ಮಾನ್ಯತೆ ನವೀಕರಣಕ್ಕೆ ಕಟ್ಟಡ, ಅಗ್ನಿ ಸುರಕ್ಷತಾ ಪ್ರಮಾಣಪತ್ರ ಕಡ್ಡಾಯ: ಆದೇಶಕ್ಕೆ ತಡೆ ನೀಡಲು ಹೈಕೋರ್ಟ್‌ ನಕಾರ

“ಯಾವ ಕಟ್ಟಡಗಳಲ್ಲಿ ಸರ್ಕಾರದ ಸುತ್ತೋಲೆ ಮತ್ತು ಏಕಸದಸ್ಯ ಪೀಠದ ಆದೇಶವನ್ನು ಜಾರಿ ಮಾಡಲಾಗುವುದಿಲ್ಲ ಎಂಬ ವಿವರವನ್ನು ಸಂಘದ ಸದಸ್ಯರ ಸಹಿ ಹೊಂದಿರುವಂತಹ ವಿವರವಾದ ಅಫಿಡವಿಟ್‌ ಸಲ್ಲಿಸಬೇಕು” ಎಂದು ಆದೇಶಿಸಿದ ವಿಭಾಗೀಯ ಪೀಠ.
High Court of Karnataka
High Court of Karnataka
Published on

ಖಾಸಗಿ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಶಾಲಾ ಕಟ್ಟಡದ ಸುರಕ್ಷತೆ ಪ್ರಮಾಣ ಪತ್ರ, ನಕ್ಷೆ ಅನುಮೋದನೆ ಮತ್ತು ಅಗ್ನಿ ಸುರಕ್ಷತಾ ಪ್ರಮಾಣ ಪತ್ರ ಕಡ್ಡಾಯಗೊಳಿಸಿದ್ದ ಸರ್ಕಾರದ ಕ್ರಮ ಎತ್ತಿಹಿಡಿದ್ದ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ಸೋಮವಾರ ನಿರಾಕರಿಸಿದೆ. ಅಲ್ಲದೇ, ಅನುದಾನರಹಿತ ಮಾನ್ಯತೆ ಪಡೆದ ಶಾಲೆಗಳ ಸಂಘದ ಅಧೀನದ ಎಷ್ಟು ಶಾಲೆಗಳಿಗೆ ಏಕಸದಸ್ಯ ಪೀಠದ ಆದೇಶ ಜಾರಿ ಮಾಡಲಾಗುವುದಿಲ್ಲ ಎಂಬುದರ ಕುರಿತ ವಿವರವಾದ ಅಫಿಡವಿಟ್‌ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ.

ಸರ್ಕಾರದ ಸುತ್ತೋಲೆ ಎತ್ತಿಹಿಡಿದ್ದ ಏಕ ಸದಸ್ಯ ಪೀಠದ ಕ್ರಮ ಪ್ರಶ್ನಿಸಿ ಅನುದಾನ ರಹಿತ ಮಾನ್ಯತೆ ಪಡೆದ ಶಾಲೆಗಳ ಸಂಘದ ಕಾರ್ಯದರ್ಶಿ ಪ್ರಭಾಕರ ಅರಸ್ ಮತ್ತಿತರರು ಸಲ್ಲಿಸಿರುವ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

“ಯಾವ ಕಟ್ಟಡಗಳಲ್ಲಿ ಸರ್ಕಾರದ ಸುತ್ತೋಲೆ ಮತ್ತು ಏಕಸದಸ್ಯ ಪೀಠದ ಆದೇಶವನ್ನು ಜಾರಿ ಮಾಡಲಾಗುವುದಿಲ್ಲ ಎಂಬ ವಿವರವನ್ನು ಸಂಘದ ಸದಸ್ಯರ ಸಹಿ ಹೊಂದಿರುವಂತಹ ವಿವರವಾದ ಅಫಿಡವಿಟ್‌ ಸಲ್ಲಿಸಬೇಕು” ಎಂದು ಅರ್ಜಿದಾರರ ಪರ ವಕೀಲರಿಗೆ ನಿರ್ದೇಶಿಸಿ, ವಿಚಾರಣೆಯನ್ನು ಒಂದು ತಿಂಗಳು ನ್ಯಾಯಾಲಯ ಮುಂದೂಡಿತು.

