ಸ್ಪರ್ಧಾ ಕಾಯಿದೆ-2002ಕ್ಕೆ ತಿದ್ದುಪಡಿ ಮಾಡುವ ಸ್ಪರ್ಧಾ (ತಿದ್ದುಪಡಿ) ಮಸೂದೆ- 2022ನ್ನು ರಾಜ್ಯಸಭೆ ಸೋಮವಾರ ಅಂಗೀಕರಿಸಿದೆ. ಲೋಕಸಭೆಯಲ್ಲಿ ಅಂಗೀಕಾರಕ್ಕೂ ಮುನ್ನ ಪರಿಶೀಲನೆಗಾಗಿ ಮಸೂದೆಯನ್ನು ಜಯಂತ್ ಸಿನ್ಹಾ ನೇತೃತ್ವದ ಹಣಕಾಸು ಸಂಸದೀಯ ಸ್ಥಾಯಿ ಸಮಿತಿಗೆ ಕಳುಹಿಸಿಕೊಡಲಾಗಿತ್ತು.
ವ್ಯವಹಾರಗಳ ಮೌಲ್ಯದ ಆಧಾರದ ಮೇಲೆ ವಿಲೀನಗಳು ಮತ್ತು ಸ್ವಾಧೀನಗಳನ್ನು ನಿಯಂತ್ರಿಸಲು ಸ್ಪರ್ಧಾ ಕಾಯಿದೆಗೆ ತಿದ್ದುಪಡಿ ಮಾಡುತ್ತದೆ ಮಸೂದೆ. ₹2,000 ಕೋಟಿಗಿಂತ ಹೆಚ್ಚಿನ ವಹಿವಾಟು ಮೌಲ್ಯದ ವ್ಯವಹಾರಗಳಿಗೆ ಭಾರತೀಯ ಸ್ಪರ್ಧಾ ಆಯೋಗದ (CCI) ಅನುಮೋದನೆ ಅಗತ್ಯವಿರುತ್ತದೆ. ಅಂತಹ ವಹಿವಾಟುಗಳಿಗೆ ಆದೇಶ ನೀಡಲು CCIಗೆ ನೀಡಿದ್ದ ಕಾಲಾವಕಾಶವನ್ನು 210 ದಿನಗಳಿಂದ 150 ದಿನಗಳಿಗೆ ಇಳಿಸಲು ಮಸೂದೆ ಸೂಚಿಸುತ್ತದೆ.
ಅಲ್ಲದೆ ಸ್ಪರ್ಧಾ-ವಿರೋಧಿ ಒಪ್ಪಂದಗಳಲ್ಲಿ ತೊಡಗಿಸಿಕೊಂಡಿದೆ ಎಂದು ಪರಿಗಣಿಸಬಹುದಾದ ಸಂಸ್ಥೆಗಳ ವ್ಯಾಪ್ತಿಯನ್ನು ವಿಸ್ತರಿಸುವ ಗುರಿ ತಿದ್ದುಪಡಿ ಕಾಯಿದೆಗೆ ಇದೆ. ಪ್ರಸ್ತುತ, ಒಂದೇ ರೀತಿಯ ಉದ್ಯಮಗಳು ಅಥವಾ ಕ್ಷೇತ್ರಗಳಲ್ಲಿನ ವ್ಯಕ್ತಿಗಳನ್ನು ಮಾಡಿಕೊಂಡ ಒಪ್ಪಂದಗಳು ಮಾತ್ರ ಇದರ ವ್ಯಾಪ್ತಿಗೆ ಒಳಪಡುತ್ತಿದ್ದು, ತಿದ್ದುಪಡಿ ಕಾಯಿದೆಯ ಅನ್ವಯ ವಿಭಿನ್ನ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು ಅಥವಾ ವ್ಯಕ್ತಿಗಳನ್ನು ಒಳಗೊಳ್ಳುವ ಉದ್ದೇಶ ಇದರದ್ದಾಗಿದೆ.
ಇತ್ಯರ್ಥ ಮತ್ತು ಬದ್ಧತೆಯ ಮೂಲಕ ತ್ವರಿತವಾಗಿ ತನಿಖೆ ನಡೆಸಲು ಕೂಡ ಮಸೂದೆ ಚೌಕಟ್ಟು ಒದಗಿಸುತ್ತದೆ. ಸ್ಪರ್ಧಾ ಕಾಯಿದೆಯಡಿಯಲ್ಲಿ ಗುರುತಿಸಲಾದ ಕೆಲ ಅಪರಾಧಗಳನ್ನು ಸಿವಿಲ್ ಶಿಕ್ಷೆ , ದಂಡಗಳಾಗಿ ಪರಿವರ್ತಿಸಿ ನಿರಪರಾಧೀಕರಿಸಲು ಮಸೂದೆ ಯತ್ನಿಸುತ್ತದೆ. ಸ್ಪರ್ಧಾ-ವಿರೋಧಿ ಒಪ್ಪಂದಗಳಿಗೆ ಸಂಬಂಧಿಸಿದ ಮತ್ತು ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡದಕ್ಕೆ ಸಂಬಂಧಿಸಿದಂತೆ ಸಿಸಿಐ ನೀಡಿದ್ದ ಆದೇಶ ಹಾಗೂ ಮಹಾ ನಿರ್ದೇಶಕರು ನೀಡಿದ್ದ ನಿರ್ದೇಶನಗಳನ್ನು ಪಾಲಿಸಲು ವಿಫಲವಾದದ್ದಕ್ಕೆ ಸಂಬಂಧಿಸಿದ ಅಪರಾಧಗಳು ಅಂಗೀಕೃತ ಮಸೂದೆಯಡಿ ಮೂಲಕ ಅಪರಾಧ ಎನಿಸಿಕೊಳ್ಳುವುದಿಲ್ಲ.