ಆನ್‌ಲೈನ್‌-ಆಫ್‌ಲೈನ್‌ ಬೆಟ್ಟಿಂಗ್‌: ಶಾಸಕ ವೀರೇಂದ್ರ ಮತ್ತೆ 4 ದಿನ ಇ ಡಿ ಕಸ್ಟಡಿಗೆ

ಕಸ್ಟಡಿ ಅವಧಿ ಗುರುವಾರಕ್ಕೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ವೀರೇಂದ್ರ ಅವರನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಅವರ ಮುಂದೆ ಮಧ್ಯಾಹ್ನ ಹಾಜರುಪಡಿಸಲಾಯಿತು.
KC Veerendra
KC Veerendra
Published on

ಆನ್‌ಲೈನ್‌ ಮತ್ತು ಆಫ್‌ಲೈನ್‌ ಬೆಟ್ಟಿಂಗ್‌ ನಡೆಸುತ್ತಿದ್ದ ಅಕ್ರಮ ಚಟುವಟಿಕೆ ಆರೋಪದಡಿ ಸದ್ಯ ಜಾರಿ ನಿರ್ದೇಶನಾಲಯದ (ಇ ಡಿ) ವಶದಲ್ಲಿರುವ ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ಕೆ ಸಿ ವೀರೇಂದ್ರ ಅಲಿಯಾಸ್‌ ವೀರೇಂದ್ರ ಪಪ್ಪಿ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮತ್ತೆ ನಾಲ್ಕು ದಿನಗಳ ಕಾಲ ಇ ಡಿ ಕಸ್ಟಡಿಯಲ್ಲಿ ಮುಂದುವರಿಸಿ ಆದೇಶಿಸಿದೆ.

ಕಸ್ಟಡಿ ಅವಧಿ ಗುರುವಾರಕ್ಕೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ವೀರೇಂದ್ರ ಅವರನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಅವರ ಮುಂದೆ ಮಧ್ಯಾಹ್ನ ಹಾಜರುಪಡಿಸಲಾಯಿತು.

ವಿಚಾರಣೆ ವೇಳೆ ಇ ಡಿ ಪರ ವಿಶೇಷ ಸರ್ಕಾರಿ ಅಭಿಯೋಜಕ ಐ ಎಸ್‌ ಪ್ರಮೋದ್‌ ಚಂದ್ರ ಅವರು “ಆರೋಪಿ ವೀರೇಂದ್ರ ಅವರ ಕಸ್ಟಡಿ ಅವಧಿಯನ್ನು ಪುನಾ 15 ದಿನಗಳ ಕಾಲ ಮುಂದುವರಿಸಿ ಆದೇಶಿಸಬೇಕು” ಎಂದು ಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.

“ನಮಗೆ ಲಭ್ಯವಿರುವ ಡಿಜಿಟಲ್‌ ಸಾಕ್ಷ್ಯ ಮತ್ತು ವೆಬ್‌ಸೈಟ್‌ಗಳಲ್ಲಿ ದೊರಕುತ್ತಿರುವ ಬೆಟ್ಟಿಂಗ್‌ ಪುರಾವೆಗಳ ಬಗ್ಗೆ ವಿವರಣೆ ಪಡೆಯಲು ಆರೋಪಿಯನ್ನು ಮುಖಾಮುಖಿಯಾಗಿ ಇರಿಸಿಕೊಂಡು ವಿಚಾರಣೆ ಮಾಡಬೇಕಿದೆ. ಆದ್ದರಿಂದ, ಕಸ್ಟಡಿ ಅವಧಿ ವಿಸ್ತರಿಸಬೇಕು” ಎಂದು ಮನವಿ ಮಾಡಿದರು.

Also Read
ಪಿಎಂಎಲ್‌ಎ ಅಡಿ ಶಾಸಕ ವೀರೇಂದ್ರ ಪಪ್ಪಿ ಬಂಧನ: ಜಾರಿ ನಿರ್ದೇಶನಾಲಯಕ್ಕೆ ಹೈಕೋರ್ಟ್‌ ನೋಟಿಸ್‌

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವೀರೇಂದ್ರ ಪರ ವಾದಿಸಿದ ಹಿರಿಯ ವಕೀಲರಾದ ಎಚ್‌ ಎಸ್‌ ಚಂದ್ರಮೌಳಿ ಮತ್ತು ಕಿರಣ್ ಜವಳಿ ಅವರು “ಈಗಾಗಲೇ ವೀರೇಂದ್ರ ಅವರು ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದಾರೆ. ಹೀಗಿರುವಾಗ ಅವರನ್ನು ಮತ್ತೆ ಕಸ್ಟಡಿಗೆ ಕೇಳುವುದು ಉಚಿತವಲ್ಲ” ಎಂದು ಪ್ರತಿಪಾದಿಸಿದರು. ಅಂತಿಮವಾಗಿ ನ್ಯಾಯಾಧೀಶರು ಆರೋಪಿಯನ್ನು ಮತ್ತೆ ನಾಲ್ಕು ದಿನಗಳ ಕಾಲ ಇ ಡಿ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದರು.

ವಿಚಾರಣೆ ವೇಳೆ ವೀರೇಂದ್ರ ಅವರನ್ನು ಕೋರ್ಟ್‌ಗೆ ಕರೆತರುವುದು ಕೊಂಚ ತಡವಾಯಿತು. ಈ ವೇಳೆ ವೀರೇಂದ್ರ ನ್ಯಾಯಾಲಯದ ಕೊಠಡಿಯನ್ನು ಪ್ರವೇಶಿಸುವ ಸಂದರ್ಭದಲ್ಲಿ ಚಿತ್ರದುರ್ಗದಿಂದ ಬಂದಿದ್ದ 100ಕ್ಕೂ ಹೆಚ್ಚು ಬೆಂಬಲಿಗರು ಏರುದನಿಯಲ್ಲಿ ಮಾತನಾಡುತ್ತಾ ಗದ್ದಲ ಎಬ್ಬಿಸಿದರು. ಬಿಗಿ ಪೊಲೀಸ್‌ ಬಂದೋಬಸ್ತ್‌ನಲ್ಲಿ ವೀರೇಂದ್ರ ಅವರನ್ನು ಹಾಜರುಪಡಿಸಲಾಯಿತು.

Kannada Bar & Bench
kannada.barandbench.com