ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್ "ಕಾವೇರಿ ಕಾಲಿಂಗ್" ಯೋಜನೆಯನ್ನು ಸರ್ಕಾರಿ ಯೋಜನೆ ಎಂದು ಬಿಂಬಿಸುವ ಮೂಲಕ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಿದೆಯೇ ಅಥವಾ ಇಲ್ಲವೇ ಎನ್ನುವುದನ್ನು ತಿಳಿಯಲು ತನಿಖೆಯು ಅಗತ್ಯವಾಗಬಹುದು ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ.
ಕಾವೇರಿ ಕಾಲಿಂಗ್ ಸರ್ಕಾರಿ ಯೋಜನೆಯಲ್ಲ ಎಂಬುದರ ಕುರಿತು ತನ್ನ ವೆಬ್‌ಸೈಟ್‌ನಲ್ಲಿ ಸ್ಪಷ್ಟೀಕರಣ ನೀಡಿರುವುದಾಗಿ ಇಶಾ ಔಟ್‌ರೀಚ್ ಮಾಹಿತಿ ನೀಡಿದ ಬೆನ್ನಿಗೇ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ಎಸ್ ಎಸ್ ಮಗದುಮ್ ಅವರಿದ್ದ ವಿಭಾಗೀಯ ಪೀಠವು ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿತು.
“ಕಾವೇರಿ ಕಾಲಿಂಗ್ ಯೋಜನೆಯು ಇಶಾ ಔಟ್‌ರೀಚ್‌ನ ಕಾರ್ಯಕ್ರಮವಾಗಿದ್ದು, ಇದು ಕರ್ನಾಟಕ ಸರ್ಕಾರದ ಯೋಜನೆಯಲ್ಲ. ಕಾವೇರಿ ಕಾಲಿಂಗ್ ಯೋಜನೆಯ ಭಾಗವಾಗಿ ರೈತರಿಗೆ ಸೇರಿದ ಜಾಗದಲ್ಲಿ ಸಸಿಗಳನ್ನು ನೆಡಲಾಗುತ್ತಿದೆಯೇ ವಿನಾ ಸರ್ಕಾರದ ಭೂಮಿಯಲ್ಲಿ ಅಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ” ಎಂದು ಹೇಳಲಾಗಿದೆ.
“ವೆಬ್‌ಸೈಟ್‌ನಲ್ಲಿ ಪ್ರಮುಖವಾಗಿ ಸ್ಪಷ್ಟೀಕರಣ ಕಾಣುತ್ತಿಲ್ಲ” ಎಂದು ಪೀಠ ಹೇಳಿದ್ದು, ಪೂರ್ಣ ತೃಪ್ತಿಯನ್ನು ವ್ಯಕ್ತಪಡಿಸಿಲ್ಲ. “ವೆಬ್‌ಸೈಟ್‌ನಲ್ಲಿ ಹೇಗೆ ಪ್ರಕಟಿಸಲಾಗಿದೆ ನೋಡಿ... ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಿತ್ತು” ಎಂದು ಪೀಠವು ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ರೀತಿಗೆ ಅಸಮಾಧಾನ ವ್ಯಕ್ತಪಡಿಸಿತು.
ಕಾವೇರಿ ಕಾಲಿಂಗ್ ಯೋಜನೆಗೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸದಂತೆ ಇಶಾ ಫೌಂಡೇಶನ್ ಜಗ್ಗಿ ವಾಸುದೇವ್‌ಗೆ ನಿರ್ದೇಶಿಸುವಂತೆ ಕೋರಿದ್ದ ಮನವಿಯ ವಿಚಾರಣೆಯನ್ನು ಪೀಠ ನಡೆಸಿತು.
ಬತ್ತಿ ಹೋಗಿರುವ ನದಿಗಳನ್ನು ಪುನರುಜ್ಜೀನವಗೊಳಿಸಲು ಯೋಜನೆಯ ಭಾಗವಾಗಿ ಈ ಕ್ರಮಕೈಗೊಳ್ಳಲಾಗುತ್ತಿದೆ. ಯೋಜನೆಯ ಭಾಗವಾಗಿ ಇಶಾ ಫೌಂಡೇಶನ್ ಸರ್ಕಾರಿ ಭೂಮಿಯಲ್ಲಿ ಸಸಿಗಳನ್ನು ನೆಡುತ್ತಿದ್ದು, ಅದಕ್ಕಾಗಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುತ್ತಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ಯೋಜನೆಯ ಲಾಭ-ನಷ್ಟಗಳನ್ನು ಅಧ್ಯಯನ ಮಾಡದೇ ತನ್ನ ಭೂಮಿಯಲ್ಲಿ ಸಸಿಗಳನ್ನು ನೆಡಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಸಾರ್ವಜನಿಕರಿಂದ ದೇಣಿಗೆ ಸಂಗ್ರಹವು ಆತಂಕಕಾರಿಯಾಗಿದ್ದು, ₹10,626 ಕೋಟಿಯನ್ನು ಇಶಾ ಫೌಂಡೇಶನ್ ಸಂಗ್ರಹಿಸುವ ಉದ್ದೇಶ ಹೊಂದಿದೆ ಎಂದು ಮನವಿಯಲ್ಲಿ ಹೇಳಲಾಗಿದೆ. ಕಾವೇರಿ ಕಾಲಿಂಗ್ ಯೋಜನೆಯ ಕುರಿತು ತನ್ನ ನಿಲುವನ್ನು ಅಧಿಕೃತವಾಗಿ ಸಲ್ಲಿಸಲು ಕಾಲಾವಕಾಶ ನೀಡುವಂತೆ ಮಂಗಳವಾರ ಸರ್ಕಾರದ ಪರ ವಕೀಲರು ಕೋರಿದರು. ಮಾರ್ಚ್ 8ಕ್ಕೆ ವಿಚಾರಣೆ ಮುಂದೂಡಲಾಗಿದೆ.