಂದ್‌ ಅವರು “ಫೇಮಾದ ಸೆಕ್ಷನ್‌ 37ಎ ಅಡಿ ಪರ್ಯಾಯ ಪರಿಹಾರ ಇರುವುದರಿಂದ ಶಓಮಿ ಮನವಿಯು ಅವಧಿಪೂರ್ವವಾಗಿದೆ. ಚೀನಾದ ಕಂಪೆನಿ ಅಥವಾ ಕ್ವಾಲ್ಕಾಂನ ಬೌದ್ಧಿಕ ಆಸ್ತಿಯನ್ನು ಬಳಕೆ ಮಾಡದಿರುವುದರಿಂದ ಶಓಮಿಯು ಅದಕ್ಕಾಗಿ ರಾಜಧನ ಪಾವತಿಸಬೇಕಿಲ್ಲ. ಹೀಗಾಗಿ, ಶಓಮಿಯು ಎರಡು ಕಂಪೆನಿಗಳಿಗೆ ವರ್ಗಾಯಿಸಿರುವ ಹಣವು ಫೇಮಾ ಸೆಕ್ಷನ್‌ 4ರ ಉಲ್ಲಂಘನೆಯಾಗಿದೆ. ಆದ್ದರಿಂದ ಫೇಮಾ ಸೆಕ್ಷನ್‌ 37ಎ ಅಡಿ ಜಾರಿ ನಿರ್ದೇಶನಾಲಯ ಜರುಗಿಸಿರುವ ಪ್ರಕ್ರಿಯೆ ವ್ಯಾಪ್ತಿಯನ್ನು ಶಓಮಿ ಪ್ರಶ್ನಿಸಲಾಗದು “ಎಂದಿದ್ದರು.

ಕಾಯಿದೆಯ ಅನ್ವಯ ಜಫ್ತಿ ಆದೇಶ ಮಾಡಿರುವ ಜಾರಿ ನಿರ್ದೇಶನಾಲಯದ ವ್ಯಾಪ್ತಿಯ ವಿಚಾರವನ್ನು ಸಕ್ಷಮ ಪ್ರಾಧಿಕಾರ ನಿರ್ಧರಿಸಬೇಕು. ಸಕ್ಷಮ ಪ್ರಾಧಿಕಾರದ ಮುಂದೆ ಈಗಾಗಲೇ ಜಫ್ತಿ ಆದೇಶ ಇಟ್ಟಿರುವುದರಿಂದ ಈ ಆದೇಶ ಮಾಡಿದ 60 ದಿನಗಳ ಒಳಗೆ ಪ್ರಕರಣವನ್ನು ಇತ್ಯರ್ಥಪಡಿಸುವಂತೆ ಆದೇಶಿಸಿದೆ.

Also Read
ಶಓಮಿ ಬ್ಯಾಂಕ್‌ ಖಾತೆ ನಿರ್ಬಂಧಿಸಿ ಜಾರಿ ನಿರ್ದೇಶನಾಲಯದ ಆದೇಶ: ತೀರ್ಪು ಕಾಯ್ದಿರಿಸಿದ ಕರ್ನಾಟಕ ಹೈಕೋರ್ಟ್

ಶಓಮಿ ದೈನಂದಿನ ಚಟುವಟಿಕೆಗಳನ್ನು ನಡೆಸಲು ಜಫ್ತಿ ಮಾಡಿರುವ ಬ್ಯಾಂಕ್‌ ಖಾತೆಗಳಿಂದ ಹಣ ಬಳಸಬಹುದಾಗಿದೆ ಎಂದು ಈ ಹಿಂದೆ ತಾನು ನೀಡಿರುವ ಮಧ್ಯಂತರ ಆದೇಶವು ಸಕ್ಷಮ ಪ್ರಾಧಿಕಾರ ಆದೇಶ ಮಾಡುವವರೆಗೆ ಅಸ್ತಿತ್ವದಲ್ಲಿರಲಿದೆ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಬ್ಯಾಂಕ್‌ ಖಾತೆಗಳನ್ನು ನಿರ್ಬಂಧಿಸಿ ಜಾರಿ ನಿರ್ದೇಶನಾಲಯವು ಹೊರಡಿಸಿದ್ದ ತಾತ್ಕಾಲಿಕ ಜಫ್ತಿ ಆದೇಶವನ್ನು ಶಓಮಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ವಿದೇಶಿ ಕಂಪೆನಿಗಳಿಗೆ ಕಾನೂನುಬಾಹಿರವಾಗಿ ಹಣ ಸಂದಾಯ ಮಾಡುವ ಮೂಲಕ ಶಓಮಿಯು ವಿದೇಶಿ ವಿನಿಯಮ ನಿರ್ವಹಣಾ ಕಾಯಿದೆ (ಫೇಮಾ) ನಿಬಂಧನೆಗಳನ್ನು ಉಲ್ಲಂಘಿಸಿದೆ ಎಂದು ಇ ಡಿ ಆದೇಶದಲ್ಲಿ ಹೇಳಿದೆ.

Related Stories

No stories found.
Kannada Bar & Bench
kannada.barandbench.com