ಪದವಿ ಹಂತದಲ್ಲಿ ಕನ್ನಡ ಕಡ್ಡಾಯ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿರುವುದಕ್ಕೆ ಸಂಬಂಧಿಸಿದಂತೆ ಬುಧವಾರ ನಡೆಯಲಿರುವ ಅಂತಿಮ ವಿಚಾರಣೆಯಲ್ಲಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ವಾದ ಮಂಡಿಸಲಿದ್ದಾರೆ ಎಂಬ ಸರ್ಕಾರದ ವಕೀಲರ ಹೇಳಿಕೆಯನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ತನ್ನ ಆದೇಶದಲ್ಲಿ ದಾಖಲಿಸಿಕೊಂಡಿತು.
ಪದವಿ ಹಂತದಲ್ಲಿ ಭಾಷೆಯಾಗಿ ಕನ್ನಡ ಕಡ್ಡಾಯ ಕಲಿಕೆಯ ಆದೇಶವನ್ನು ವಿರೋಧಿಸಿ ಸಂಸ್ಕೃತ ಭಾರತಿ (ಕರ್ನಾಟಕ) ಟ್ರಸ್ಟ್, ಮಹಾವಿದ್ಯಾಲಯ ಸಂಸ್ಕೃತ ಪ್ರಾಧ್ಯಾಪಕ ಸಂಘ, ಶ್ರೀ ಹಯಗ್ರೀವಾ ಟ್ರಸ್ಟ್, ವ್ಯೋಮಾ ಲಿಂಗ್ವಿಸ್ಟಿಕ್ ಲ್ಯಾಬ್ಸ್ ಫೌಂಡೇಶನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿ ಮತ್ತು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡಿರುವ ಭಾಷೆಯನ್ನು ಅಧ್ಯಯನ ಮುಂದುವರಿಸಲು ಸ್ವತಂತ್ರರು ಎಂದು ಆದೇಶ ಮಾಡಬೇಕು ಎಂದು ಕೋರಿ ಶಿವಕುಮಾರ್ ಕೆ ಜಿ ಸೇರಿದಂತೆ ಆರು ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
ವಿಚಾರಣೆ ಆರಂಭವಾಗುತ್ತಿದ್ದಂತೆ ವಿದ್ಯಾರ್ಥಿಗಳ ಪರ ವಕೀಲ ಶ್ರೀಧರ್ ಪ್ರಭು ಅವರು “ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (ಎನ್‌ಇಪಿ) ಯಾವುದೇ ಭಾಷೆಯನ್ನು ಕಡ್ಡಾಯ ಮಾಡಬೇಕು ಎಂದು ಹೇಳಿಲ್ಲ. ವಿದ್ಯಾರ್ಥಿಗಳ ಭವಿಷ್ಯ ಅಡಕತ್ತರಿಗೆ ಸಿಲುಕಿದೆ. ನ್ಯಾಯಾಲಯ ವಿದ್ಯಾರ್ಥಿಗಳ ಇಷ್ಟದ ಭಾಷೆ ಅಧ್ಯಯನಕ್ಕೆ ಅವಕಾಶ ಮಾಡಿಕೊಡದಿದ್ದರೆ ಮತ್ತೆ ಅವರಿಗೆ ತೀವ್ರ ಸಮಸ್ಯೆಯಾಗಲಿದೆ. ಬೇಸಿಗೆ ರಜೆಯ ಬದಲಿಗೆ ಒಂದು ವರ್ಷದ ಬಳಿಕವೂ ಪ್ರಕರಣವನ್ನು ಆಲಿಸಬಹುದು. ಸರ್ಕಾರದ ಈ ನಡೆ ಸರಿಯಲ್ಲ. ಪ್ರತಿಬಾರಿಯೂ ಪ್ರಕರಣವನ್ನು ಮುಂದೂಡುವಂತೆ ಕೇಳಲಾಗುತ್ತಿದೆ” ಎಂದು ಆಕ್ಷೇಪಿಸಿದರು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲರು “ಕನ್ನಡ ಕಡ್ಡಾಯ ವಿಚಾರದ ಕುರಿತು ಚರ್ಚೆ ನಡೆಯುತ್ತಿದೆ. ನಾವು ಈ ಸಂಬಂಧ ನಿಲುವು ತೆಗೆದುಕೊಳ್ಳಲಾಗುತ್ತಿಲ್ಲ. ಬೇಸಿಗೆ ರಜೆ ಅದ ಮೇಲೆ ಪ್ರಕರಣವನ್ನು ಆಲಿಸಬೇಕು” ಎಂದು ಮನವಿ ಮಾಡಿದರು.
