ವಿನಯ್‌ ಕುಲಕರ್ಣಿಗೆ ಹಿನ್ನಡೆ: ಧಾರವಾಡ ಪ್ರವೇಶಕ್ಕಿರುವ ನಿರ್ಬಂಧವನ್ನು ತಾತ್ಕಾಲಿಕವಾಗಿ ಸಡಿಲಿಸಲು ಕೋರ್ಟ್ ತಿರಸ್ಕಾರ

ಬಿಜೆಪಿ ಮುಖಂಡ ಯೋಗೀಶ್‌ ಗೌಡ ಅವರನ್ನು 2016ರ ಜೂನ್‌ 15ರಂದು ಕೊಲೆ ಮಾಡಲಾಗಿತ್ತು. ಈ ಪ್ರಕರಣವನ್ನು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಸಿಬಿಐಗೆ ವರ್ಗಾಯಿಸಿತ್ತು. ಇದರಲ್ಲಿ ವಿನಯ್‌ ಕುಲಕರ್ಣಿ ಮೊದಲ ಆರೋಪಿಯಾಗಿದ್ದಾರೆ.
Congress Leader Vinay Kulkarni and Bengaluru City Civil Court
Congress Leader Vinay Kulkarni and Bengaluru City Civil Court

ಧಾರವಾಡದ ಜಿಲ್ಲಾ ಪಂಚಾಯತ್‌ ಸದಸ್ಯ ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಹಾಗೂ ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಧಾರವಾಡದ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ವಿನಯ್‌ ಕುಲಕರ್ಣಿ ಅವರ ಧಾರವಾಡ ಪ್ರವೇಶಕ್ಕೆ ನಿರ್ಬಂಧಿಸಿರುವ ಷರತ್ತನ್ನು 50 ದಿನಗಳವರೆಗೆ ಸಡಿಲಿಕೆ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ತಿರಸ್ಕರಿಸಿದೆ.

ಧಾರವಾಡ ಪ್ರವೇಶಕ್ಕೆ ನಿರ್ಬಂಧ ಸೇರಿ ನಾಲ್ಕು ಷರತ್ತುಗಳನ್ನು ಒಳಗೊಂಡು ವಿನಯ್‌ ಕುಲಕರ್ಣಿ ಅವರಿಗೆ ಜಾಮೀನು ಮಂಜೂರು ಮಾಡುವಂತೆ ಸುಪ್ರೀಂ ಕೋರ್ಟ್‌ ವಿಚಾರಣಾಧೀನ ನ್ಯಾಯಾಲಯವಾದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ನಿರ್ದೇಶಿಸಿತ್ತು. ಇದರ ಅನ್ವಯ 2021ರ ಆಗಸ್ಟ್‌ 19ರಂದು ಕುಲಕರ್ಣಿ ಅವರಿಗೆ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.

ಹೀಗಾಗಿ, ಧಾರವಾಡ ಪ್ರವೇಶಕ್ಕೆ ನಿರ್ಬಂಧಿಸಿರುವುದನ್ನು ವಿಧಾನಸಭೆಯ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಚಾರ ನಡೆಸಲು ಸಡಿಲಿಕೆ ಮಾಡುವಂತೆ ಕೋರಿ ವಿನಯ್‌ ಕುಲಕರ್ಣಿ ಅವರು ಸಿಆರ್‌ಪಿಸಿ ಸೆಕ್ಷನ್‌ 439(1)ರ ಅಡಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿ, ಸೋಮವಾರ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಾಧೀಶರಾದ ಬಿ ಜಯಂತಕುಮಾರ್‌ ಅವರು ಇಂದು ಪ್ರಕಟಿಸಿದರು.

ಬಿಜೆಪಿ ಮುಖಂಡ ಯೋಗೀಶ್‌ ಗೌಡ ಅವರನ್ನು 2016ರ ಜೂನ್‌ 15ರಂದು ಕೊಲೆ ಮಾಡಲಾಗಿತ್ತು. ಈ ಪ್ರಕರಣವನ್ನು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಕೇಂದ್ರೀಯ ತನಿಖಾ ದಳಕ್ಕೆ ವರ್ಗಾಯಿಸಿತ್ತು. ವಿನಯ್‌ ಕುಲಕರ್ಣಿ ಸೇರಿದಂತೆ ಎಂಟು ಮಂದಿಯ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 120ಬಿ, 341, 342 ಮತ್ತು 195ಎ ಅಡಿ ಪ್ರಕರಣ ದಾಖಲಿಸಲಾಗಿದೆ. ವಿನಯ್‌ ಕುಲಕರ್ಣಿ ಪ್ರಕರಣದಲ್ಲಿ ಮೊದಲ ಆರೋಪಿಯಾಗಿದ್ದಾರೆ.

Also Read
ಐಸಿಯುನಲ್ಲಿರುವ ಸಹೋದರಿ ಭೇಟಿ ಮಾಡಲು ವಿನಯ್‌ ಕುಲಕರ್ಣಿಗೆ ಷರತ್ತುಬದ್ಧ ಅನುಮತಿ ನೀಡಿದ ವಿಶೇಷ ನ್ಯಾಯಾಲಯ

ಕುಲಕರ್ಣಿಗೆ ಸುಪ್ರೀಂ ವಿಧಿಸಿದ್ದ ಷರತ್ತುಗಳೇನು?

ತನಿಖೆಗೆ ಅಥವಾ ವಿಚಾರಣೆಗೆ ಯಾವುದೇ ರೀತಿಯ ಅಡ್ಡಿಪಡಿಸಬಾರದು. ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಾಕ್ಷಿಗಳ ಜೊತೆ ಸಂಪರ್ಕ ಸಾಧಿಸುವಂತಿಲ್ಲ ಹಾಗೂ ಅವರ ಮೇಲೆ ಪ್ರಭಾವ ಬೀರುವಂತಿಲ್ಲ. ವಿಚಾರಣಾಧೀನ ನ್ಯಾಯಾಲಯ ಮುಂದಿನ ಆದೇಶ ಮಾಡುವವರೆಗೆ ವಿನಯ್‌ ಕುಲಕರ್ಣಿ ಧಾರವಾಡ ಪ್ರವೇಶಿಸುವಂತಿಲ್ಲ ಹಾಗೂ ಸಿಬಿಐ ಕಚೇರಿಗೆ ವಾರಕ್ಕೆ ಎರಡು ಬಾರಿ ಹಾಜರಾಗಿ ಸಹಿ ಹಾಕಬೇಕು ಎಂಬ ನಾಲ್ಕು ಷರತ್ತುಗಳನ್ನು ಸುಪ್ರೀಂ ಕೋರ್ಟ್‌ ವಿಧಿಸಿತ್ತು.

Kannada Bar & Bench
kannada.barandbench.com