

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ – ಸ್ನಾತಕೋತ್ತರ (ನೀಟ್- ಪಿಜಿ) ಪರೀಕ್ಷೆಗಳ ಅರ್ಹತಾ ಕಟ್-ಆಫ್ ಶೇಕಡಾವಾರು ಅಂಕದ ಮಾನದಂಡ ಕಡಿಮೆ ಮಾಡುವ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಶುಕ್ರವಾರ ಆಲಿಸಿದ ಸುಪ್ರೀಂ ಕೋರ್ಟ್ ಈ ಸಂಬಂಧ ಕೇಂದ್ರ ಸರ್ಕಾರ ವಿವರವಾದ ಅಫಿಡವಿಟ್ ಸಲ್ಲಿಸುವಂತೆ ತಾಕೀತು ಮಾಡಿದೆ [ಹರಿಶರಣ್ ದೇವಗನ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಈ ವಿಚಾರ ಮಾನದಂಡಗಳ ವಿಚಾರಕ್ಕೆ ಸಂಬಂಧಿಸಿದೆ ಎಂದು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಅಲೋಕ್ ಅರಾಧೆ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು.
“ಇದು ಮಾನದಂಡಗಳ ವಿಷಯ. ಆ ಮಾನದಂಡಗಳನ್ನು ರಾಜಿಗೊಳಪಡಿಸಲಾಗಿದೆಯೇ ಎಂಬುದೇ ಪ್ರಶ್ನೆ" ಎಂದು ಕೋರ್ಟ್ ಹೇಳಿತು.
ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಐಶ್ವರ್ಯ ಭಾಟಿ ಅವರು, ಈ ಪ್ರಕರಣವು ಸ್ನಾತಕೋತ್ತರ ಸೀಟುಗಳಿಗೆ ಸಂಬಂಧಿಸಿದ್ದು, ಇಲ್ಲಿ ಎಲ್ಲ ಅಭ್ಯರ್ಥಿಗಳೂ ವೈದ್ಯರೇ ಆಗಿದ್ದಾರೆ ಎಂದು ವಾದ ಮಂಡಿಸಿದರು.
ಈ ಹಂತದಲ್ಲಿ ವೈದ್ಯರ ಅಂಕ ಗಳಿಕೆಯನ್ನು ನೋಡಿ ಪೀಠ ಅಚ್ಚರಿ ವ್ಯಕ್ತಪಡಿಸಿತು. “ಈ ವಿಧಾನವನ್ನು ಏಕೆ ಅಳವಡಿಸಲಾಯಿತು ಎಂಬುದನ್ನು ನೋಡಿ ನಾವು ಆಘಾತಗೊಂಡೆವು. ಇವರೆಲ್ಲರೂ ನಿಯಮಿತವಾಗಿ ಕಾರ್ಯನಿರ್ವಹಿಸುವ ವೈದ್ಯರೇ ಆಗಿದ್ದಾರೆ,” ಎಂದು ಪೀಠ ಹೇಳಿತು.
ಇದಕ್ಕೆ ಪ್ರತಿಕ್ರಿಯಿಸಿದ ವಕೀಲರು, ಯಾವುದೇ ಸೀಟು ವ್ಯರ್ಥವಾಗಬಾರದೆಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಅರ್ಹತಾ ಪರ್ಸೆಂಟೈಲ್ ಕಟ್-ಆಫ್ ಕಡಿತಗೊಳಿಸುವ ನಿರ್ಧಾರವನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ನಿರ್ದೇಶನಗಳಂತೆ ತೆಗೆದುಕೊಳ್ಳಲಾಗಿದೆ ಎಂದು ಜನವರಿ 13ರಂದು ಹೊರಡಿಸಿದ ಅಧಿಸೂಚನೆಯಲ್ಲಿ, ನ್ಯಾಷನಲ್ ಬೋರ್ಡ್ ಆಫ್ ಎಗ್ಜಾಮಿನೇಷನ್ಸ್ ಇನ್ ಮೆಡಿಕಲ್ ಸೈನ್ಸಸ್ (ಎನ್‌ಬಿಇಎಂಎಸ್) ತಿಳಿಸಿತು.
ಪುನರ್‌ಪರಿಷ್ಕೃತ ಮಾನದಂಡಗಳ ಪ್ರಕಾರ, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕಟ್-ಆಫ್ ಅಂಕಗಳು 103 ಆಗಿದ್ದು, ಇದಕ್ಕೂ ಮೊದಲು 276 ಅಂಕ ಇತ್ತು. ಎಸ್‌ಸಿ, ಎಸ್‌ಟಿ, ಒಬಿಸಿ ವರ್ಗದವರಿಗೆ ಇದು ಮೈನಸ್ 40 ಆಗಿದ್ದು, ಹಿಂದಿನ ಅಂಕ 235 ಆಗಿತ್ತು.