ಅರ್ಜಿದಾರರ ಪರ ವಕೀಲರು “ಸುಪ್ರೀಂ ಕೋರ್ಟ್‌ ಆದೇಶದಂತೆ ಶಾಲೆಗಳ ಮಾನ್ಯತೆ ನವೀಕರಣ ಮಾಡುವುದಕ್ಕೆ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವ ಕುರಿತಂತೆ ಸಂಬಂಧಪಟ್ಟ ಪ್ರಾಧಿಕಾರದಿಂದ ಅಫಿಡವಿಟ್‌ ಪಡೆದುಕೊಂಡಿರಬೇಕು. ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ವಿಭಾಗ ನಿಗದಿಪಡಿಸಿರುವ ಕಟ್ಟಡಗಳ ಸುರಕ್ಷತೆಯ ಮಾರ್ಗಸೂಚಿಗಳ ಅಡಿಯಲ್ಲಿ ಅಗ್ನಿ ಸುರಕ್ಷತಾ ಪ್ರಮಾಣ ಪತ್ರ ಹೊಂದಿರಬೇಕು ಎಂದು ಸರ್ಕಾರ (ಶಿಕ್ಷಣ ಇಲಾಖೆ) ಸುತ್ತೋಲೆ ಹೊರಡಿಸಿತ್ತು. ಈ ಸುತ್ತೋಲೆಯ ಪ್ರಕಾರ ಶಾಲೆಗಳ ಮಾನ್ಯತೆಯನ್ನು ನವೀಕರಣ ಮಾಡುವ ಸಂದರ್ಭದಲ್ಲಿ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯವಾಗಿದ್ದು, ಇದು ಕರ್ನಾಟಕ ಶಿಕ್ಷಣ ಕಾಯಿದೆಯ ಸೆಕ್ಷನ್‌ 145ಕ್ಕೆ ವಿರುದ್ದವಾಗಿದೆ. ಅರ್ಜಿದಾರ ಸಂಘಟನೆಯಲ್ಲಿ ಸದಸ್ಯರಾಗಿರುವ ಅನೇಕ ಶಾಲೆಗಳು ಹಲವು ವರ್ಷಗಳಿಂದ ಕಾರ್ಯಚರಣೆ ಮಾಡುತ್ತಿವೆ” ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠವು “ಹಲವು ವರ್ಷಗಳಿಂದ ಶಾಲೆಗಳು ಕಾರ್ಯಚರಣೆ ಮಾಡುತ್ತಿವೆ ಎಂದ ಮಾತ್ರಕ್ಕೆ ಆ ಶಾಲೆಗಳಲ್ಲಿ ಅಧ್ಯಯನ ಮಾಡುವ ಮಕ್ಕಳ ಸುರಕ್ಷತೆ ಕಲ್ಪಿಸುವುದು ಬೇಡ ಎನ್ನಲಾಗುವುದೇ” ಎಂದು ಪ್ರಶ್ನಿಸಿತು.

ಇದಕ್ಕೆ ಅರ್ಜಿದಾರರ ಪರ ವಕೀಲರು “ಮಕ್ಕಳ ಸುರಕ್ಷತೆ ಅಗತ್ಯ. ಆದರೆ, ಅದಕ್ಕೆ ಕಾನೂನಿನ ರಚನೆ, ಉದ್ದೇಶಗಳ ಚೌಕಟ್ಟಿನಲ್ಲಿ ಅದು ಇರಬೇಕು. ಕರ್ನಾಟಕ ಶಿಕ್ಷಣ ಕಾಯಿದೆಯಲ್ಲಿ ಸುತ್ತೋಲೆ ಹೊರಡಿಸಲು ಅವಕಾಶವಿಲ್ಲ” ಎಂದರು.

ಆಗ ಪೀಠವು “ಹಾಗೆಂದರೆ ಹೇಗೆ? ಸುಪ್ರೀಂ ಕೋರ್ಟ್‌ ಆದೇಶದಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ” ಎಂದಿತು.

ಅದಕ್ಕೆ ಅರ್ಜಿದಾರರ ಪರ ವಕೀಲರು “ಸುಪ್ರೀಂ ಕೋರ್ಟ್‌ ಆದೇಶವಿದೆ. ಆದರೆ, ಅಗ್ನಿ ಸುರಕ್ಷತೆಗೆ ಕಟ್ಟಡದ ಮೇಲೆ ಸಿಮೆಂಟ್‌ನಿಂದ ನಿರ್ಮಿಸಲ್ಪಡುವ ನೀರಿನ ಟ್ಯಾಂಕ್‌ ಇರಬೇಕು ಎನ್ನಲಾಗಿದೆ. ಆದರೆ, ಸರ್ಕಾರ ಹೊರಡಿಸಿರುವ  ಸುತ್ತೋಲೆಯ ಪ್ರಕಾರ ಪ್ರಸ್ತುತ ಇರುವ ಇಡೀ ಕಟ್ಟಡವನ್ನೇ ನೆಲಸಮ ಮಾಡಬೇಕಾಗುತ್ತದೆ. ಅಲ್ಲದೆ, ಮಾಹಿತಿ ಹಕ್ಕು ಕಾಯಿದೆಯಡಿ ಪರಿಶೀಲಿಸಿದಾಗ ಯಾವುದೇ ಸರ್ಕಾರಿ ಶಾಲೆಗಳಲ್ಲಿ ಅಗ್ನಿ ಸುರಕ್ಷತಾ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಲಾಗಿದೆ” ಎಂದರು.