ಮುಖ್ಯ ನ್ಯಾಯಮೂರ್ತಿ ಅವಸ್ಥಿ ಅವರು “ಮೊದಲನೇ ದಿನದಿಂದಲೂ ನಾವು ಕನ್ನಡ ಕಡ್ಡಾಯವನ್ನು ಮರು ಪರಿಗಣನೆ ಮಾಡಿ ಎಂದು ಸರ್ಕಾರಕ್ಕೆ ಹೇಳುತ್ತಿದ್ದೇವೆ. ಎನ್‌ಇಪಿ ಜಾರಿಗೆ ಜೊತೆಗೆ ನೀವು ಕನ್ನಡ ಕಡ್ಡಾಯ ಮಾಡಿದ್ದೀರಿ. ಎನ್‌ಇಪಿಯಲ್ಲಿ ಪ್ರಾದೇಶಿಕ ಭಾಷೆ ಕಡ್ಡಾಯಗೊಳಿಸುವುದರ ಸಂಬಂಧ ನಾವು ಕೇಂದ್ರ ಸರ್ಕಾರದ ನಿಲುವನ್ನು ಕೇಳಿದ್ದೆವು. ಈಗ ಅವರು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಅಡ್ವೊಕೇಟ್ ಜನರಲ್ ವಾದವನ್ನು ಮಧ್ಯಂತರ ಆದೇಶದಲ್ಲಿ ನಾವು ಪರಿಗಣಿಸಿದ್ದೇವೆ. ಕನ್ನಡವನ್ನು ಕಡ್ಡಾಯಗೊಳಿಸುವಂತಿಲ್ಲ ಎಂದು ಮಧ್ಯಂತರ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಈಗ ಕನ್ನಡ ಕಡ್ಡಾಯ ಮಾಡುವಂತಿಲ್ಲ ಎಂದು ರಾಜ್ಯ ಸರ್ಕಾರವನ್ನು ನಾವು ನಿರ್ಬಂಧಿಸುತ್ತೇವೆ. ಕೇಂದ್ರ ಸರ್ಕಾರದ ನಿಲುವನ್ನು ಆಧರಿಸಿ, ಎನ್‌ಇಪಿ ಅಡಿ ಕನ್ನಡ ಕಡ್ಡಾಯ ಮಾಡುವಂತಿಲ್ಲ ಎಂದು ನಾವು ಹೇಳುತ್ತೇವೆ. ಹೀಗೆ ಮಾಡುವುದರಿಂದ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಯಾವುದೇ ಗೊಂದಲಗಳಾಗುವುದಿಲ್ಲ” ಎಂದರು.
ನ್ಯಾಯಮೂರ್ತಿ ಕೃಷ್ಣ ಕುಮಾರ್ ಅವರು “ಕೇಂದ್ರ ಸರ್ಕಾರ ತಮ್ಮ ನಿಲುವು ಸ್ಪಷ್ಟಪಡಿಸಿದೆ. ಅಡ್ವೊಕೇಟ್ ಜನರಲ್ ಅವರು ತಮ್ಮ ವಾದ ಮಂಡಿಸಿದ್ದಾರೆ. ಕೇಂದ್ರ ಸರ್ಕಾರವು ತನ್ನ ನಿಲುವು ಸ್ಪಷ್ಟಪಡಿಸಿರುವಾಗ ಇನ್ನೇನು ಉಳಿಯುತ್ತದೆ? ರಾಜ್ಯ ಸರ್ಕಾರದ ಆದೇಶಗಳು ಕೇಂದ್ರ ಸರ್ಕಾರದ ನಿಲುವಿಗೆ ವಿರುದ್ಧವಾಗಿವೆ. ಹೀಗಾಗಿ, ಆಕ್ಷೇಪಿತ ಆದೇಶಗಳನ್ನು ತಡೆಹಿಡಿಯಲಾಗಿದೆ ಎಂದು ಆದೇಶದಲ್ಲಿ ಹೇಳಲಾಗುವುದು” ಎಂದರು. ಆಗ ಸರ್ಕಾರದ ವಕೀಲರು ನಾಳೆ ಅಡ್ವೊಕೇಟ್ ಜನರಲ್ ವಾದ ಮಂಡಿಸಲಿದ್ದಾರೆ. ಹಾಗಾಗಿ, ಏನೂ ಆದೇಶ ಮಾಡಬೇಡಿ ಎಂದು ಕೋರಿದರು. ಇದಕ್ಕೆ ಪೀಠವು ಸಮ್ಮತಿಸಿ, ವಿಚಾರಣೆ ಮುಂದೂಡಿತು.