ಸುಪ್ರೀಂ ಕೋರ್ಟ್ ಮುಂದೆ ಸಲ್ಲಿಸಲಾದ ಅರ್ಜಿ ಈ ಅಧಿಸೂಚನೆಯನ್ನು ಪ್ರಶ್ನಿಸಿದ್ದು ಸರ್ಕಾರದ ಈ ನಿರ್ಧಾರ ಯಾವುದೇ ಸ್ಪಷ್ಟ ಅರ್ಹತೆ (ಮೆರಿಟ್) ಇಲ್ಲದ ಅಭ್ಯರ್ಥಿಗಳಿಗೂ ಸ್ನಾತಕೋತ್ತರ ವೈದ್ಯಕೀಯ ಪ್ರವೇಶಕ್ಕೆ ಅವಕಾಶ ನೀಡುತ್ತದೆ.
ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣದಲ್ಲಿ ಕನಿಷ್ಠ ಅರ್ಹತಾ ಮಾನದಂಡಗಳನ್ನು ಕಡಿತಗೊಳಿಸುವುದು ಏಕಪಕ್ಷೀಯ (ಅನಿಯಮಿತ), ಅಸಾಂವಿಧಾನಿಕವಾಗಿದ್ದು, ಸಂವಿಧಾನದ ಕಲಂ 14 (ಸಮಾನತೆಯ ಹಕ್ಕು ಹಾಗೂ ಏಕಪಕ್ಷೀಯತೆ ಮತ್ತು ಭೇದಭಾವದ ವಿರುದ್ಧದ ಹಕ್ಕು) ಮತ್ತು ಕಲಂ 21 (ಜೀವನದ ಹಕ್ಕು) ಅನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿ ವಾದಿಸುತ್ತದೆ.
ಹೀಗೆ ಮಾನದಂಡಗಳಲ್ಲಿ ರಾಜಿ ಮಾಡಿಕೊಂಡಿರುವುದು ರೋಗಿಗಳ ಸುರಕ್ಷತೆ ಹಾಗೂ ಸಾರ್ವಜನಿಕ ಆರೋಗ್ಯದ ಮೇಲೆ ನೇರ ಮತ್ತು ನಿರೀಕ್ಷಿತ ಅಪಾಯವನ್ನುಂಟುಮಾಡುತ್ತದೆ. ಸ್ನಾತಕೋತ್ತರ ಪ್ರವೇಶಗಳಲ್ಲಿ ಅಂಕಗಳನ್ನು ಸಡಿಲಗೊಳಿಸುವಂತಿಲ್ಲ; ಅಪರೂಪದ ಸಂದರ್ಭಗಳಲ್ಲಿ ಮಾತ್ರ, ಅದೂ ಸಹ 5–6 ಪರ್ಸೆಂಟೈಲ್‌ಗಳ ಸೀಮಿತ ಮಟ್ಟಕ್ಕೆ ಮಾತ್ರ ಅವಕಾಶ ಇದೆ ಎಂದು ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ವಾದಿಸಿದರು.
“ನಿಯಮವು ಕನಿಷ್ಠ ಅರ್ಹತಾ ಮಾನದಂಡವನ್ನು ಶೇ 50 ಎಂದು ಸ್ಪಷ್ಟವಾಗಿ ಹೇಳುತ್ತದೆ. ಅದು ಅತಿ ಹೆಚ್ಚು ಅಂಕಗಳನ್ನು ಪಡೆದವರನ್ನು ಆಧರಿಸಿ ನಿರ್ಧರಿಸಬೇಕು. ನೀವು ನೇರವಾಗಿ ಶೇಕಡಾ ಮೈನಸ್ 40ರಷ್ಟು ಇಳಿಸುವಂತಿಲ್ಲ” ಎಂದು ವಾದಿಸಿದರು.
ಪದವಿ ಮತ್ತು ಸ್ನಾತಕೋತ್ತರ ಸೀಟುಗಳ ನಡುವೆ ವ್ಯತ್ಯಾಸವಿದೆ ಎಂದು ಎಎಸ್‌ಜಿ ಭಾಟಿ ವಾದಿಸಿದಾಗ, ಶಂಕರ್‌ನಾರಾಯಣನ್ ಅವರು ಪ್ರೀತಿ ಶ್ರೀವಾಸ್ತವ ಪ್ರಕರಣದಲ್ಲಿ ನೀಡಲಾದ ತೀರ್ಪು ಉನ್ನತ ಶಿಕ್ಷಣ ಹಂತದಲ್ಲಿನ ವಿವಿಧ ಮಾನದಂಡಗಳನ್ನು ಅನ್ವಯಿಸಬೇಕು” ಎಂದರು.
ನಂತರ ಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ವಿವರವಾದ ಅಫಿಡವಿಟ್ ಸಲ್ಲಿಸುವಂತೆ ನಿರ್ದೇಶಿಸಿತು.