ಆಗ ಪೀಠವು “ಸರ್ಕಾರಿ ಶಾಲೆಗಳ ವಿಚಾರ ಪ್ರತ್ಯೇಕವಾಗಿರಲಿ. ಅರ್ಜಿದಾರರ ಸಂಘಟಕರಾಗಿದ್ದಾರೆ. ನೀವು ಯಾವ ಕಟ್ಟಡಗಳಿಗೆ ಅಗ್ನಿ ಸುರಕ್ಷತಾ ಕ್ರಮ ಕೈಗೊಳ್ಳಲಾಗಿಲ್ಲ ಎಂಬುದಕ್ಕೆ ಸಂಬಂಧಿಸಿದಂತೆ ಸಂಘದ ಸದಸ್ಯರ ಸಹಿಯೊಂದಿಗೆ ಅಫಿಡವಿಟ್‌ ಸಲ್ಲಿಸಬೇಕು. ಆದರೆ, ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಲು ಸಾಧ್ಯವಿಲ್ಲ” ಎಂದು ತಿಳಿಸಿ ವಿಚಾರಣೆ ಮುಂದೂಡಿತು.

Also Read
ಮಾನ್ಯತೆ ನವೀಕರಣಕ್ಕೆ ಕಟ್ಟಡ, ಅಗ್ನಿ ಸುರಕ್ಷತಾ ಪ್ರಮಾಣಪತ್ರ ಕಡ್ಡಾಯ: ಮುಂದಿನ ವರ್ಷದವರೆಗೆ ಸಮಯ ನೀಡಿದ ಹೈಕೋರ್ಟ್‌

ಪ್ರಕರಣದ ಹಿನ್ನೆಲೆ: ರಾಜ್ಯ ಸರ್ಕಾರ 2022ರ ಜೂನ್‌ 6ರಂದು ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಸುತ್ತೋಲೆ ಹೊರಡಿಸಿ, ಪ್ರಸ್ತುತ ಕಾರ್ಯಾಚರಣೆ ಮಾಡುತ್ತಿರುವ ಎಲ್ಲ ಖಾಸಗಿ ಶಾಲೆಗಳು ಮಾನ್ಯತೆ ನವೀಕರಣಕ್ಕಾಗಿ ಅರ್ಜಿ ಸಲ್ಲಿಸುವಾಗ ಅಗ್ನಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿರುವ ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಎಂದು ನಿರ್ದೇಶನ ನೀಡಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರ ಸಂಘಟನೆ ಸೇರಿದಂತೆ ಮತ್ತಿತರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸರ್ಕಾರದ ಸುತ್ತೋಲೆಯನ್ನು ಏಕಸದಸ್ಯ ಪೀಠ ಎತ್ತಿಹಿಡಿದಿತ್ತು.

ಅಲ್ಲದೆ, ರಾಜ್ಯದಲ್ಲಿ ಖಾಸಗಿ ಶಾಲೆಗಳೂ ಸೇರಿದಂತೆ ಎಲ್ಲಾ ಶಾಲೆಗಳು ಕಟ್ಟಡ ಸುರಕ್ಷತಾ ಮತ್ತು ಅಗ್ನಿ ಸುರಕ್ಷತಾ ನಿಯಮಗಳ ಪಾಲನೆಯ ಬಗ್ಗೆ ವಿವರಗಳನ್ನು ಅಪ್ಲೋಡ್ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಆರು ವಾರಗಳಲ್ಲಿ ಒಂದು ಪೋರ್ಟಲ್ ಅಭಿವೃದ್ಧಿಪಡಿಸಬೇಕು ಎಂದು 2024ರ ಡಿಸೆಂಬರ್‌ 2ರಂದು ಆದೇಶ ನೀಡಿತ್ತು. ಜೊತೆಗೆ, ಸರ್ಕಾರಿ ಶಾಲೆಗಳಿಗೂ ಈ ಆದೇಶ ಅನ್ವಯವಾಗಲಿದೆ ಎಂದು ಆದೇಶದಲ್ಲಿ ತಿಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಇದೀಗ ಅರ್ಜಿದಾರರ ಸಂಘಟನೆ ಹೈಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದೆ.

Kannada Bar & Bench
kannada.barandbench.com