ಪೊಲೀಸರ ಆರೋಗ್ಯ ತಪಾಸಣೆಗೆ ಸಮಗ್ರ ಯೋಜನೆಗೆ ಮನವಿ: ಸಂಬಂಧಿತ ಇಲಾಖೆಗಳಿಗೆ ಗಮಹರಿಸಲು ಹೈಕೋರ್ಟ್‌ ಸೂಚನೆ

ವರ್ಷಕ್ಕೊಮ್ಮೆ ಕಡ್ಡಾಯವಾಗಿ ತಜ್ಞ ವೈದ್ಯರು ಪೊಲೀಸರ ಆರೋಗ್ಯ ತಪಾಸಣೆ ನಡೆಸಬೇಕು. ಪೊಲೀಸ್ ಸಿಬ್ಬಂದಿ, ಅಧಿಕಾರಿಗಳ ವಿರುದ್ಧದ ಇಲಾಖಾ ವಿಚಾರಣೆ, ಭ್ರಷ್ಟಾಚಾರ ಆರೋಪಗಳ ಪಟ್ಟಿಯನ್ನು ಪ್ರತಿ ತಿಂಗಳು ಪ್ರಕಟಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
Karnataka High Court
Karnataka High Court
Published on

ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಪೊಲೀಸರ ಆರೋಗ್ಯ ತಪಾಸಣೆಗೆ ಸಮಗ್ರ ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಇತ್ಯರ್ಥಪಡಿಸಿದೆ.

ಬೆಂಗಳೂರಿನ ಬಸವೇಶ್ವರನಗರದ ನಿವಾಸಿ ಎನ್‌ ಲೀಲಾವತಿ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠವು ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿರುವ ವಿಷಯ ಹಾಗೂ ಮನವಿಗಳು ಗಂಭೀರವಾಗಿವೆ. ಈ ಕುರಿತು ಸರ್ಕಾರದ ಸಂಬಂಧಪಟ್ಟ ಇಲಾಖೆಗಳು/ ಪ್ರಾಧಿಕಾರಗಳು ಗಮನಿಸಬೇಕು. ಅದಕ್ಕಾಗಿ ನ್ಯಾಯಾಲಯ ಪ್ರತ್ಯೇಕ ಆದೇಶ ಹೊರಡಿಸುವ ಅಗತ್ಯವಿಲ್ಲ. ಒಂದೊಮ್ಮೆ ಅರ್ಜಿದಾರರ ಮನವಿಗಳ ಬಗ್ಗೆ ಸಂಬಂಧಟ್ಟ ಇಲಾಖೆ/ಪ್ರಾಧಿಕಾರಗಳು ಗಮನಹರಿಸದಿದ್ದರೆ, ನಂತರ ಈ ಕುರಿತು ಮನವಿಯನ್ನು ಸರ್ಕಾರ ಪರಿಗಣಿಸಬಹುದು ಎಂದು ಅಭಿಪ್ರಾಯಪಟ್ಟು ಅರ್ಜಿ ಇತ್ಯರ್ಥಪಡಿಸಿದೆ.

ರಾಜ್ಯದಲ್ಲಿ ಪೊಲೀಸರು ಬೊಜ್ಜು ಹಾಗೂ ಕಡಿಮೆ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬಹುತೇಕ ಪೊಲೀಸರು ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ, ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಪೊಲೀಸರ ದೈಹಿಕ ಹಾಗೂ ಮಾನಸಿಕ ಕ್ಷಮತೆ ಕುರಿತು ತಪಾಸಣೆ ನಡೆಸಲು ಸಮಗ್ರ ಯೋಜನೆ ಜಾರಿಗೆ ತರಬೇಕು. ಆ ಯೋಜನೆಯಡಿ ವರ್ಷಕ್ಕೊಮ್ಮೆ ಕಡ್ಡಾಯವಾಗಿ ತಜ್ಞ ವೈದ್ಯರು ಪೊಲೀಸರ ಆರೋಗ್ಯ ತಪಾಸಣೆ ನಡೆಸಬೇಕು. ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳ ವಿರುದ್ಧದ ಇಲಾಖಾ ವಿಚಾರಣೆ, ಭ್ರಷ್ಟಾಚಾರ ಆರೋಪಗಳ ಪಟ್ಟಿಯನ್ನು ಪ್ರತಿ ತಿಂಗಳು ಪ್ರಕಟಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

Kannada Bar & Bench
kannada.barandbench.com